ಯಾಮಿ ಗೌತಮ್ ಎಂಬ ಬಾಲಿವುಡ್ ಚೆಲುವೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ರು. ಜಾಹೀರಾತಿನಲ್ಲಿ ಅಂದಿನಿಂದ ಇಂದಿನವರೆಗೆ ಮಿಂಚುತ್ತಿರುವ ನುಣುಪು ಕೆನ್ನೆ ಚೆಲುವೆಯ ಸಿನಿಮಾ ಬದುಕು ಆರಂಭವಾಗಿದ್ದು ಕನ್ನಡ ಚಿತ್ರದಿಂದಲೇ.
“ಉಲ್ಲಾಸ ಉತ್ಸಾಹ’ ಚಿತ್ರದಲ್ಲಿ ಗಣೇಶ್ ಜತೆ ಡ್ಯುಯೆಟ್ ಹಾಡಿದ ಪಾತರಗಿತ್ತಿ ಆಮೇಲೆ ಎಲ್ ಮಾಯವಾದ್ಲು ಅಂತಿರುವಾಗ್ಲೆ ಜಾನ್ ಅಬ್ರಾಹಂ ನಿರ್ಮಾಣದ “ವಿಕ್ಕಿ ಡೋನರ್’ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.
ವಿಶಿಷ್ಟ ಕಥಾವಸ್ತು ಹೊಂದಿರೋ ಈ ಸಿನಿಮಾದಲ್ಲಿ ಯಾಮಿ ಅಭಿನಯಕ್ಕೆ ಎಲ್ಲಿಲ್ಲದ ಪ್ರಶಂಸೆ ಕೇಳಿಬಂತು. ಕನ್ನಡವೂ ಸೇರಿದಂತೆ ತೆಲುಗು, ಪಂಜಾಬಿ, ಹಿಂದಿ, ಮಲಯಾಳ ಸಿನಿಮಾಗಳಲ್ಲಿ ನಟಿಸಿರೋ ಪಂಚಭಾಷಾ ತಾರೆ ಈಗ ಹಿಂದಿ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಬಿಝಿ ಬಿಝಿಯಾಗಿ ಓಡಾಡಿಕೊಂಡಿರುಬ ಯಾಮಿ ಗೌತಮ್ ಜೊತೆ “ಉದಯವಾಣಿ’ ವಿಶೇಷವಾಗಿ ನಡೆಸಿದ ಮಾತುಕತೆ ಇಲ್ಲಿದೆ. ಓದುವಂತವರಾಗಿ ….
*ನಿಮ್ಮ ಸಿನಿಮಾ ಬದುಕು ತೆರೆದುಕೊಂಡಿದ್ದು ಕನ್ನಡ ಸಿನಿಮಾಗಳಿಂದಲೇ. “ಉಲ್ಲಾಸ ಉತ್ಸಾಹ’ದ ಬಳಿಕ ಈ ಕಡೆ ತಲೇನೇ ಹಾಕ್ಲಿಲ್ಲ?
– (ನಗು) ಹಾಕ್ಬಾರ್ದು ಅಂತೇನೂ ಅಲ್ಲ. ಸಾಕಷ್ಟು ಆಫರ್‌ಗಳೂ ಬಂದವು. ಆದರೆ ನಾನಾಗ್ಲೆ ಪಂಜಾಬಿ ಸಿನಿಮಾವೊಂದರಲ್ಲಿ ಬಿಝಿಯಾಗಿದ್ದೆ.
ತೆಲುಗಿನ “ನುವ್ವಿಲ’ ನಲ್ಲೂ ಅಭಿನಯಿಸಿದೆ. ಇದಾಗಿ ಬಾಲಿವುಡ್‌ನ ” ವಿಕ್ಕಿ ಡೋನರ್’ ಸಿನಿಮಾದಲ್ಲಿ ಒಳ್ಳೆಯ ಅವಕಾಶ ಬಂತು. ಆಮೇಲೆ ಜಾಹೀರಾತು, ಸಿನಿಮಾ ಅಂತ ಬಿಡುವೇ ಇಲ್ಲದಹಾಗಾಯ್ತು. ಹಾಗಾಗಿ ಕನ್ನಡದಲ್ಲಿ ಚಿತ್ರ ಒಪ್ಕೊಳಕ್ಕಾಗ್ಲಿಲ್ಲ.
*ಸದ್ಯಕ್ಕೇನಾದ್ರೂ ಬರೋ ಸಾಧ್ಯತೆ ಇದೆಯಾ?
– ಸದ್ಯಕ್ಕೆ ಯಾವ ಆಫರ್‌ನೂ ಒಪ್ಕೊಂಡಿಲ್ಲ.
*ಪಂಚಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದೀರಿ. ಸ್ಯಾಂಡಲ್‌ವುಡ್ ಬಗ್ಗೆ ಹೇಳ್ಬೇಕಂದ್ರೆ ..
– ಹೆಚ್ಚು ಗೊತ್ತಿಲ್ಲ. ಆದರೆ ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ಇದೆ. ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬರ್ತಿವೆ. ಕ್ರಿಯೇಟಿವ್ ಸಬ್ಜೆಕ್ಟ್ಗಳಿರುತ್ತವೆ.
ಹೊಸ ಪ್ರಯೋಗಗಳಿಗೆ ಹೆಚ್ಚು ಅವಕಾಶಗಳಿವೆ ಅಂತ ಕೇಳಿದ್ದೀನಿ. ಸುದೀಪ್ ಅಂಥ ಗ್ರೇಟ್ ಆ್ಯಕ್ಟರ್ ನಿಜಕ್ಕೂ ಕನ್ನಡಕ್ಕೆ ದೊಡ್ಡ ಕೊಡುಗೆ. ಕನ್ನಡ ಮಾತ್ರ ಅಲ್ಲ ತೆಲುಗು, ಹಿಂದಿಯಲ್ಲೂ ಅದ್ಭುತವಾಗಿ ನಟಿಸಿದ್ದಾರೆ.
*ಸುದೀಪ್ ಜತೆ ಕನ್ನಡದಲ್ಲಿ ಅವಕಾಶ ಸಿಕ್ಕರೆ?
– ಹೂಂ, ಮಾಡ್ತೀನಿ. ಆದ್ರೆ ಸ್ಕ್ರಿಪ್ಟ್, ನನ್ನ ಪಾತ್ರಕ್ಕಿರುವ ಮಹತ್ವವನ್ನೂ ನೋಡಿ ನಿರ್ಧರಿಸಬೇಕು.
* ಪಾತ್ರಗಳ ಆಯ್ಕೆಯಲ್ಲಿ ನಿಮ್ಮ ಮಾನದಂಡ?
– ಪಾತ್ರಗಳ ಆಯ್ಕೆ ಅಂತಲ್ಲ, ಯಾವ ಕೆಲ್ಸ ಮಾಡುವಾಗಲೂ ಬೈ ಹಾರ್ಟ್‌ನಿಂದ ಮಾಡ್ತೀನಿ. ಮನಸ್ಸಿಗೆ “ಯೆಸ್’ ನಾನಿದನ್ನ ಮಾಡಬಲ್ಲೆ ಅನ್ನಿಸಿದ ಪ್ರಾಜೆಕ್ಟ್ಗಳನ್ನ ಮಾತ್ರ ಒಪ್ಕೊಳ್ಳೋದು. ನನಗೆ ಸಿನಿಮಾದಲ್ಲಿ ಗಾಡ್‌ಫಾದರ್‌ಗಳಿಲ್ಲ. ಹಾಗಾಗಿ ಭವಿಷ್ಯವನ್ನು ಮನಸ್ಸಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಪಾತ್ರದ ಆಯ್ಕೆ ಮಾಡಲೇ ಬೇಕಾಗುತ್ತದೆ.
*ಜಾನ್ ಅಬ್ರಹಂ ಪ್ರೊಡಕ್ಷನ್‌ನಿಂದ ಮತ್ತೇನಾದ್ರೂ ಆಫರ್‌ಗಳಿವೆಯಾ?
– ಸದ್ಯಕ್ಕಿಲ್ಲ.
*ಅವರ ಪ್ರೊಡಕ್ಷನ್‌ನ ಶೂಜಿತ್ ಸರ್ಕಾರ್ ನಿರ್ದೇಶನದ “ಆಗ್ರಾ ಕ ದಾಬ್ರ’ಕ್ಕೆ ನಿಮಗೂ ಆಫರ್ ಇತ್ತು ಅನ್ನೋ ಗಾಳಿಸುದ್ದಿ ಇತ್ತಲ್ಲ?
– ಈವರೆಗೆ ಬಂದಿಲ್ಲ. ಯಾಕಂದ್ರೆ ಶೂಜಿತ್ ಸಾರ್ ನಿರ್ದೇಶನದ “ವಿಕ್ಕ ಡೋನರ್’ ಬಾಲಿವುಡ್‌ನಲ್ಲಿ ನನ್ನ ಭವಿಷ್ಯ ನಿರ್ಧರಿಸಿದ ಚಿತ್ರ. ನಾವಿಬ್ಬರೂ ಇವತ್ತಿಗೂ ಸಂಪರ್ಕದಲ್ಲಿದ್ದೀವಿ. ಆ ಚಿತ್ರದ ಪಾತ್ರದ ಬಗ್ಗೆ ಅವರು ನನ್ನ ಹತ್ರ ಏನೂ ಹೇಳಿಲ್ಲ. ನಿಮ್ ಮಾತು ನಿಜ ಆದ್ರೆ ಆ ಪಾತ್ರವೂ ನನಗೆ ಬ್ರೇಕ್ ನೀಡಬಹುದೇನೋ……. ( ನಗು)
*ಆ್ಯಕ್ಟಿಂಗ್ ಪ್ರೊಫೆಶನ್‌ನಲ್ಲೇ ಕೊನೆವರೆಗೂ ಇರ್ಬೇಕು ಅನ್ನೋ ಆಸೆ ಇದ್ಯಾ?
– ಹಾಗಂತ ಅಲ್ಲ, ಆದರೆ ಸ್ಕೂಲ್ ಡೇಸ್‌ನಿಂದಲೂ ನಟನೆ ಅನ್ನೋದು ನನ್ನ ಕನಸು. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೂ ಅಭಿನಯಿಸ್ತೀನಿ. ಅಭಿನಯಿಸ್ಲೇ ಬೇಕು ಅನ್ನೋ ಕಾರಣಕ್ಕೆ ಸಿಕ್ ಸಿಕ್ಕ ಪಾತ್ರ ಒಪ್ಪೋದು ನನ್ನ ಜಾಯಮಾನ ಅಲ್ಲ. ಆರಂಭಿಕ ಕೆಲವು ಚಿತ್ರಗಳನ್ನ ಬಿಟ್ಟರೆ ಉಳಿದೆಲ್ಲವೂ ವಿಶಿಷ್ಟ ಕಥಾವಸ್ತು ಹೊಂದಿರುವ ಚಿತ್ರಗಳೇ.
*ಮುಂದಿನ ಪ್ರಾಜೆಕ್ಟ್ ಬಗ್ಗೆ?
– ಒಂದು ತಮಿಳು ಸಿನಿಮಾ, ಎರಡು ಹಿಂದಿ ಚಿತ್ರಗಳಲ್ಲಿ ಅಭಿನಯಿಸ್ತಿದ್ದೀನಿ. ತಮಿಳು ಸಿನಿಮಾ ” ತಮಿಳ್‌ಸೆಲ್ವನಿಮ್ ತನಿಯಾರ್ ಅನ್ಜಲುಮ್’ ಆ್ಯಕ್ಷನ್ ರೊಮ್ಯಾಂಟಿಕ್ ಕಾಮಿಡಿ. ಇದರಲ್ಲಿ ಕಾವ್ಯಾ ಅನ್ನೋ ಪಾತ್ರ.
ಪುಲ್ಕಿತ್ ಸಾಮ್ರಾಟ್ ಜತೆ “ಸನಮ್ ರೇ’ ಸಿನಿಮಾ ಇದೆ. ಇದು ವ್ಯಾಲೆಂಟೈನ್ ಡೇ ದಿನ ರಿಲೀಸ್ ಆಗತ್ತೆ. ಇದು ರೊಮ್ಯಾಂಟಿಕ್ ಡ್ರಾಮಾ. ” ಜುನೂನಿಯತ್’ ಅನ್ನೋ ಇನ್ನೊಂದು ಸಿನಿಮಾನೂ ಪುಲ್ಕಿತ್ ಸಾಮ್ರಾಟ್ ಜತೆಗೇ ಇದೆ. ಕಾಶ್ಮೀರ ಕಣಿವೆಗಳ ಬ್ಯೂಟಿಫುಲ್ ಸೀನ್‌ಗಳಿವೆ, ಪಟಿಯಾಲ್, ಸೋನಮಾರ್ಗ್, ಶಿಮ್ಲಾ ಮೊದಲಾದ ರಮ್ಯತಾಣಗಳಲ್ಲಿ ಶೂಟಿಂಗ್ ನಡೆದಿದೆ. ಕಾಶ್ಮೀರದ ಲೋಕಲ್ ಹುಡುಗಿಯರೂ ಈ ಸಿನಿಮಾದಲ್ಲಿರುತ್ತಾರೆ. ಈ ಸಿನಿಮಾವೂ 2016ರಲ್ಲಿ ಬಿಡುಗಡೆಯಾಗತ್ತೆ.
-ಉದಯವಾಣಿ