ಬೆಂಗಳೂರು, ಅ. 27: ದೇಶದಲ್ಲಿ ಆಂತರಿಕ ಅಸಹಿಷ್ಣುತೆಯ ಮಟ್ಟ ಅತಿರೇಕಕ್ಕೆ ತಲುಪಿದ್ದು, ಇಂತಹ ದುರ್ಘಟನೆಗಳ ವಿರುದ್ಧ ಯುವಕರು ಸಿಡಿದೇಳಬೇಕು ಎಂದು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ಸಿಂಗ್ ಕರೆ ನೀಡಿದ್ದಾರೆ.
ನಗರದ ಪ್ರೆಸ್ಕ್ಲಬ್ನ ಸಭಾಂಗಣದಲ್ಲಿ ಪತ್ರಕರ್ತರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಹಿತಿಗಳ ಕೊಲೆ, ಕೋಮು ಗಲಭೆಗಳು ದೇಶದ ಶಾಂತಿಯನ್ನು ಕದಡುತ್ತಿವೆ. ದೇಶದಲ್ಲಿ ಪುನಃ ಶಾಂತಿ ನೆಲೆಸುವಲ್ಲಿ ಯುವಕರು ಒಂದುಗೂಡುವ ಅಗತ್ಯತೆ ಇದೆ ಎಂದು ತಿಳಿಸಿದರು.
ಸಮಾಜದಲ್ಲಿ ಅಶಾಂತಿಯನ್ನು ತಂದೊಡ್ಡುವ ಘಟನೆಗಳು ಮತ್ತು ಸಂಘಟನೆಗಳನ್ನು ಮಟ್ಟಹಾಕಲು ದೇಶದಲ್ಲಿನ ಯುವಕರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ‘ಯೂತ್ ಫಾರ್ ಶಹೀದ್-ಎ-ಆಝಂ’ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ವಿಚಾರಗಳು ಇದಕ್ಕೆ ಸಹಕಾರಿಯಾಗಲಿವೆ ಎಂದು ಅವರು ಇದೇ ವೇಳೆ ತಿಳಿಸಿದರು.
ಜಗತ್ತಿನಲ್ಲೇ ಭಾರತ ದೊಡ್ಡ ಯುವ ಶಕ್ತಿಯನ್ನು ಹೊಂದಿದೆ. ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವ ಶಕ್ತಿ ತಟಸ್ಥವಾಗಿರುವುದು ದೇಶಕ್ಕೆ ಮಾರಕ. ಹಾಗಾಗಿ ಯುವ ಸಮುದಾಯ ಜಾಗೃತವಾಗಬೇಕು. ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಂಘಟನೆಯ ಮೂಲಕ ಧರ್ಮದ ಹೆಸರಿನಲ್ಲಿ ಸೃಷ್ಟಿಸುತ್ತಿರುವ ಅಸಮಾನತೆಯನ್ನು ತೊಡೆದುಹಾಕಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ದೇಶದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವ ಉದ್ದೇಶದಿಂದ ಸಂಘಟನೆ ಹುಟ್ಟುಹಾಕಲಾಗಿದೆಯೇ ಹೊರತು, ರಾಜಕೀಯ ಪ್ರೇರಿತವಾದುದಲ್ಲ ಎಂದು ಸ್ಪಷ್ಟಪಡಿಸಿದರು.
ದೇಶಕ್ಕೆ ಸ್ವಾತಂತ್ರ ಬಂದು 68 ವರ್ಷಗಳೇ ಕಳೆದಿದ್ದರೂ, ರಾಜಕೀಯ ಪಕ್ಷಗಳು ನಾಗರಿಕರ ಮೇಲೆ ಒತ್ತಡ ಹೇರುವ ಪ್ರವೃತ್ತಿಯನ್ನು ಮುಂದು ವರಿಸಿವೆ. ಜಾತಿ, ಧರ್ಮದ ಹೆಸರಲ್ಲಿ ಜನರನ್ನು ವಿಂಗಡಿಸಿ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ವೈಯಕ್ತಿಕವಾಗಿ ಟೀಕೆ ಮಾಡಿದ ಅಭಿತೇಜ್ ಸಿಂಗ್ ಒಂದು ಪಕ್ಷ ಜಾತ್ಯತೀತತೆಯ ಬಗ್ಗೆ ಯೋಚಿಸಿದರೆ, ಇನ್ನೊಂದು ರಾಷ್ಟ್ರೀಯತೆಯ ಬಗ್ಗೆ ಚಿಂತಿಸುತ್ತಿದೆ. ಇದರಿಂದ ಜನರ ಭಾವೈಕ್ಯತೆಗೆ ಮಾರಕವಾಗಿದೆ ಎಂದು ಆರೋಪಿಸಿದ ಅವರು, ಮಾನವೀಯತೆಯ ದೃಷ್ಟಿಯಿಂದ ಸರ್ವರನ್ನು ಒಗ್ಗೂಡಿಸಿ ದೇಶವನ್ನು ಮುನ್ನಡೆಸಬೇಕಿದೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಡಿವೈಎಫ್ಐನ ಪದಾಧಿಕಾರಿಗಳಾದ ಅನಂತ್ನಾಯ್ಕಿ, ರಾಜಶೇಖರ್ ಉಪಸ್ಥಿತರಿದ್ದರು.
ಕರ್ನಾಟಕ