ಮಂಗಳೂರು, ಅ. 30: ಟೂತ್ ಪೇಸ್ಟ್, ವ್ಯಾಸಲಿನ್ ಕ್ರೀಮ್, ಶಾಂಪೂ, ಹಾರ್ಲಿಕ್ಸ್ ಪುಡಿ ಡಬ್ಬಗಳಲ್ಲಿ ಚಿನ್ನದ ಪುಡಿಯನ್ನು ತುಂಬಿಸಿ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೊತ್ತು ಸಮೇತ ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ಬುಧವಾರ ನಗರಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿಗಳಿಬ್ಬರ ಲಗೇಜಿನಲ್ಲಿದ್ದ ವಸ್ತುಗಳ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ಲಗೇಜಿನಲ್ಲಿದ್ದ ವಸ್ತುಗಳನ್ನು ಅಧಿಕಾರಿಗಳು ತಪಾಸಣೆ ಮಾಡಿದಾಗ ಶಾಂಪೂ, ಹಾರ್ಲಿಕ್ಸ್ ಪುಡಿ, ಟೂತ್ ಪೇಸ್ಟ್, ವ್ಯಾಸಲಿನ್ ಕ್ರೀಮ್ ಡಬ್ಬಿಗಳಲ್ಲಿ ಚಿನ್ನದ ಪುಡಿ ಕಂಡು ಬಂತು ಎಂದು ಕಸ್ಟಮ್ಸ್ನ ಮಂಗಳೂರು ಆಯುಕ್ತ ಡಾ. ಎಂ.ಸುಬ್ರಮಣ್ಯಂ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ, 53 ಲಕ್ಷ ರೂ. ಮೌಲ್ಯದ 2 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ಮಂಗಳೂರಿನ ಪ್ರಧಾನ ಸಿವಿಲ್ (ಹಿರಿಯ) ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
