ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣಕ್ಕೆ ಗೋಲ್ಡ್ ಕೆಟಗರಿಯಲ್ಲಿ ಪ್ರತಿಷ್ಠಿತ ವರ್ಲ್ಡ್ ಕ್ವಾಲಿಟಿ ಕಮಿಟ್‌ಮೆಂಟ್ ಪ್ರಶಸ್ತಿ

Pinterest LinkedIn Tumblr

Airport_wqc_Award_1

ಮಂಗಳೂರು, ಅ.30: ಸ್ಪೇನ್ ಮ್ಯಾಡ್ರಿಡ್‌ನ ಬ್ಯುಸಿನೆಸ್ ಇಮಿಟೇಟಿವ್ ಡೈರೆಕ್ಷನ್ ಪ್ರದಾನ ಮಾಡುವ ಪ್ರತಿಷ್ಠಿತ ವರ್ಲ್ಡ್ ಕ್ವಾಲಿಟಿ ಕಮಿಟ್‌ಮೆಂಟ್ (ಡಬ್ಲುಕ್ಯುಸಿ)ಪ್ರಶಸ್ತಿಯು ಗೋಲ್ಡ್ ಕೆಟಗರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಭಿಸಿದೆ. ಫ್ರಾನ್ಸ್‌ನ ಪ್ಯಾರೀಸ್ ನಗರದಲ್ಲಿ ಅ.25ರಂದು ನಡೆದ ಸಮಾರಂಭದಲ್ಲಿ 75 ರಾಷ್ಟ್ರಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಸ್ವೀಕರಿಸಿರುವುದಾಗಿ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಡಬ್ಲುಕೆಸಿ ಪ್ರಶಸ್ತಿ ನಾವು ಅರ್ಜಿ ಹಾಕದೆ ದೊರಕಿರುವಂಥದ್ದು. ವರ್ಷದಿಂದ ವರ್ಷಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಗತಿ ಕಾಣುತ್ತಿದೆ.

ಜುಲೈನಿಂದ ಡಿಸೆಂಬರ್‌ವರೆಗೆ ಗ್ರಾಹಕರ ತೃಪ್ತಿ ಸೂಚ್ಯಂಕ ಕೂಡ 4.32ರಿಂದ 4.82ಕ್ಕೆ ಏರಿಕೆಯಾಗಿದೆ. ಸ್ವಚ್ಛತೆ ಗುಣಮಟ್ಟಕ್ಕೂ ಮಂಗಳೂರು ವಿಮಾನ ನಿಲ್ದಾಣ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ದೇಶದ 16 ಅಂತಾರಾಷ್ಟ್ರೀಯ ಮತ್ತು 37 ದೇಶೀಯ ವಿಮಾನ ನಿಲ್ದಾಣಗಳ ಪೈಕಿ ಮಂಗಳೂರು ವಿಮಾನ ನಿಲ್ದಾಣ ಡಬ್ಲುಕ್ಯುಸಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸ್ವಚ್ಛತೆ, ಗುಣಮಟ್ಟ, ಉತ್ತಮ ನಿರ್ವಹಣೆ, ಪ್ರವಾಸಿಗರಿಗೆ ಅನುಕೂಲತೆ, ವಿಮಾನ ನಿಲ್ದಾಣದಲ್ಲಿ ಸುಸಜ್ಜಿತ ವ್ಯವಸ್ಥೆ, ವ್ಯವಹಾರ ಪ್ರಗತಿ ಸೇರಿದಂತೆ ಮಂಗಳೂರು ವಿಮಾನ ನಿಲ್ದಾಣದಲ್ಲಿನ ಸರ್ವಾಂಗೀಣ ಪ್ರಗತಿಯನ್ನು ಗುರುತಿಸಿ ಡಬ್ಲುಕ್ಯುಸಿ ಪ್ರಶಸ್ತಿ ಲಭಿಸಿದೆ ಎಂದವರು ತಿಳಿಸಿದರು.

2014ರ ಜುಲೈನಿಂದ ಡಿಸೆಂಬರ್‌ವರೆಗಿನ ಅಂಕಿಅಂಶಗಳ ಪ್ರಕಾರ ಮಂಗಳೂರಿನಿಂದ ಹೊರಡುವ ವಿಮಾನ ಮತ್ತು ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಿದೆ. ಪ್ರಸಕ್ತ ಮಂಗಳೂರು ವಿಮಾನ ನಿಲ್ದಾಣದಲ್ಲಿ 6 ವಿಮಾನಗಳ ನಿಲುಗಡೆಗೆ ಸ್ಥಳಾವಕಾಶವಿದೆ. ಇನ್ನು 3 ವಿಮಾನಗಳನ್ನು ಹೆಚ್ಚುವರಿಯಾಗಿ ನಿಲುಗಡೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದರ ಕಾಮಗಾರಿ 2016ರ ಜೂನ್‌ಗೆ ಪೂರ್ಣಗೊಳ್ಳಲಿದೆ ಎಂದವರು ವಿವರಿಸಿದರು.

ಮಂಗಳೂರಿನಿಂದ ದಿಲ್ಲಿಗೆ ವಿಮಾನಯಾನ ಆರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 7:30ಕ್ಕೆ ಹಾಗೂ ಸಂಜೆ 4:3ಂಕ್ಕೆ ಈ ವಿಮಾನ ಹಾರಾಟ ನಡೆಸಲಿದೆ. ಮಂಗಳೂರಿನಿಂದ ಬೆಂಗಳೂರು ತೆರಳುವ ವಿಮಾನ ಅಲ್ಲಿಂದ ದಿಲ್ಲಿಗೆ ಪ್ರಯಾಣಿಸಲಿದೆ. ಅಲ್ಲದೆ ಪ್ರತಿದಿನ ಸಂಜೆ ಮಂಗಳೂರಿನಿಂದ ಮುಂಬೈಗೆ ನೇರ ವಿಮಾನ ಆರಂಭಿಸುವ ಯೋಚನೆ ಇದೆ ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಮೂಲ ಸೌಕರ್ಯ ಪೂರೈಕೆಗೆ ವಿಶೇಷ ಒತ್ತು ನೀಡಲಾಗಿದೆ. ಮರವೂರು ಸೇತುವೆಯಿಂದ ಏರ್‌ಪೋರ್ಟನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದವರು ತಿಳಿಸಿದರು.

ಸಭೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಅಮಿತ್‌ಕುಮಾರ್, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸ್ಟೇಷನ್ ಮ್ಯಾನೇಜರ್ ನಾಗೇಶ್ ಶೆಟ್ಟಿ, ಕೆಸಿಸಿಐ ಅಧ್ಯಕ್ಷ ರಾಮ್ಮೋಹನ್ ಪೈ ಮಾರೂರು, ಪಂಡಿತ್ ರೆಸಾರ್ಟ್ ಅಧ್ಯಕ್ಷ ಎಲ್.ಗೋಯಲ್ ಉಪಸ್ಥಿತರಿದ್ದರು.

ಪ್ರೈಮರಿ ರಾಡಾರ್ ಅಳವಡಿಕೆ:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ಪ್ರೈಮರಿ ರೇಡಾರನ್ನು ಅಳವಡಿಸಲಾಗುವುದು ಎಂದು ಜೆ.ಟಿ. ರಾಧಾಕೃಷ್ಣ ಹೇಳಿದ್ದಾರೆ.

ಪ್ರಸ್ತುತ ಇರುವ ರಾಡಾರ್ ಸೆಕೆಂಡರಿ ಆಗಿದೆ. ಪ್ರೈಮರಿ ರಾಡಾರ್ ಇದಕ್ಕಿಂತ ಹೆಚ್ಚು ಆಧುನಿಕ ವ್ಯವಸ್ಥೆಯನ್ನೊಳಗೊಂಡಿದ್ದು, ಇದನ್ನು ಅಳವಡಿಸಿದರೆ ವಿಮಾನಗಳು ಮೇಲಕ್ಕೇರುವಾಗ ಮತ್ತು ಇಳಿಯುವಾಗ ಸರಿಯಾದ ದಿಕ್ಕನ್ನು ನಿಖರವಾಗಿ ಗುರುತಿಸಲು ಅನುಕೂಲವಾಗುತ್ತದೆ.

ಅಲ್ಲದೆ ವೈಪರೀತ್ಯ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸಮರ್ಪಕವಾಗಿ ಇಳಿಸಲು ಅನುಕೂಲ ಕಲ್ಪಿಸಲಿದೆ. ಇದನ್ನು ನೂತನ ಕಟ್ಟಡವನ್ನು ನಿರ್ಮಿಸಿ ಅಳವಡಿಸಲಾಗುವುದು. ಇದು 2016ರ ಜೂನ್‌ಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ವರದಿ ಕೃಪೆ : ವಾಭಾ

Write A Comment