ಕನ್ನಡ ವಾರ್ತೆಗಳು

ವಿಕ್ರಮ್ ಬೋಳೂರು ಕೊಲೆ ಪ್ರಕರಣ :ಐದು ಆರೋಪಿಗಳು ಪೊಲೀಸ್ ವಶ..?

Pinterest LinkedIn Tumblr

Vikky_Bolur_Murder_1

ಮಂಗಳೂರು,ಅ.28: ಬಾನುವಾರ ತಡ ರಾತ್ರಿ ತೊಕ್ಕೊಟ್ಟಿನಲ್ಲಿ ಗ್ಯಾಂಗ್‌ವಾರ್‌ಗೆ ಬಲಿಯಾದ ಕೋಡಿಕಲ್ ನಿವಾಸಿ ವಿಕ್ರಮ್ ಕೆ. ಬೋಳೂರು(33) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಸೋಮವಾರ ಮುಂಜಾನೆ ಸುಮಾರು 2 ಗಂಟೆಯ ಹೊತ್ತಿಗೆ ವಿಕ್ರಮ್ ಆರ್. ಬೋಳೂರು ಮೆಹಂದಿ ಕಾರ್ಯಕ್ರಮವನ್ನು ಮುಗಿಸಿ ಅಭಿಷೇಕ್ ಎಂಬವರೊಂದಿಗೆ ಬೈಕ್‌ನಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದಾಗ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ವಿಕ್ರಮ್‌ನನ್ನು ಹತ್ಯೆಗೈದಿದ್ದರು.

ಸೈಕೋ ವಿಕ್ಕಿ ಎಂಬಾತನ ತಂಡ ಈ ಕೃತ್ಯ ನಡೆಸಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಘಟನೆ ವಿವರ :

ಸೈಕೋ ವಿಕ್ಕಿ ತಂಡದಿಂದ ರೌಡಿ ಶೀಟರ್‌ ವಿಕ್ರಂ ಯಾನೆ ವಿಕ್ಕಿ ಬೋಳಾರ್ ಹತ್ಯೆ

ಉಳ್ಳಾಲ: ಕೋಡಿಕಲ್‌ ನಿವಾಸಿ ರೌಡಿ ಶೀಟರ್‌ ವಿಕ್ರಂ ಯಾನೆ ವಿಕ್ಕಿ ಬೋಳೂರು(29)ನನ್ನು ರವಿವಾರ ತಡರಾತ್ರಿ ತಂಡವೊಂದು ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ತಲವಾರಿನಿಂದ ಕೊಚ್ಚಿ ಕೊಲೆಗೈದಿದೆ. ಸ್ಕಾರ್ಪಿಯೋದಲ್ಲಿ ಬಂದಿದ್ದ ತಂಡ ಈ ಕೃತ್ಯ ಎಸಗಿ ಪರಾರಿಯಾಗಿದೆ.

ಕೊಲೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿ ರೌಡಿ ಶೀಟರ್‌ನಲ್ಲಿದ್ದ ವಿಕ್ಕಿ ಬೋಳೂರುನ ಸ್ನೇಹಿತನಾಗಿದ್ದು ಇದೀಗ ಬದ್ಧ ವೈರಿಧಿಯಾಗಿರುವ ಹುಬ್ಬಳಿ ಮೂಲದ ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಕೃತ್ಯದ ಪ್ರಧಾನ ಆರೋಪಿಯಾಗಿದ್ದಾನೆ.

ಹತ್ಯೆಯ ಬಳಿಕ ಸೈಕೋ ವಿಕ್ಕಿ ತಂಡ ಕುತ್ತಾರು ಮಾರ್ಗವಾಗಿ ಎಲಿಯಾರ್‌ನತ್ತ ತೆರಳಿದೆ. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ಟಯರ್‌ ಪಂಕ್ಚರ್‌ ಆದ ಕಾರಣ ವಾಹನವನ್ನು ಅಲ್ಲೇ ತೊರೆದು ಪರಾರಿಧಿಯಾಗಿದ್ದಾರೆ. ಸೈಕೋ ವಿಕ್ಕಿಯೊಂದಿಗೆ ಗೌತಮ್‌ ಮತ್ತು ಗೌರೀಶ್‌ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೃತ ವಿಕ್ಕಿ ಬೋಳೂರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸಹೋದರಿ ವಿದೇಶದಿಂದ ಬರುವ ಹಿನ್ನೆಲೆಯಲ್ಲಿ ಮಂಗಳವಾರ ಶವ ಸಂಸ್ಕಾರ ನಡೆಯಲಿದೆ ಎನ್ನಲಾಗಿದ್ದು, ಮೃತದೇಹವನ್ನು ವೆನ್ಲಾಕ್‌ ಶವಾಗಾರದಲ್ಲಿ ಇಡಲಾಗಿದೆ.

ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಸೇರಿದಂತೆ ಬೇರೆ ಬೇರೆ ಗ್ಯಾಂಗ್‌ವಾರ್‌ಗಳಲ್ಲಿ ತೊಡಗಿಸಿಕೊಂಡಿದ್ದ 20ಕ್ಕೂ ಹೆಚ್ಚು ಮಂದಿ ಕುಂಪಲದಲ್ಲಿ ನಡೆಯುತ್ತಿದ್ದ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡ್ಯಾನ್ಸ್‌ ಮಾಡುತ್ತಿದ್ದಾಗ ಸ್ಥಳೀಯ ಯುವಕನೊಬ್ಬನಿಗೆ ಮತ್ತು ಸೈಕೋ ವಿಕ್ಕಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಕುಂಪಲದ ಇನ್ನೋರ್ವ ಯುವಕ ಸೈಕೋ ವಿಕ್ಕಿಯ ವಿರೋಧಿಯಾಗಿರುವ ವಿಕ್ಕಿ ಬೋಳಾರ್‌ಗೆ ಫೋನ್‌ ಮಾಡಿ ಸೈಕೋ ವಿಕ್ಕಿ ಇಲ್ಲಿ ಗಲಾಟೆ ಮಾಡುತ್ತಿರುವ ವಿಚಾರ ತಿಳಿಸಿದ್ದ.

ಮಂಗಳೂರಿನಲ್ಲಿ ದಸರಾ ಸಂಭ್ರಮದಲ್ಲಿ ಹುಲಿ ವೇಷ ಹಾಕಿದ್ದ ತಂಡವೊಂದರ ಪಾರ್ಟಿಯಲ್ಲಿದ್ದ ವಿಕ್ಕಿ ಬೋಳಾರ್‌ ದೂರವಾಣಿ ಕರೆಯಂತೆ ತನ್ನಿಬ್ಬರು ಸ್ನೇಹಿತರಾದ ಚರಣ್‌ ಮತ್ತು ಅಭಿಲಾಷ್‌ ಎಂಬಾತನನ್ನು ಎಫ್‌ಝಿ ಬೈಕ್‌ನಲ್ಲಿ ಕುಳ್ಳಿರಿಸಿ ಮಂಗಳೂರಿನಿಂದ ಹೊರಟಿದ್ದು, ಕುಂಪಲ ಬೈಪಾಸ್‌ ಬಳಿ ಕುಂಪಲ ರಸ್ತೆಗೆ ಬೈಕನ್ನು ತಿರುಗಿಸುವಾಗ ಮೆಹಂದಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಸೈಕೋ ವಿಕ್ಕಿಯ ಕಾರು ಎದುರಾಗಿದೆ. ಸೈಕೋ ವಿಕ್ಕಿಯ ಜತೆಯಲ್ಲಿದ್ದವರು ವಿಕ್ಕಿ ಬೋಳಾರ್‌ನನ್ನು ನೋಡುತ್ತಿದ್ದಂತೆ ಬೋಳಾರ್‌ನ ಬೈಕ್‌ನ ಮೇಲೆ ಕಾರನ್ನು ಹರಿಸಲು ಯತ್ನಿಸಿದ್ದು, ಬೋಳಾರ್‌ ತನ್ನ ಸ್ನೇಹಿತರೊಂದಿಗೆ ಸೈಕೋ ವಿಕ್ಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ತೊಕ್ಕೊಟ್ಟು ಬಳಿ ವಿಕ್ಕಿ ಬೋಳಾರ್‌ನ ತಂಡಕ್ಕೆೆ ಬಲಿಯಾಗಿದ್ದಾನೆ.

ವಿಕ್ಕಿ ಬೋಳಾರ್‌ ಗ್ಯಾಂಗ್‌ವಾರ್‌ಗಳಲ್ಲಿ ಸಕ್ರಿಯನಾಗಿದ್ದ. ಎರಡು ಕೊಲೆ ಆರೋಪ, ಕೊಲೆ ಯತ್ನ, ಹಲ್ಲೆ ಸೇರಿದಂತೆ 10 ಪ್ರಕರಣಗಳು ಬರ್ಕೆ, ಉರ್ವ ಪೊಲೀಸ್‌ ಠಾಣೆ ಸೇರಿದಂತೆ ಮಂಗಳೂರಿನ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿದ್ದವು. ಬಿಜೈ ರಾಜಾನ ಕೊಲೆಯಲ್ಲಿ ಪರೋಕ್ಷವಾಗಿ ಸಹಕರಿಸಿದ್ದ ಹಿನ್ನೆಲೆಯಲ್ಲಿ ಖುಲಾಸೆಗೊಂಡಿದ್ದು, ಅಳಕೆಯ ಜಾನ್‌ ಪಿಂಟೋ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪ್ರಕರಣ ಮುಂದುವರಿದಿದೆ. ಉಳಿದಂತೆ ಕೋರಿ ಅಶೋಕ್‌ ಸಹೋದರ ಪ್ರದೀಪ್‌ ಕೊಲೆಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.

ಮೂಲತಃ ಹುಬ್ಬಳ್ಳಿಯವ..

ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಮೂಲತಃ ಹುಬ್ಬಳ್ಳಿಯವ. ಹುಬ್ಬಳ್ಳಿಯಲ್ಲಿ ಆತನ ಮೇಲೆ ಹಲವು ಪ್ರಕರಣಗಳಿದ್ದು, ಮಂಗಳೂರಿನಲ್ಲಿ ದೊಡ್ಡ ಪ್ರಕರಣಗಳಿಲ್ಲ.

ಸೈಕೋ ವಾಹನ ಚಾಲನೆಯಲ್ಲಿ ಪರಿಣತನಾಗಿದ್ದು, ಸ್ಕಾರ್ಪಿಯೋವನ್ನು ಅದೇ ವೇಗದಲ್ಲಿ ಚಾಲನೆ ನಡೆಸಿ ಬೈಕ್‌ನಲ್ಲಿದ್ದ ವಿಕ್ಕಿ ತಂಡವನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದ.

ಬೋಳಾರ ವಿಕ್ಕಿ ಬಂದಿದ್ದ ಎಫ್‌ಝಿ ಬೈಕ್‌ ಸ್ಕಾರ್ಪಿಯೋ ಕಾರಿನ ಎದುರು ಪಾರಾಗಲು ಬಹಳ ಅವಕಾಶವಿತ್ತು ಆದರೆ ವಿಕ್ಕಿಯೊಂದಿಗೆ ಇನ್ನಿಬ್ಬರು ಇದ್ದರಿಂದ ನಿರೀಕ್ಷಿತ ವೇಗದಲ್ಲಿ ಸಾಗಲು ಸಾಧ್ಯವಾಗಿಲ್ಲ. ವಿಕ್ಕಿ ಸ್ಕಾರ್ಪಿಯೋದಲ್ಲಿ ಬೈಕನ್ನು ಕುಂಪಲ ಬೈಪಾಸ್‌ನಿಂದ ಸುಮಾರು ಒಂದು ಕಿ.ಮೀ. ದೂರದವರೆಗೆ ಚೇಸಿಂಗ್‌ ಮಾಡಿಧಿಕೊಂಡು ಬಂದಿದ್ದು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಬೈಕ್‌ ರಾಷ್ಟ್ರೀಯ ಹೆದ್ದಾರಿ 66ರಿಂದ ಮಂಗಳೂರು ವಿ.ವಿ. ರಸ್ತೆಗೆ ತಿರುಗಿಸಿದ್ದು, ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯ ಕಾರಣ ವಿನಮ್ರ ಬಾರ್‌ ಬಳಿ ಸ್ಕಾರ್ಪಿಯೋ ಕಾರು ಬೈಕನ್ನು ಅಡ್ಡ ಹಾಕುವಲ್ಲಿ ಯಶಸ್ವಿಯಾಗಿದ್ದು, ಬೈಕ್‌ನಲ್ಲಿದ್ದ ವಿಕ್ಕಿ ಬೋಳಾರ್‌ ಬೈಕ್‌ನ ಬಳಿಯೇ ಉಳಿದರೆ ಒಟ್ಟಿಗಿದ್ದ ಚರಣ್‌ ಮತ್ತು ಅಭಿಲಾಷ್‌ ಜೀವ ಉಳಿಸಿಕೊಳ್ಳಲು ಓಡಿದ್ದು, ಈ ಸಂದರ್ಭದಲ್ಲಿ ಸೈಕೋ ಮತ್ತು ತಂಡ ಅನಾಯಾಸವಾಗಿ ವಿಕ್ಕಿ ಬೋಳಾರ್‌ನನ್ನು ಮುಗಿಸಿ ಹಾಕಿತ್ತು.

ಘಟನೆಗೆ ಮುನ್ನ ಕುಂಪಲದಿಂದ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಸ್ಕಾರ್ಪಿಯೋ ಮತ್ತು ಬೈಕನ್ನು ನೋಡಿದ ತೊಕ್ಕೊಟ್ಟಿನ ರಾತ್ರಿ ಪಾಳಿಯ ಪೊಲೀಸರು ಈ ಕುರಿತು ಉಳ್ಳಾಲ ಪೊಲೀಸ್‌ ಪಿಸಿಆರ್‌ಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಧಾವಿಸಿ ಬಂದ ಪೊಲೀಸರು ವಿನಮ್ರ ಹೊಟೇಲ್‌ ಬಳಿ ರಕ್ತಸಿಕ್ತವಾಗಿ ಬಿದ್ದಿದ್ದ ವಿಕ್ರಂನನ್ನು ಆಸ್ಪತ್ರೆಗೆ ದಾಖಲಿಸಿದರು.

ಅಪರಾಧಿಗಳ ಪತ್ತೆಗೆ ತಂಡ ರಚನೆ:

ಗ್ಯಾಂಗ್‌ವಾರ್‌ನಿಂದ ಹತ್ಯೆಗೀಡಾಗಿರುವ ವಿಕ್ಕಿ ಯಾನೆ ವಿಕ್ರಮ್‌ ಬೋಳಾರ್‌ನ ಹತ್ಯೆಯ ಆರೋಪಿಗಳನ್ನು ಪತ್ತೆಹಚ್ಚಲು ಉಳ್ಳಾಲ, ಕೊಣಾಜೆ, ಸೇರಿದಂತೆ ವಿವಿಧ ತಂಡಗಳನ್ನು ರಚಿಸಿ ಶೋಧಕಾರ್ಯ ಮುಂದುವರಿಸಿದ್ದು, ಸಿಸಿಬಿ ಪೊಲೀಸರು ಆರೋಪಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತೊಕ್ಕೊಟ್ಟು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪರಾಧಿಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಕ್ಕಿ ಬೋಳಾರ್‌ ಹತ್ಯೆ ಪೂರ್ವ ಯೋಜಿತವಾಗಿರಲಿಲ್ಲ. ಎರಡೂ ತಂಡಗಳ ನಡುವೆ ವೈಷಮ್ಯ ಇದ್ದರೂ ರವಿವಾರವೇ ಹತ್ಯೆ ನಡೆಸುವ ಯೋಜನೆ ಹಾಕಿರಲಿಲ್ಲ. ವಿಕ್ಕಿ ಬೋಳಾರ್‌ ತಾನಾಗಿಯೇ ಸೈಕೋ ವಿಕ್ಕಿಯ ಬಳಿ ತೆರಳುವ ಮೂಲಕ ಹತ್ಯೆಗೀಡಾಗಿದ್ದಾನೆ.

ಸೈಕೋ ವಿಕ್ಕಿ ಸೇರಿದಂತೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಂಡ ವಿಕ್ಕಿ ಶೆಟ್ಟಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದರು ಎನ್ನುವ ಮಾಹಿತಿ ಇದೆ. ಆದರೆ ಈ ಹತ್ಯೆಯಲ್ಲಿ ಅವರ ಕೈವಾಡವಿಲ್ಲ ಎನ್ನುತ್ತಿದೆ ಮೂಲವೊಂದು. ಇನ್ನೊಂದು ಮೂಲದ ಪ್ರಕಾರ ವಿಕ್ಕಿ ಬೋಳಾರ್‌ ತಂಡ ರವಿ ಪೂಜಾರಿ ಗ್ಯಾಂಗ್‌ನಲ್ಲಿ ಗುರುತಿಕೊಂಡಿತ್ತು ಎನ್ನುವ ಮಾಹಿತಿ ಇದೆ. ಎರಡೂ ತಂಡಗಳು ಮೇಲ್ನೋಟಕ್ಕೆ ಮಂಗಳೂರಿನಲ್ಲಿಯೇ ಗ್ಯಾಂಗ್‌ವಾರ್‌ನಲ್ಲಿ ತೊಡಗಿಸಿಕೊಂಡಿರುವುದು ಮಾಹಿತಿಯಿಂದ ತಿಳಿದು ಬಂದಿದೆ.

ಮೆಹಂದಿ ಪಾರ್ಟಿಯಲ್ಲಿ ನಡುರಾತ್ರಿ ಸುಮಾರು 1 ಗಂಟೆಯ ಬಳಿಕ ವಿಕ್ಕಿ ಬೋಳಾರ್‌ಗೆ ದೂರವಾಣಿ ಕರೆ ಬಂದಿತ್ತು. ದೂರವಾಣಿ ಕರೆಯಂತೆ ತನ್ನ ಆಪ್ತರಿಬ್ಬರೊಂದಿಗೆ ಸೈಕೋನಿಗೆ ಮುಹೂರ್ತ ಇಡಲು ಹೊರಟಿದ್ದರು.

ಮೆಹಂದಿ ಪಾರ್ಟಿ ನಡೆಯುವ ಮನೆ ಬಳಿಯೇ ಸೈಕೋನಿಗೆ ಸ್ಕೆಚ್‌ ಹಾಕಿ ಹೊರಟಿದ್ದ ತಂಡದ ಲೆಕ್ಕಾಚಾರ ತಪ್ಪಿದ್ದು, ಮದುವೆ ಮನೆಯವರ ಒತ್ತಡದಿಂದ ಇತ್ತ ಸೈಕೋ ತಂಡ ಮತ್ತು ಸ್ಥಳೀಯ ತಂಡಕ್ಕೆ ಮಾತಿನ ಚಕಮಿಕಿ ನಡೆದು ವಿಕೋಪಕ್ಕೆ ತೆರಳುತ್ತಿದ್ದಾಗ, ಮದುವೆ ಮನೆಯಲ್ಲಿ ಗಲಾಟೆ ನಡೆದರೆ ಪೊಲೀಸರು ಬಂದು ಮದುವೆಗೆ ಅಡ್ಡಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮದುಮಗನ ವಿನಂತಿಯಂತೆ ಕಾರ್ಯಕ್ರಮದ ನಡುವೆಯೇ ಸೈಕೋ ವಿಕ್ಕಿ ಮತ್ತು ಆತನ ತಂಡದಲ್ಲಿದ್ದ ಸ್ನೇಹಿತರು ಹೊರಟಿದ್ದರು. ಇತ್ತ ಸೈಕೋನಿಗೆ ಪಾಠ ಕಲಿಸುವ ಹುಮ್ಮಸ್ಸಿನಲ್ಲಿ ಬರುತ್ತಿದ್ದ ವಿಕ್ಕಿ ಬೋಳಾರ್‌ಗೆ ಸೈಕೋ ವಿಕ್ಕಿ ಎದುರು ಬದುರಾದಾಗ ಎಲ್ಲ ಲೆಕ್ಕಾಚಾರ ತಪ್ಪಿ ತನ್ನ ಸಾವಿಗೆ ತಾನೇ ಮುನ್ನುಡಿ ಬರೆದಂತಾಗಿದೆ.

ಮೃತ ವಿಕ್ಕಿ ಬೋಳಾರ್‌ ಮತ್ತು ಸೈಕೋ ವಿಕ್ಕಿ ನಾಲ್ಕು ವರ್ಷದ ಹಿಂದೆ ಗೆಳೆಯರಾಗಿದ್ದರು. ವಿಕ್ಕಿ ಬೋಳಾರ್‌ ಕೋರಿ ಅಶೋಕನ ವಿರುದ್ಧ ಮಾತನಾಡಿದ ವಿಚಾರವನ್ನು ಸೈಕೋ ವಿಕ್ಕಿ ಅಶೋಕ್‌ನಿಗೆ ತಿಳಿಸಿದ್ದು ಈ ವಿಚಾರದಲ್ಲಿ ವಿಕ್ಕಿ ಬೋಳಾರ ನೇತೃತ್ವದ ತಂಡ ಸೈಕೋ ವಿಕ್ಕಿಯನ್ನು ಅಳಕೆ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿತ್ತು.

ಈ ಘಟನೆಯ ಬಳಿಕ ಸೈಕೋ ವಿಕ್ಕಿಯು ವಿಕ್ರಮ್‌ ಬೋಳಾರ್‌ನನ್ನು ಮುಗಿಸುವ ಯೋಜನೆ ರೂಪಿಸಿದ್ದ, ನಾಲ್ಕು ತಿಂಗಳ ಹಿಂದೆ ಬೋಳಾರ ತಂಡದ ಲತೇಶ್‌ನ ಕೊಲೆಗೆ ಯತ್ನಿಸಿದ್ದ ಸೈಕೋ ವಿಕ್ಕಿ ವಿಫಲನಾಗಿದ್ದ, ಅದೇ ತಂಡದ ಪ್ರಮುಖನಾಗಿದ್ದ ವಿಕ್ಕಿ ಬೋಳಾರ್‌ ಅನಾಯಾಸವಾಗಿ ಸೈಕೋ ಕೈಗೆ ಸಿಗುವ ಮೂಲಕ ಹತನಾಗಿದ್ದಾನೆ.

ವಿಕ್ಕಿ ಬೋಳಾರ್‌ ತನ್ನ ಸಾವನ್ನು ತಾನೇ ಆಹ್ವಾನಿಸಿದಂತಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿದ್ದ ವಿಕ್ಕಿ ಬೋಳಾರ್‌ ಕುಂಪಲಕ್ಕೆ ಹೊರಡುವಾಗ ಆತನ ಸ್ನೇಹಿತರು ಎಚ್ಚರಿಸಿದ್ದರು. ಕುಂಪಲದಲ್ಲಿ ಕಡಿಮೆ ಎಂದರೂ ಸುಮಾರು 20ಕ್ಕೂ ಹೆಚ್ಚು ಸೈಕೋ ವಿಕ್ಕಿಯ ಸ್ನೇಹಿತರಿರುವಾಗ ನೀನು ಹೇಗೆ ಅವರನ್ನು ಎದುರಿಸುತ್ತಿ ಎಂದು ಕೇಳಿದ್ದರು ಎಂದು ಮೂಲವೊಂದು ತಿಳಿಸಿದೆ.

Write A Comment