ರಾಷ್ಟ್ರೀಯ

ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ; ಸ್ವಾಮಿ ಹೇಳಿಕೆ ಸುಳ್ಳೆಂದ ಕಾಂಗ್ರೆಸ್

Pinterest LinkedIn Tumblr

rahulನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾರತದ ಜತೆಗೆ ಬ್ರಿಟಿಷ್ ಪ್ರಜೆಯೂ ಆಗಿದ್ದಾರೆಂದು ಹೇಳುವ ಮೂಲಕ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ರಾಜಕೀಯ ಕೋಲಾಹಲಕ್ಕೆ ಕಾರಣರಾಗಿದ್ದಾರೆ. ಆದರೆ  ರಾಹುಲ್ ಮೇಲಿನ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಕಾಂಗ್ರೆಸ್ ವಾದಿಸಿದೆ.

ಸ್ವಾಮಿಯವರು ಬಿಡುಗಡೆಗೊಳಿಸಿರುವ ದಾಖಲೆಗಳ ಪ್ರಕಾರ ರಾಹುಲ್  2003ರ ಆಗಸ್ಟ್ 21ರಂದು ರಿಜಿಸ್ಟರ್ ಆಫ್ ಕಂಪನೀಸ್ ಇನ್ ಇಂಗ್ಲೆಂಡ್ ಆಂಡ್ ವೇಲ್ಸ್​ನಲ್ಲಿ ಬ್ಯಾಕ್​ಆಪ್ಸ್ ಕಂಪನಿಯನ್ನು ಆರಂಭಿಸಿದ್ದರು.ಆ ಕಂಪನಿಯ ದಾಖಲೆಗಳಲ್ಲಿ ರಾಹುಲ್ ತಾವು ‘ಬ್ರಿಟಿಷ್ ಪ್ರಜೆ’ ಎಂದು ನಮೂದಿಸಿದ್ದಾರೆ. ಈ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್​ಗೂ ರವಾನಿಸಿರುವ ಸ್ವಾಮಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಸ್ವಾಮಿ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ‘ಹುಟ್ಟಿದ ದಿನದಿಂದ ರಾಹುಲ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಅವರ ಪಾಸ್‌ಪೋರ್ಟ್ ಸಹ ಭಾರತದ್ದಾಗಿದೆ.  ಅವರು ಇನ್ಯಾವುದೇ ದೇಶದ ಪೌರತ್ವವನ್ನು ಪಡೆದಿಲ್ಲ. ಸ್ವಾಮಿ ಆರೋಪ ಸಂಪೂರ್ಣ ಸುಳ್ಳು’, ಎಂದು ಹೇಳಿದ್ದಾರೆ.

ಜತೆಗೆ ರಾಹುಲ್ ಇಂಗ್ಲೆಂಡಿನಲ್ಲಿ ಆರಂಭಿಸಲು ಪ್ರಯತ್ನಿಸಿದ್ದ ಕಂಪನಿಯ ದಾಖಲೆಗಳನ್ನು ಸಹ ಅವರು ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ ರಾಹುಲ್ ಭಾರತೀಯ ಪ್ರಜೆ ಎಂಬುದು ಸ್ಪಷ್ಟವಾಗಿ ನಮೂದಾಗಿದೆ.

‘ಬಿಹಾರ್ ಚುನಾವಣೆ ಸೋಲು ಮತ್ತು ಪಕ್ಷದೊಳಗೆ ಹಿರಿಯ ನಾಯಕರ ದಂಗೆಯಿಂದ ಕಂಗೆಟ್ಟಿರುವ ಬಿಜೆಪಿ ದೇಶವಾಸಿಗಳ ಗಮನವನ್ನು ಬೇರೆಡೆ ತಿರುಗಿಸಲು ತನ್ನ ಕೀಳುಮಟ್ಟದ ತಂತ್ರಗಳನ್ನು ಬಳಸುತ್ತಿದೆ’, ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

Write A Comment