ನಿಶಾ ಕೊಠಾರಿ ಎಂಬ ಗ್ಲಾಮರಸ್ ನಟಿ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಹಾಗಂತ ಅದು ಗ್ಲಾಮರಸ್ ಎಂಟ್ರಿಯಲ್ಲ. ಬದಲಾಗಿ ರಗಡ್ ಆಗಿರುವಂತಹ ಖಾಕಿ ಖದರ್‌ನ ಎಂಟ್ರಿ. ಹೌದು, ನಿಶಾ ಎಂಬ ಗ್ಲಾಮರ್ ಚೆಲುವೆ ಈ ಬಾರಿ “ಬುಲೆಟ್ ರಾಣಿ’ ಎಂಬ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಈ ತಿಂಗಳಾಂತ್ಯದಲ್ಲಿ ಚಿತ್ರ ತೆರೆಗೆ ಬರಲಿದೆ.
ಖಾಕಿ ತೊಟ್ಟು, ಜಬರ್‌ದಸ್ತ್ ಆಗಿ ಪೈಟ್ ಮಾಡಿರುವ ನಿಶಾಗೆ ಈ ಸಿನಿಮಾ ಮೂಲಕ ರಗಡ್ ಕ್ವೀನ್ ಆಗುವ ವಿಶ್ವಾಸವೂ ಇದೆ.
ಕೈಯಲ್ಲಿ ಗನ್ನು, ಖಡಕ್ ಲುಕ್, ಡ್ಯಾಶಿಂಗ್ ಎಂಟ್ರಿ ಎಂದಮೇಲೆ ಇದೊಂದು ಆ್ಯಕ್ಷನ್ ಸಿನಿಮಾ ಎಂದು ಮತ್ತೆ ಹೇಳುವ ಅಗತ್ಯವಿಲ್ಲ. “ಬುಲೆಟ್ ರಾಣಿ’ಯಲ್ಲಿ ದುಷ್ಟರ ಸದೆಬಡಿಯವ ಪಾತ್ರದಲ್ಲಿ ನಿಶಾ ಕೊಠಾರಿ ಕಾಣಿಸಿಕೊಂಡಿದ್ದಾರೆ. ಮಾಫಿಯಾ ನಡೆಯುತ್ತಿರುವ ಜಾಗಕ್ಕೆ ಫೋಸ್ಟಿಂಗ್ ಮೇಲೆ ಹೋಗುವ ನಿಶಾ ಅಲ್ಲಿನ ರೌಡಿಗಳನ್ನು ಹೇಗೆ ಹೊಡೆದುರುಳಿಸುತ್ತಾರೆಂಬುದು ಚಿತ್ರದ ಹೈಲೈಟ್. ಅಂದಹಾಗೆ, ಈ ಚಿತ್ರ ಕನ್ನಡ ಮತ್ತು ತೆಲಗು ಎರಡು ಭಾಷೆಯಲ್ಲಿ ತಯಾರಾಗಿದೆ. ಈ ಚಿತ್ರವನ್ನು ಸಾಜಿತ್ ಖುರೇಶಿ ನಿರ್ದೇಶಿಸಿದ್ದಾರೆ. ಸಲ್ಲಾವುದ್ದೀನ್ ಯೂಸುಫ್ ಈ ಚಿತ್ರಕ್ಕೆ ಹಣ ಹಾಕಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಸಾಜಿತ್ ಖುರೇಷಿ, “ಇದೊಂದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ತೆಲುಗು ಹಾಗೂ ಕನ್ನಡ ಎರಡರಲ್ಲೂ ರೆಡಿಯಾಗಿದೆ. ನಿಶಾ ಕೊಠಾರಿ ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಟೈಗರ್ ಫೈಟ್ ಇದ್ದು, ಇದು ಸಿನಿಮಾದ ಹೈಲೈಟ್’ ಎಂಬುದು ಸಾಜಿತ್ ಮಾತು. ನಿರ್ಮಾಪಕ ಯೂಸುಫ್ ಕೂಡಾ ಚಿತ್ರದ ನಿರ್ಮಾಣದ ಅನುಭವ ಹಾಗೂ ಸಿನಿಮಾ ಚೆನ್ನಾಗಿ ಮೂಡಿಬಂದಿರುವ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ.
ನಾಯಕಿ ನಿಶಾ ಕೊಠಾರಿಗೆ ಈ ಚಿತ್ರದ ಅವಕಾಶ ಬಂದಾಗ ಮೊದಲು ಭಯವಾಯಿತಂತೆ. ಆದರೆ ನಿರ್ದೇಶಕರು ಪಾತ್ರ ವಿವರಿಸಿದ ರೀತಿ ಹಾಗೂ ಅವರು ತುಂಬಿದ ಧೈರ್ಯದಿಂದ ನೀಟಾಗಿ ಮಾಡಿದ್ದಾಗಿ ಹೇಳುತ್ತಾರೆ. ಎಲ್ಲವೂ ಮೊದಲೇ ಪ್ಲ್ರಾನ್ ಮಾಡಿದ್ದರಿಂದ ಅಂದುಕೊಂಡಂತೆ ಸಿನಿಮಾ ಬಂದಿದೆ ಎಂದಷ್ಟೇ ಹೇಳುವ ನಿಶಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಉದಯ್‌ಗಿಲ್ಲಿ ಟೈಗರ್ ಫೈಟ್ ಮಾಡುವ ಅವಕಾಶ ಸಿಕ್ಕಿದೆ. ಅದು ನಿರ್ದೇಶಕರ ಕಲ್ಪನೆಯಂತೆ ಮೂಡಿಬಂದಿದ್ದು, ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾಗಿ ಹೇಳುತ್ತಾರೆ ಉದಯ್. ಚಿತ್ರಕ್ಕೆ ಈ ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣವಿದೆ.
ಚಿತ್ರದಲ್ಲಿ ಟೈಟಲ್ ಸಾಂಗ್, ನಾಯಕಿಯ ಇಂಟ್ರೋಡಕ್ಷನ್ ಸಾಂಗ್ ಮತ್ತು “ಗಬ್ಬರ್‌ಸಿಂಗ್’ ಚಿತ್ರದ ಶೇಡ್‌ನಲ್ಲೊಂದು ಹಾಡಿದೆ. ಅದು ಸಿನಿಮಾದ ಹೈಲೈಟ್ ಅಂತೆ. ನಿಶಾ ಕೊಠಾರಿಗೆ ಇಲ್ಲಿ ಕಬ್ಬಡ್ಡಿ ಸ್ಟೈಲ್‌ನಲ್ಲೊಂದು ವಿಶೇಷ ಫೈಟ್ ಕಂಪೋಸ್ ಮಾಡಲಾಗಿದೆ ಎಂದು ವಿವರ ಕೊಡಲು ಅವರು ಮರೆಯುವುದಿಲ್ಲ. ಕವಿರಾಜ್, ರವಿಶಾಸಿ ನಾಲ್ಕು ಹಾಡುಗಳನ್ನು ಬರೆದಿದ್ದು, ಗುಣವಂತ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಆಶಿಷ್ ವಿದ್ಯಾರ್ಥಿ, ರವಿ ಕಾಳೆ, ಅಮಿತ್, ರಮೇಶ್, ಪ್ರತಾಪ್, ರಾಜೇಶ್, ವಿವೇಕ್ ಸೇರಿದಂತೆ ಅನೇಕರು ನಟಿಸಿದ್ದಾರೆ.
-ಉದಯವಾಣಿ