ಬಾಲಿ, ಇಂಡೊನೇಷ್ಯಾ: ಮುಂಬೈ ಪೊಲೀಸ್ ಇಲಾಖೆಯ ‘ಕೆಲವು ಸದಸ್ಯರು’ ದಾವೂದ್ ಇಬ್ರಾಹಿಂ ಅವರ ನಂಟು ಹೊಂದಿದ್ದಾರೆ ಎಂದು ಬಂಧನದಲ್ಲಿರುವ ಭೂತಗ ಪಾತಕಿ ಛೋಟಾ ರಾಜನ್ ಮಂಗಳವಾರ ಹೇಳಿದ್ದಾನೆ.
‘ಮುಂಬೈ ಪೊಲೀಸ್ನ ಕೆಲವು ಸದಸ್ಯರು ದಾವೂದ್ ಜತೆಗೆ ಸಂಪರ್ಕ ಹೊಂದಿದ್ದಾರೆ. ದಾವೂದ್ ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ನಾನು ಮುಂದುವರೆಸುತ್ತೇನೆ. ನಾನು ದಾವೂದ್ಗೆ ಹೆದರುವುದಿಲ್ಲ’ ಎಂದು ರಾಜನ್ ಸ್ಪಷ್ಟಪಡಿಸಿದ್ದಾನೆ.
ದಾವೂದ್ನ ಒಂದು ಕಾಲದ ಆಪ್ತನಾಗಿದ್ದ ರಾಜನ್, 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಘಟನೆಯ ಬಳಿಕ ಆತನಿಂದ ಬೇರ್ಪಟ್ಟಿದ್ದ. ‘ಸರ್ಕಾರ ನನ್ನನ್ನು ದೆಹಲಿ ಅಥವಾ ಮುಂಬೈ… ಎಲ್ಲಿಯಾದರೂ ಇರಿಸಲಿ. ಆದರೆ ನನಗೆ ಅನ್ಯಾಯ ಆಗಬಾರದು. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು’ ಎಂದು ಆತ ಪ್ರತಿಪಾದಿಸಿದ್ದಾನೆ.
ಕೊಲೆ, ಸುಲಿಗೆಯಿಂದ ಹಿಡಿದು ಮಾದಕ ದ್ರವ್ಯ ಕಳ್ಳಸಾಗಣೆ ಸೇರಿದಂತೆ 75ಕ್ಕೂ ಹೆಚ್ಚು ಹೀನಾಯ ಅಪರಾಧ ಪ್ರಕರಣಗಳು ರಾಜನ್ ಮೇಲಿವೆ. ‘ಮುಂಬೈ ಪೊಲೀಸರು ನನ್ನೊಂದಿಗೆ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ದೆಹಲಿ ಸರ್ಕಾರವು ಇದನ್ನು ಗಮನದಲ್ಲಿರಿಸಿಕೊಂಡು ನನಗೆ ನ್ಯಾಯ ಕೊಡಿಸಬೇಕು’ ಎಂದು ರಾಜನ್ ಕೋರಿದ್ದಾನೆ. ಮುಂಬೈಗೆ ಹಿಂದಿರುಗಲು ಹೆದರಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.
