ಕರ್ನಾಟಕ

ಧಾರಾಕಾರ ಮಳೆ: ಹಾನಿ ಸ್ಥಳಕ್ಕೆ ಮೇಯರ್ ಭೇಟಿ

Pinterest LinkedIn Tumblr

Mayor Manjunath Reddy seen attending the complaint calls from public for the recent heavy rain problems at BBMP office, in Bengaluru on Tuesday 3rd November 2015 Pics: www.pics4news.com

ಬೆಂಗಳೂರು, ನ. 3: ನಗರದಲ್ಲಿ ಭಾರೀ ಮಳೆಯಾದಾಗ ಹಾನಿಯುಂಟಾಗುವ ಸ್ಥಳಗಳ ಸಂಖ್ಯೆಯನ್ನು ಹಂತ-ಹಂತವಾಗಿ ಕಡಿಮೆಗೊಳಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಮೇಯರ್ ಮಂಜುನಾಥರೆಡ್ಡಿ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದ ಅನಾಹುತ ಸಂಭವಿಸಿದ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದಲ್ಲಿ ಭಾರೀ ಮಳೆಯಾದಾಗ ನೂರಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಅನಾಹುತಗಳು ಸಂಭವಿಸುತ್ತಿದ್ದವು. ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸಂಖ್ಯೆಯನ್ನು 26ಕ್ಕೆ ಇಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಳೆಯಿಂದ ಅನಾಹುತ ಸಂಭವಿಸಿರುವ ಶಾಂತಿನಗರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳಿಗೆ ಮೊದಲು ಸಮಸ್ಯೆಯನ್ನು ಬಗೆಹರಿಸಿ ಇಲ್ಲದಿದ್ದರೆ ನಿಮ್ಮ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ನಂತರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ಬಂದ ಮೇಯರ್ ಅವರು ಸುಮಾರು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ಪಾಲಿಕೆಯ ಎಲ್ಲ ಎಂಟು ವಲಯಗಳ ಜಂಟಿ ಆಯುಕ್ತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ವಲಯಮಟ್ಟದಲ್ಲಿರುವ ಎಲ್ಲ ಸಮಸ್ಯೆಗಳು ಹಾಗೂ ಮಳೆಯಿಂದ ಆಗಿರುವ ಅನಾಹುತಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಆದೇಶಿಸಿದರು. ಇದೇ ವೇಳೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ನಗರದಲ್ಲಿ ಮಳೆ ಬರುವಾಗ 24 ಗಂಟೆ ನಿಯಂತ್ರಣ ಕೊಠಡಿಯಲ್ಲಿದ್ದು, ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಅವುಗಳನ್ನು ದಾಖಲು ಮಾಡಿಕೊಂಡು, ನಂತರ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು. ಅಧಿಕಾರಿಗಳು ಬೇಕಾಬಿಟ್ಟಿ ಕೆಲಸ ಮಾಡಿದರೆ ಖಂಡಿತಾ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ನಗರದಲ್ಲಿ 2-3 ದಿನ ಮಳೆಯಾಗುವ ಸಾಧ್ಯತೆಯಿದ್ದು, ನಿಯಂತ್ರಣ ಕೊಠಡಿಯಲ್ಲಿದ್ದು ಜನರ ಸಮಸ್ಯೆಗಳನ್ನು ಆಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಿಮ್ಮ ಕಾರ್ಪೊರೇಟರ್ ಯಾರು?
ನಿಯಂತ್ರಣ ಕೊಠಡಿಯಲ್ಲಿ ಕುಳಿತ ಮೇಯರ್ ಸಾರ್ವಜನಿಕರಿಂದ ದೂರು ಸ್ವೀಕರಿಸುವ ವೇಳೆ ಹಿರಿಯರೊಬ್ಬರು ಕರೆ ಮಾಡಿ ತಮ್ಮ ವಾರ್ಡ್‌ನಲ್ಲಿ ನೀರು ನಿಂತು ಸಮಸ್ಯೆಯಾಗಿದೆ ಎಂದು ಹೇಳಿದರು. ಈ ವೇಳೆ ಮೇಯರ್ ನಿಮ್ಮ ಕಾರ್ಪೊರೇಟರ್ ಯಾರು ಎಂದು ಕೇಳಿದಾಗ, ಆ ಹಿರಿಯ ನಾಗರಿಕರು ಹೆಸರನ್ನು ಹೇಳಲು ತಡವರಿಸಿದರು. ಮೇಯರ್ ಮಾತನಾಡಿ, ಮೊದಲು ನಿಮ್ಮ ವಾರ್ಡ್‌ನ ಕಾರ್ಪೊರೇಟರ್ ಯಾರು ಎಂದು ತಿಳಿದುಕೊಳ್ಳಿ ಆಗ ಸಮಸ್ಯೆ ಕಡಿಮೆಯಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ನೇರವಾಗಿ ನಿಮ್ಮ ಕಾರ್ಪೊರೇಟರ್‌ಗೆ ನೀಡಬಹುದು ಎಂದು ಹೇಳಿದರು.

Write A Comment