ಕನ್ನಡ ವಾರ್ತೆಗಳು

ನ 5,6: ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದಲ್ಲಿ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ

Pinterest LinkedIn Tumblr

Vishwa_konkani_samropa

ಮಂಗಳೂರು,ನ.03 : ವಿಶ್ವ ಕೊಂಕಣಿ ಕೇಂದ್ರವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ಗೋವಾ ವಿಶ್ವ ವಿದ್ಯಾಲಯಗಳ ಸಹಯೋಗದೊಂದಿಗೆ ನವೆಂಬರ್ 5 ಮತ್ತು 6ರಂದು ಎರಡು ದಿನಗಳ ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹವನ್ನು ಆಯೋಜಿಸುತ್ತಿದೆ. ಸಾಹಿತ್ಯಾಸಕ್ತರಿಗೆ ವಿಶೇಷ ಸಾಹಿತ್ಯಿಕ ಅನುಭೂತಿಯನ್ನು ಒದಗಿಸುವ ನಿಟ್ಟಿನಿಂದ ಆಯೋಜಿಸಲಾಗುತ್ತಿರುವ ಈ ಸಮಾರೋಹದಲ್ಲಿ ವಿಚಾರ ಗೊಷ್ಠಿ, ಮಾತುಕತೆ, ಸ್ಮಾರಕ ಭಾಷಣ, ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ಹಾಗೂ ಶಿಬಿರಾಗ್ನಿ ಕವಿಗೊಷ್ಠಿಗಳು ಜರಗಲಿವೆ. ಮಹಾರಾಷ್ಟ್ರ, ಗೋವಾ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಂದ ಆಗಮಿಸುವ ಸಾಹಿತಿಗಳು, ಸಂಶೋಧಕರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಈ ಸಮಾರೋಹದಲ್ಲಿ ಭಾಗವಹಿಸಲಿದ್ದಾರೆ.

ಪ್ರಸಿದ್ಧ ಭಾಷಾತಜ್ಞ, ಭಾರತೀಯ ಭಾಷಾ ಸಂಸ್ಥಾನದ ಪೂರ್ವ ನಿರ್ದೇಶಕ, ಪ್ರಸಕ್ತ ಶಾಂತಿನಿಕೇತನದ ವಿಶ್ವ ಭಾರತಿಯಲ್ಲಿ ಸೆಂಟರ್ ಫ಼ಾರ್ ಎಂಡೆಂಜರ್ಡ್ ಲ್ಯಾಂಗ್ವೇಜಸ್‌ನ ಪೀಠದ ಮುಖ್ಯಸ್ಥರಾಗಿರುವ ಡಾ. ಉದಯ ನಾರಾಯಣ ಸಿಂಗ್‌ರವರು ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹ 2015ನ್ನು ಉದ್ಘಾಟಿಸಲಿರುವರು.

Vishwa_konkani_samropa_1

ನವೆಂಬರ್ 5 ರಂದು ಬೆಳಿಗ್ಗೆ 9.00 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಲಿರುವ ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಸನ್ಮಾನ್ಯ ಉಪಕುಲಪತಿಗಳಾಗಿರುವ ಡಾ. ಕೆ. ಭೈರಪ್ಪರವರು ವಹಿಸಲಿರುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಚಂದ್ರಹಾಸ ರೈರವರು ಮುಖ್ಯ ಅತಿಥಿಗಳಾಗಿರುವರು.

ಸಮಾರೋಹದ ಅಂಗವಾಗಿ ಸೃಜನ ಮತ್ತು ಅನುಸೃಜನ – ಸಮಕಾಲೀನ ಕೊಂಕಣಿ ಲೇಖಕಿಯರ ಕುರಿತಾದ ವಿಚಾರ ಸಂಕಿರಣವು ಜರಗಲಿದ್ದು, ದೇಶದಾದ್ಯಂತದಿಂದ ಸಂಶೋಧಕರು ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಈ ವಿಚಾರ ಸಂಕಿರಣವು ವಿಶೇಷವಾಗಿ ಅನುವಾದ ಸಾಹಿತ್ಯ ಮತ್ತು ಅನುವಾದ ಪ್ರಕ್ರಿಯೆಗಳ ಮೇಲೆ ಚರ್ಚಿಸಲಿದ್ದು, ಆ ಬಗ್ಗೆ ದಿಕ್ಸೂಚಿ ಭಾಷಣವನ್ನು ಗೋವಾ ವಿಶ್ವ ವಿದ್ಯಾಲಯದ ಬಾಕಿಬಾಬ್ ಬೋರ್ಕರ್ ಪೀಠದ ಅಧ್ಯಕ್ಷ ಶ್ರೀ ಉದಯ್ ಎಲ್. ಭೆಂಬ್ರೆಯವರು ನೀಡಲಿದ್ದಾರೆ.

ನವೆಂಬರ್ 5ರಂದು ಮಧ್ಯಾಹ್ನ 2.00 ಗಂಟೆಗೆ ಭಾರತೀಯ ಸಾಹಿತ್ಯಕ್ಕೆ ಅನುವಾದದ ಕೊಡುಗೆ ಎಂಬ ವಿಷಯದ ಮೇಲೆ ಗೋಷ್ಟಿಯು ಜರುಗಲಿದ್ದು ಅನುವಾದ ಕ್ಷೇತ್ರದಲ್ಲಿ ನುರಿತ ಅನುಭವವಿರುವ ಸಾಹಿತಿಗಳಾದ ಶ್ರೀಮತಿ ವಿದ್ಯಾ ಪೈ, ಡಾ. ಗೀತಾ ಶೆಣೈ, ಡಾ. ಜೂಡಿ ಪಿಂಟೊ, ಶ್ರೀಮತಿ ಶೀಲಾ ಕೊಳಂಬ್ಕಾರ್, ಶ್ರೀಮತಿ ಜಯಮಾಲಾ ದಣಾಯತ್, ಶ್ರೀಮತಿ ತಾರಾ ಭಟ್, ಶ್ರೀ ಪಯ್ಯನೂರು ರಮೇಶ ಪೈ, ಶ್ರೀ ರಮೇಶ್ ಲಾಡ್, ಶ್ರೀ ಪುಂಡಲೀಕ್ ನಾಯಕ್ ಮುಂತಾದವರು ಭಾಗವಹಿಸಲಿದ್ದಾರೆ.

Vishwa_konkani_samropa_2

Vishwa_konkani_samropa_3

 

ಸಂಶೋಧನಾ ಪ್ರಬಂಧಗಳ ಪ್ರಸ್ತುತಿಯ ಅಧ್ಯಕ್ಷತೆಯನ್ನು ಗೋವಾ ವಿಶ್ವವಿದ್ಯಾಲಯದ ಡೀನ್ ಹಾಗೂ ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಸಹ ಸಂಚಾಲಕರಾಗಿರುವ ಡಾ. ಕಿರಣ್ ಬುಡ್ಕುಳೆಯವರು ವಹಿಸಲಿದ್ದು ಸುಮಾರು 24 ಕ್ಕೂ ಹೆಚ್ಚು ಪ್ರಬಂಧಗಳು ಪ್ರಸ್ತುತಿಯಾಗಲಿವೆ.

ಸಂಜೆ 5.30ಕ್ಕೆ ಜೆ.ಎಮ್.ಲೋಬೋಪ್ರಭು ಮತ್ತು ಲೊಯೆಲ್ಲಾ ಲೋಬೋಪ್ರಭು ಸ್ಮಾರಕ ಭಾಷಣವನ್ನು ಕವಿತಾನುವಾದ – ಕ್ರಿಯಾಶೀಲತೆ ಮತ್ತು ವಸ್ತುನಿಷ್ಟತೆಯಲ್ಲಿ ಪಂಥಾಹ್ವಾನಗಳು ಎಂಬ ವಿಷಯದ ಮೇಲೆ ಖ್ಯಾತ ಲೇಖಕ, ಕವಿ ಶ್ರೀ ಜೆರ್ರಿ ಪಿಂಟೊರವರು ನೀಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಲೋಬೋಪ್ರಭು ದಂಪತಿಗಳ ಪುತ್ರಿಯೂ ಲೇಖಕಿಯೂ ಆಗಿರುವ ಶ್ರೀಮತಿ ಜಿಸೆಲ್ಲ್ ಡಿ. ಮೆಹತಾರವರು ವಹಿಸಲಿದ್ದಾರೆ.

ರಾತ್ರಿ 8.00 ಗಂಟೆಗೆ ಶಿಬಿರಾಗ್ನಿ ಕವಿಗೋಷ್ಟಿಯು ಖ್ಯಾತ ಕೊಂಕಣಿ ಕವಿ ಮೆಲ್ವಿನ್ ರೋಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಖ್ಯಾತ ಕವಿಗಳಾದ ಶ್ರೀ ಹೆಚ್. ಎಮ್. ಪೆರ್ನಾಳ್, ಶ್ರೀ ಆಂಡ್ರ್ಯೂ ಡಿಕುನ್ಹಾ, ಶ್ರೀ ಸಂಜೀವ ವೆರೆಂಕಾರ್ ಮತ್ತು ಶ್ರೀಮತಿ ಶಕುಂತಳಾ ಕಿಣಿ ಈ ಕವಿಗೊಷ್ಟಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಹದ ಎರಡನೇ ದಿನ ನವೆಂಬರ್ 6ರಂದು ಬೆಳಗ್ಗೆ ಗಂಟೆ 9.30ಕ್ಕೆ ವಿಶ್ವಾನುವಾದ – ತಂತ್ರಗಳು ಮತ್ತು ನಾವಿನ್ಯತೆ ಎಂಬ ವಿಷಯವಾಗಿ ವಿಶೇಷ ಉಪನ್ಯಾಸವನ್ನು ಡಾ. ಉದಯನಾರಾಯಣ ಸಿಂಗ್‌ರವರು ಪ್ರಸ್ತುತಪಡಿಸಲಿದ್ದಾರೆ. ಆ ಬಳಿಕ ಗಂಟೆ 10.30 ಗೆ ಕ್ರಿಯಾಶೀಲ ಮನಸ್ಸಿನಿಂದ ಅನುವಾದಕನ ಲೇಖನಿಯತ್ತ – ಪಲ್ಲಟಗಳು ಮತ್ತು ಸ್ವೀಕೃತಿಗಳು ಎಂಬ ವಿಷಯದ ಮೇಲೆ ವಿಚಾರ ಗೋಷ್ಠಿಯು ಜರುಗಲಿದ್ದು ಖ್ಯಾತ ವಿಮರ್ಶಕ ಶ್ರೀ ಎಸ್.ಆರ್.ವಿಜಯಶಂಕರ್ ರವರು ಸಂಚಾಲಕತ್ವವನ್ನು ವಹಿಸಲಿದ್ದಾರೆ. ಖ್ಯಾತ ಲೇಖಕ ಶ್ರೀ ವಿವೇಕ ಶಾನಭಾಗ, ಶ್ರೀ ಜೆರ್ರಿ ಪಿಂಟೊ, ಡಾ. ಉದಯನಾರಾಯಣ ಸಿಂಗ್ ಮತ್ತು ಖ್ಯಾತ ಮಲಯಾಳಂ ವಿಮರ್ಶಕ ಟಿ.ಎನ್.ವಿಶ್ವಂಭರನ್‌ರವರುಗಳು ಈ ಗೋಷ್ಠಿಯಲ್ಲಿ ಪಾಲ್ಗೊಂಡು ವಿಚಾರ ವಿನಿಮಯ ನಡೆಸಲಿರುವರು.

ನವೆಂಬರ್ 6 ರಂದು ಸಂಜೆ 4.00 ಗಂಟೆಗೆ ಮಂಗಳೂರಿನ ಶ್ರೀ ಟಿ.ವಿ.ರಮಣ ಪೈ ಕನ್ವೆನ್ಶನ್ ಹಾಲ್ ನಲ್ಲಿ 2015 ನೇ ಸಾಲಿನ ಪ್ರತಿಷ್ಠಿತ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಮತ್ತು ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರದಾನ ಸಮಾರಂಭ ಜರುಗಲಿದೆ. ಈಗಾಗಲೇ ಉದ್ಘೋಷಿಸಿದಂತೆ ವಿಸ್ತೃತ ಆಯ್ಕೆ ಪ್ರಕ್ರಿಯೆಗಳ ಬಳಿಕ, ಲೇಖಕಿ ಮೀನಾ ಕಾಕೋಡ್ಕರ್‌ರವರು ರಚಿಸಿದ ವಾಸ್ತು ಕೊಂಕಣಿ ಕಾದಂಬರಿಗೆ 2015 ರ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ, ಕವಿ ಆಂಡ್ರ್ಯೂ ಡಿಕುನ್ಹಾ ರವರು ರಚಿಸಿದ ಅಂಜುರಾಚೆಂ ಪಾನ್ ಕವಿತಾ ಸಂಗ್ರಹಕ್ಕೆ 2015 ರ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ಕೊಂಕಣಿಯ ಪ್ರಸಿದ್ಧ ಲೇಖಕ ಶ್ರೀ ಸುರೇಶ್ ಗುಂಡೂ ಅಮೋಣಕಾರ್ ರವರಿಗೆ 2015 ರ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ್ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಗುವುದು.

ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸುತ್ತಿರುವ ರ್‍ಯಾನ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕಿ ಶ್ರೀಮತಿ ಗ್ರೇಸ್ ಪಿಂಟೊರವರಿಗೆ ಮತ್ತು ಕುಂದಾಪುರ ಭಂಡಾರ್ ಕಾರ್ಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಶ್ರೀ ಹೆಚ್. ಶಾಂತಾರಾಮ್‌ರವರಿಗೆ ೨೦೧೫ರ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಗುವುದು.

ಡಾ. ಉದಯನಾರಾಯಣ ಸಿಂಗ್‌ರವರು, ಈ ಪ್ರಶಸ್ತಿಗಳ ದಾನಿ ಶ್ರೀ ಟಿ.ವಿ.ಮೋಹನದಾಸ ಪೈ ಮತ್ತು ಶ್ರೀಮತಿ ವಿಮಲಾ ವಿ. ಪೈ ರವರ ಘನ ಉಪಸ್ಥಿತಿಯಲ್ಲಿ ಈ ಪುರಸ್ಕಾರಗಳನ್ನು ಪ್ರದಾನಿಸುವರು. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ. ಪಿ.ದಯಾನಂದ ಪೈರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

Write A Comment