ಕರ್ನಾಟಕ

ಲೋಕಾಯುಕ್ತ ಪದಚ್ಯುತಿಗೆ ಪ್ರಕ್ರಿಯೆ ಆರಂಭ

Pinterest LinkedIn Tumblr

lokaಬೆಂಗಳೂರು, ನ.17-ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರನ್ನು ದುರ್ವರ್ತನೆ ಮತ್ತು ಅಸಾಮರ್ಥ್ಯದ ಆಧಾರದ ಮೇಲೆ ಪದಚ್ಯುತಿಗೊಳಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಇಂದು  ಉಭಯ ಸದನಗಳಲ್ಲೂ ಮನವಿ ಸಲ್ಲಿಸಿದರು. ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಜೆಡಿಎಸ್‌ನ 12 ಹಾಗೂ ಬಿಜೆಪಿಯ 29 ಸದಸ್ಯರ ಸಹಿಯುಳ್ಳ ಪತ್ರವನ್ನು ಸಭಾಪತಿಗಳಿಗೆ ಅವರ ಕಚೇರಿಯಲ್ಲಿಂದು ಸಲ್ಲಿಸಲಾಯಿತು. ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಧಿ ನಿಯಮ 1984 ಹಾಗೂ (ಕರ್ನಾಟಕ ಲೋಕಾ ಯುಕ್ತ ತಿದ್ದುಪಡಿ ವಿಧೇಯಕ 2015) ನಿಯಮ 6(2)ರ ಅಡಿಯಲ್ಲಿ ಲೋಕಾಯುಕ್ತರನ್ನು ಪದಚ್ಯುತಿ ಗೊಳಿಸುವ ಬಗ್ಗೆ ಉಲ್ಲೇಖಿಸಲಾಗಿದ್ದು, ನ್ಯಾಯಾಧೀಶರ ಪದಚ್ಯುತಿ ಅಧಿನಿಯಮ 68ರಲ್ಲಿ ಸೂಚಿಸಿರುವ ವಿಧಾನದ ಮೂಲಕ ಲೋಕಾಯುಕ್ತರನ್ನು ದುರ್ವರ್ತನೆ ಮತ್ತು ಅಸಾಮರ್ಥ್ಯದ ಆಧಾರದ ಮೇಲೆ ಪದಚ್ಯುತಿಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಲೋಕಾಯುಕ್ತ ಸಂಸ್ಥೆ ಬಗ್ಗೆ ಕಳೆದ 4 ತಿಂಗಳ ಬೆಳವಣಿಗೆಯನ್ನು ಗಮನಿಸಿದಲ್ಲಿ ಲೋಕಾಯುಕ್ತರ ಪುತ್ರ ತನ್ನ ಕೆಲವು ಪರಿಚಿತರೊಂದಿಗೆ ಲೋಕಾಯುಕ್ತ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರರಿಗೆ ಬೆದರಿಕೆವೊಡ್ಡುವುದರ ಮೂಲಕ ಕೋಟ್ಯಂತರ ರೂ. ಹಣ ವಸೂಲಿ ಮಾಡಿರುವ ಬಗ್ಗೆ  ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಉಪಲೋಕಾಯುಕ್ತರು ಲೋಕಾಯುಕ್ತ ಎಸ್ಪಿಗೆ ತನಿಖೆ ಮಾಡಲು ಆದೇಶ ನೀಡಿದ್ದು, ತನಿಖೆ ಯಲ್ಲಿ ಹಲವಾರು ಪ್ರತೀಕೂಲ ಅಂಶಗಳು ಕಂಡು ಬಂದಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆ ಲೋಕಾಯುಕ್ತರು ಉಪ ಲೋಕಾಯುಕ್ತರ ತನಿಖಾ ಆದೇಶವನ್ನು ರದ್ದುಪಡಿಸಿ ತನಿಖೆಯನ್ನು ಮುಂದುವರೆಸದಂತೆ ಆದೇಶ ನೀಡಿದ್ದಾರೆ. ತಮ್ಮ ಪುತ್ರನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಶೇಷ ವಿಚಾರಣಾ ತನಿಖಾ ಘಟಕ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದರನ್ವಯ ಲೋಕಾಯುಕ್ತ ಮನವಿಗೆ ಸ್ಪಂದಿಸಿ ಎಸ್‌ಐಟಿ ರಚನೆ ಮಾಡಿದೆ.

ಸಾರ್ವಜನಿಕ ಸಂಸ್ಥೆಗಳು ಹಾಗೂ ರಾಜ್ಯ ವಕೀಲರ ಸಂಘ ಅನೇಕ ಪ್ರತಿಷ್ಠಿತ  ವ್ಯಕ್ತಿಗಳು ಲೋಕಾಯುಕ್ತ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಇದರಿಂದ ಲೋಕಾಯುಕ್ತ ಸಂಸ್ಥೆ ದುರ್ಬಲಗೊಂಡಿರುವುದು ಸಾಬೀತಾಗಿದೆ. ತಮ್ಮ ಮೇಲಿನ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತರಾದ ಭಾಸ್ಕರರಾವ್ ಕಳೆದ 3 ತಿಂಗಳಿಂದ ಖಾಸಗಿ ರಜೆಯ ಮೇಲೆ ತೆರಳಿದ್ದು, ಸಂಪೂರ್ಣ ನಿಷ್ಕ್ರಿಯವಾಗಿರುವ ಸಂಸ್ಥೆ  ಜನತೆಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರಲಾಗಿದೆ. ಲೋಕಾಯುಕ್ತರ ಪುತ್ರ ಅಶ್ವಿನ್‌ರಾವ್ ಎಸ್‌ಐಟಿಯಿಂದ ಬಂಧನಕ್ಕೊಳಗಾಗಿದ್ದು, ನ್ಯಾಯಾಂಗ ತನಿಖೆಗೊಳಪಡಿಸಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕಳೆದ ಅಧಿವೇಶನದಲ್ಲಿ ಲೋಕಾಯುಕ್ತ ಪದಚ್ಯುತಿ ಬಗ್ಗೆ ಮಸೂದೆ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇಂದು ಸದಸ್ಯರು ಸಲ್ಲಿಸಿರುವ ಮನವಿಯನ್ನು ಕಾನೂನು ಅಧಿಕಾರಿಗಳೊಂದಿಗೆ ಚರ್ಚಿಸಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮೂರು ತಿಂಗಳೊಳಗಾಗಿ ಈ ಬಗ್ಗೆ ವರದಿ ನೀಡುವಂತೆ ಪತ್ರ ಬರೆಯಲಾಗುವುದು. ಅಲ್ಲಿಂದ ವರದಿ ಬಂದ ಮೇಲೆ ಅದನ್ನು ಸದನದಲ್ಲಿ ಮಂಡಿಸಿ ಸದನ ಒಪ್ಪಿದರೆ ಲೋಕಾಯುಕ್ತ ಪದಚ್ಯುತಿ  ನಿರ್ಣಯವನ್ನು ರಾಜ್ಯಪಾಲರ ಅಂಕಿತಕ್ಕೆ ಳುಹಿಸಿಕೊಡಲಾಗುವುದು ಎಂದು ಹೇಳಿದರು. ಇನ್ನು ವಿಧಾನಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ತಮ್ಮ ಪಕ್ಷದ 46 ಶಾಸಕರ ಸಹಿಯನ್ನೊಳಗೊಂಡ ಮನವಿ ಪತ್ರವನ್ನು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ , ತಮ್ಮ ಪಕ್ಷದ 37 ಶಾಸಕರ ಸಹಿಯನ್ನು ಒಳಗೊಂಡ ಮನವಿ ಪತ್ರವನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದರು.  ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾ ಯವಿಲ್ಲ. ನಿಷ್ಠೂರವಾಗಿ ನಡೆದುಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರು ಕೂಡ ಬೆಂಬಲ ನೀಡಬೇಕೆಂಬುದು ತಮ್ಮ ಅಪೇಕ್ಷೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Write A Comment