ಮಂಗಳೂರು, ಅ.28: ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆಯ ಅಧಿಕಾರಿಗಳು ಬಂದರ್ ಪ್ರದೇಶದ ಅಂಗಡಿಯೊಂದರಿಂದ 28.94 ಲಕ್ಷ ರೂ. ವೌಲ್ಯದ ದ್ವಿದಳ ಧಾನ್ಯಗಳ ಅಕ್ರಮ ದಾಸ್ತಾನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದೊಂದು ವಾರದಿಂದ ನಗರದಲ್ಲಿ ನಡೆಯುತ್ತಿರುವ ದ್ವಿದಳ ಧಾನ್ಯಗಳ ಅಕ್ರಮ ದಾಸ್ತಾನು ಪರಿಶೀಲನೆ ಮುಂದುವರಿದಿದೆ.
ಬಂದರು ಪ್ರದೇಶದ ಅಂಗಡಿಯೊಂದರಲ್ಲಿ ತೊಗರಿಬೇಳೆ ಸೇರಿದಂತೆ ಉದ್ದು, ಹೆಸ್ರು, ಕಡಲೆ, ಹುರುಳಿ, ಹಸಿರು ಬಟಾಣಿ ಮೊದಲಾದ ಒಂಬತ್ತು ಬಗೆಯ 694.44 ಕ್ವಿಂಟಾಲ್ ದ್ವಿದಳ ಧಾನ್ಯಗಳನ್ನು ಅಕ್ರಮವಾಗಿ ದಾಸ್ತಾನಿರಿಸಿರುವುದು ಪತ್ತೆಯಾಗಿದೆ. 28.84 ಲಕ್ಷ ರೂ. ವೌಲ್ಯದ ಈ ದ್ವಿದಳ ಧಾನ್ಯಗಳನ್ನು ಅಂಗಡಿಗೆ ದಾಳಿ ಮಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇಂದು ಬೈಕಂಪಾಡಿ ಎಪಿಎಂಸಿ ಪ್ರದೇಶದಲ್ಲಿ 15 ದಾಸ್ತಾನು ಮಳಿಗೆಗಳಿಗೆ ದಾಳಿ ಮಾಡಿರುವ ಅಧಿಕಾರಿಗಳು ದ್ವಿದಳ ಧಾನ್ಯಗಳ ಅಕ್ರಮ ದಾಸ್ತಾನು ಬಗ್ಗೆ ಪರೀಶೀಲನೆ ನಡೆಸಿದರು. ಆದರೆ ಅಲ್ಲಿ ಯಾವುದೇ ಅಕ್ರಮ ದಾಸ್ತಾನು ಪತ್ತೆಯಾಗಿಲ್ಲ. ಕಳೆದೊಂದು ವಾರದಿಂದ ದ್ವಿದಳ ಧಾನ್ಯಗಳ ಅಕ್ರಮ ದಾಸ್ತಾನುಗಳನ್ನು ಪರಿಶೀಲಿಸುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಗರದ ವಿವಿಧ ಸಗಟು ವ್ಯಾಪಾರ ಗೋದಾಮುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ನಿರ್ದೇಶನದಂತೆ ಆಹಾರ ಇಲಾಖೆಯ ಅಧಿಕಾರಿಗಳಾದ ಎಂ.ಆರ್.ಭಟ್, ಸುನಂದಾ, ಆಹಾರ ಶಿರಸ್ತೇದಾರ ವಾಸು ಶೆಟ್ಟಿ, ಫುಡ್ ಇನ್ಸ್ ಪೆಕ್ಟರ್‌ಗಳಾದ ಗಣೇಶ್ ನಾರಾಯಣ ಆಳ್ವ, ಶ್ರೀನಿವಾಸ್, ಚಂದ್ರಶೇಖರ್ ಗಟ್ಟಿ, ಪಾವಡಪ್ಪ ಮತ್ತು ಆಹಾರ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
