ಕೊಣಾಜೆ, ನ.7: ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನ.2ರಿಂದ 6ರವರೆಗೆ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಸತತ ಎರಡನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಮಂಗಳೂರು ವಿಶ್ವವಿದ್ಯಾ ನಿಲಯವು ಹೈದರಾಬಾದಿನ ಉಸ್ಮಾನಿಯ ವಿ.ವಿ. ಎದುರು 8-0 ಗೋಲುಗಳ ಅಂತರದಿಂದ ಜಯಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿತು.
ಬಳಿಕ ನಡೆದ ಲೀಗ್ ಪಂದ್ಯಾವಳಿಗಳಲ್ಲಿ ಚಿದಂಬರಂನ ಅಣ್ಣಾಮಲೈ ವಿ.ವಿ. ತಂಡವನ್ನು 6-1 ಗೋಲುಗಳಿಂದ, ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ವಿರುದ್ಧ 5-0 ಗೋಲುಗಳಿಂದ ಮತ್ತು ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮೈಸೂರು ವಿಶ್ವವಿದ್ಯಾನಿಲಯ ತಂಡವನ್ನು 2-1 ಗೋಲುಗಳಿಂದ ಮಣಿಸಿದೆ.
ಭಾಗ್ಯಶ್ರೀ ಸಿ.ಎಂ., ವಿಶ್ಮ ಎ.ಎ., ನಿಶಾ ಎನ್.ಎನ್., ಹಿಮಾ ಜರ್ಜ್, ಚೈತ್ರಾ ಕೆ.ಜೆ., ಕಾವೇರಮ್ಮ ಎ.ಎಚ್., ಪೂಜಾ ಎಂ.ಡಿ., ಸ್ವಪ್ನಾ ಎನ್.ಆರ್., ನಿಶಾ ಪಿ.ಸಿ., ರೇಶ್ಮಾ ಬಿ.ಬಿ., ಲಿಪಿತಾ ಡಿ.ಎಂ, ಯಕ್ಷಿತಾ ವಿ.ಆರ್., ಸಂಗೀತಾ, ಜ್ಯೋತಿ, ಅಕ್ಕಮ್ಮ ಕೆ.ಕೆ ಮತ್ತು ಮುಬಿನಾ ಬೇಗಂ ವಿಜೇತ ತಂಡದಲ್ಲಿದ್ದರು.
ತಂಡದ ತರಬೇತುದಾರರಾಗಿ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಹಾಗೂ ವ್ಯವಸ್ಥಾಪಕರಾಗಿ ಟಿ.ಎನ್.ಸೌಮ್ಯಾ ಭಾಗ ವಹಿಸಿದ್ದರು. ಕಳೆದ ವರ್ಷವೂ ಕೂಡಾ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿವಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
