ಕರ್ನಾಟಕ

ಕೆಎಫ್‌ಸಿ ಬರ್ಗರ್‌ನಲ್ಲಿ ಜೀವಂತ ಹುಳ!: ಹುಳ ತಿನ್ನಿಸಿ ಪಾರಾಗುವ ಪ್ರತಿಷ್ಠಿತ ಫಾಸ್ಟ್‌ಫುಡ್ ಕಂಪೆನಿಗಳು

Pinterest LinkedIn Tumblr

KFCಮಂಗಳೂರು, ಅ.27: ನಗರದ ಸಿಟಿ ಸೆಂಟರ್ ಮಾಲ್‌ನ ಕೆಎಫ್‌ಸಿ ಮಳಿಗೆಯಲ್ಲಿ ಸೋಮವಾರ ಗ್ರಾಹಕರೊಬ್ಬರು ಖರೀದಿಸಿದ ಚಿಕನ್ ಬರ್ಗರ್‌ನಲ್ಲಿ ಜೀವಂತ ಹುಳ ಪತ್ತೆಯಾಗಿದೆ. ಇದು ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಗಳ ಫಾಸ್ಟ್‌ಫುಡ್‌ಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸೋಮವಾರ ಮಂಗಳೂರಿನ ಕೆಎಫ್‌ಸಿ ಮಳಿಗೆಯಲ್ಲಿ ಪ್ರಶಾಂತ್ ಎಂಬವರು ಚಿಕನ್ ಬರ್ಗರ್ ಖರೀದಿಸಿದ್ದರು.
ಅದನ್ನು ತಿನ್ನುತ್ತಿದ್ದಾಗ ಅದರಲ್ಲಿ ಜೀವಂತ ಹುಳ ಕಂಡು ಬಂದಿದೆ.ಈ ಬಗ್ಗೆ ಮಳಿಗೆಯ ಸಿಬ್ಬಂದಿಯಲ್ಲಿ ಗ್ರಾಹಕ ಪ್ರಶಾಂತ್ ವಿಚಾರಿಸಿದಾಗ ಅದು ತರಕಾರಿಯಿಂದ ಬಂದಿರಬಹುದು ಎಂಬ ಉಡಾಫೆಯ ಉತ್ತರ ಸಿಕ್ಕಿದೆ. ಮಾತ್ರವಲ್ಲದೆ, ಪ್ರಶಾಂತ್ ತಮ್ಮ ಮೊಬೈಲ್‌ನಲ್ಲಿ ಬರ್ಗರ್‌ನಲ್ಲಿದ್ದ ಹುಳುವಿನ ಫೋಟೊ ತೆಗೆಯಲು ಹೊರಟಾಗ ಸಿಬ್ಬಂದಿ ತಡೆಯೊಡ್ಡಿದ ಪ್ರಸಂಗವೂ ನಡೆದಿದೆ. ಆದರೆ ತಾನು ಹಣಕೊಟ್ಟು ಖರೀದಿಸಿದ ಆಹಾರ ಇದಾಗಿದ್ದು, ಇದರ ಮೇಲೆ ತನ್ನ ಹಕ್ಕಿದೆ ಎಂದು ಹೇಳಿದ ಪ್ರಶಾಂತ್ ಫೋಟೊ ತೆಗೆದಿದ್ದಾರೆ.

ಆದರೆ ಸಿಬ್ಬಂದಿ ತಕ್ಷಣ ಆ ಬರ್ಗರನ್ನು ಅಲ್ಲಿಂದ ತೆರವುಗೊಳಿಸಿ, ಹಣ ವಾಪಸ್ ನೀಡುವ ಆಮಿಷದ ಮೂಲಕ ಪ್ರಶಾಂತ್‌ರನ್ನು ಸಮಾಧಾನಪಡಿಸುವ ವಿಫಲ ಪ್ರಯತ್ನ ಮಾಡಿದ್ದಾರೆ. ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ ಸಹಿತ ಪ್ರತಿಷ್ಠಿತ ಕಂಪೆನಿಗಳ ಫಾಸ್ಟ್‌ಫುಡ್‌ಗಳಲ್ಲಿ ಇಂತಹ ಸಮಸ್ಯೆ ಈ ಹಿಂದೆಯೂ ಕಂಡುಬಂದಿದೆ. ಬಹಳಷ್ಟು ಸಂದರ್ಭಗಳಲ್ಲಿ ಗ್ರಾಹಕರು ಮಳಿಗೆಯ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ಅಲ್ಲಿಗೆ ಬಿಟ್ಟು ಬಿಡುತ್ತಾರೆ. ದೂರು ನೀಡಿ, ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸುವ ಗೋಜಿಗೆ ಹೋಗುವುದಿಲ್ಲ. ಅದಕ್ಕೆ ಕಾರಣವೂ ಇದೆ. ಆಹಾರ ಸುರಕ್ಷತೆಯ ನೈಜತೆ ಬಗ್ಗೆ ಕೋರ್ಟ್ ಕಚೇರಿ ಎಂದು ಅಲೆದಾಡಲು ಸಮಯ ಬೇಕು, ಹಣ ಬೇಕು, ಮಾತ್ರವಲ್ಲದೆ ತಾಳ್ಮೆಯೂ ಬೇಕಾಗುತ್ತದೆ. ಹಾಗಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬರುವುದು ಅಪರೂಪ. ರುಚಿ ರುಚಿಯಾಗಿ ಕಡಿಮೆ ಅವಧಿಯಲ್ಲಿ ಸಿಗುವ ಇಂತಹ ಫಾಸ್ಟ್‌ಫುಡ್‌ಗಳನ್ನು ಇಷ್ಟಪಡುವ ನಾವು, ಸುರಕ್ಷತೆ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದೇ ಇಲ್ಲ ಎಂದೇ ಹೇಳಬೇಕು. ಸಂಶಯ ನಿವಾರಿಸುವವರು ಯಾರು?
ಕೆಎಫ್‌ಸಿಯ ಚಿಕನ್‌ನ ನೈಜತೆ, ಖಾದ್ಯ ತಯಾರಾಗುವ ವಿಧಾನ ಹಾಗೂ ಅದರ ಸುರಕ್ಷತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಗಳಿವೆ. ಕೆಎಫ್‌ಸಿಯಲ್ಲಿ ಚಿಕನ್ ಬೆಳೆಸಲು ದೊಡ್ಡ ಪ್ರಮಾಣದಲ್ಲಿ ಆ್ಯಂಟಿ ಬಯೋಟಿಕ್ಸ್‌ಗಳನ್ನೂ ಬಳಸುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿವೆ. ಆದರೆ ಹೀಗೆ ಆರೋಪ ಬಂದಾಗಲೆಲ್ಲ ತನ್ನ ಚಿಕನ್ ಸುರಕ್ಷಿತ ಎಂದು ಸ್ಪಷ್ಟೀಕರಣ ನೀಡುವ ಕೆಎಫ್‌ಸಿ ಆ್ಯಂಟಿ ಬಯೋಟಿಕ್ಸ್ ಬಳಕೆ ಕುರಿತು ತುಟಿ ಬಿಚ್ಚುವುದಿಲ್ಲ. ಮಾರ್ಚ್ 2015ರಲ್ಲಿ ಕಿನ್ಯಾದ ಗ್ರಾಹಕ ಹಕ್ಕು ಕುರಿತ ಫೆಡರೇಶನ್‌ನ ಕೆಎಫ್‌ಸಿ ತಿನ್ನುವವರು ಅತ್ಯಂತ ಜಾಗರೂಕರಾಗಿರಬೇಕು ಎಂದು ಜಾಗೃತ ಸಂದೇಶ ನೀಡಿತ್ತು. ಈ ಹಿಂದೆ ಚೀನಾದ ಶಾಂಘೈ ಫುಢ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಕೂಡಾ, ಕೆಎಫ್‌ಸಿಯಲ್ಲಿ ಮಿತಿ ಮೀರಿದ ಆ್ಯಂಟಿ ಬಯೋಟಿಕ್ಸ್ ಇದೆ ಎಂದು ಪರೀಕ್ಷೆಯ ಬಳಿಕ ಹೇಳಿತ್ತು. ಇದರಿಂದ ಕೆಎಫ್‌ಸಿಯ ಅತಿ ದೊಡ್ಡ ಮಾರುಕಟ್ಟೆಯಾದ ಚೀನಾದಲ್ಲಿ ಅದರ ಮಾರಾಟ ತೀವ್ರ ಕುಸಿತ ಕಂಡಿತ್ತು ಎಂಬುದು ಗಮನಾರ್ಹ. ಕೆಎಫ್‌ಸಿ ವಿರುದ್ಧ ಇಂತಹ ದೂರುಗಳು ನೂರಾರು ಸಂಖ್ಯೆಯಲ್ಲಿ ಭಾರತದ ವಿವಿಧೆಡೆ ಹಾಗೂ ವಿದೇಶಗಳಲ್ಲಿ ಆಗಾಗ ಕೇಳಿಬಂದಿದೆ. ಈ ಕುರಿತ ಹಲವಾರು ಅಧ್ಯಯನ ದಾಖಲೆಗಳು, ವೀಡಿಯೊಗಳು ಕೂಡ ಬಿಡುಗಡೆಯಾಗಿವೆ.

ಜೀವಿತಾವಧಿ ಕೇವಲ 35 ದಿನಗಳು!
ಕೆಎಫ್‌ಸಿಯ ಫಾರ್ಮ್‌ಗಳಲ್ಲಿ ಉತ್ಪಾದಿಸಲಾಗುವ ಚಿಕನ್‌ನ ಜೀವಿತಾವಧಿ ಕೇವಲ 35 ದಿನಗಳು ಮಾತ್ರ. ಇದು ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಪ್ರಾಣಿ ಹಕ್ಕು ಚಳವಳಿಗಾರರು ಕೆಎಫ್‌ಸಿ ಚಿಕನ್ ಬಗ್ಗೆ ನಡೆಸಲಾದ ಸಾಕ್ಷಚಿತ್ರದ ಮೂಲಕ ಕಂಡುಕೊಳ್ಳಲಾದ ವಾಸ್ತವ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇನ್ನೂ ಜನಸಾಮಾನ್ಯರಿಗೆ ದೊರಕಿಲ್ಲ. ಆದರೆ ಇದ್ಯಾವುದರ ಬಗ್ಗೆಯೂ ಕರ್ನಾಟಕದ ಅಥವಾ ದೇಶದ ಬೇರಾವುದೇ ರಾಜ್ಯದ ಆರೋಗ್ಯ ಇಲಾಖೆಗಳಿಗೆ ಪರಿವೆಯೇ ಇಲ್ಲದಂತಿದೆ.

ಕ್ಷಮಿಸಲಾಗದ ನಿರ್ಲಕ್ಷ: ಸಚಿವ ಖಾದರ್
ಮಂಗಳೂರಿನ ಕೆಎಫ್‌ಸಿ ಮಳಿಗೆಯಲ್ಲಿ ಗ್ರಾಹಕರೊಬ್ಬರು ಕೊಂಡ ಝಿಂಗರ್ ಚಿಕನ್ ಬರ್ಗರ್‌ನಲ್ಲಿ ಹುಳ ಕಂಡು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ರನ್ನು ಇಂದು ‘ವಾರ್ತಾಭಾರತಿ’ ಮಾತನಾಡಿಸಿದಾಗ, ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಂಡ ಸಚಿವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮಕ್ಕೆ ಆದೇಶ ನೀಡಿರುವುದಾಗಿ ತಿಳಿಸಿದರು. ‘‘ಈ ಪ್ರಕರಣ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನೋಟಿಸು ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಣ್ಣ ಪುಟ್ಟ ಅಂಗಡಿಗಳಲ್ಲಿ ಇಂತಹ ಪ್ರಮಾದ ಕಂಡು ಬಂದರೂ ಕ್ಷಮೆ ಇದೆ. ಆದರೆ ಇಂತಹ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ಗ್ರಾಹಕರಿಂದ ಅಪಾರ ಪ್ರಮಾಣದಲ್ಲಿ ದುಡ್ಡು ವಸೂಲು ಮಾಡುವಲ್ಲಿ ಸಾರ್ವಜನಿಕರ ಆಹಾರ ಸುರಕ್ಷತೆ ಬಗ್ಗೆ ನಿರ್ಲಕ್ಷವನ್ನು ಕ್ಷಮಿಸಲಾಗದು’’ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಆಡಳಿತ ವ್ಯವಸ್ಥೆಯ ವೈಫಲ್ಯ: ಡಾ.ಶ್ರೀನಿವಾಸ ಕಕ್ಕಿಲ್ಲಾಯ
ಸಾರ್ವಜನಿಕರ ಆಹಾರ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕಾದ ಆಡಳಿತ ವ್ಯವಸ್ಥೆ ತನ್ನ ಕಾರ್ಯವನ್ನು ಸಮರ್ಪಕವಾಗಿ ಮಾಡದ ಕಾರಣ ಇಂದು ಇಂತಹ ಕಂಪೆನಿಗಳು ತಮಗೆ ಇಷ್ಟಬಂದಂತೆ ಕಾರ್ಯಾಚರಿಸುತ್ತಿವೆ. ಹಾಗಾಗಿ ಇಂತಹ ಪ್ರಕರಣಗಳ ಸಂದರ್ಭ ಆಹಾರ ಸುರಕ್ಷತೆ ಕುರಿತಂತೆ ಜಾಗೃತ ನಾಗರಿಕರು ಎಚ್ಚೆತ್ತುಕೊಂಡು ದೂರು ನೀಡಿ, ಮುಂದಿನ ಪ್ರಕ್ರಿಯೆಗಳಿಗೆ ಮುಂದಾದರೆ ಪರಿಣಾಮ ಬೀರಲು ಸಾಧ್ಯ ಎನ್ನುತ್ತಾರೆ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ. ‘‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ 2006ರ ಮಾನದಂಡದ ಪ್ರಕಾರ ಪ್ರತಿ ಜಿಲ್ಲೆಗಳಲ್ಲೂ ಒಬ್ಬ ಆಹಾರ ಸುರಕ್ಷತಾ ಅಧಿಕಾರಿಯನ್ನು ನೇಮಕ ಮಾಡಬೇಕು. ಅವರಡಿ ಒಂದು ಪ್ರಯೋಗಾಲಯ ಹಾಗೂ ಸಿಬ್ಬಂದಿ ವ್ಯವಸ್ಥೆ ಇರಬೇಕು. ಆದರೆ ಈ ಹುದ್ದೆ ಶೇ.70ರಷ್ಟು ಇನ್ನೂ ಭರ್ತಿಯಾಗಿಲ್ಲ. ಇಂತಹ ವ್ಯವಸ್ಥೆ ಇಲ್ಲದಾಗ ಜಿಲ್ಲಾ ಅಥವಾ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟ ದೂರಿನ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ಅಂತಹ ಬದ್ಧತೆ ಇಲ್ಲವಾಗಿದೆ. ಇಂತಹ ಸಂದರ್ಭಗಳಲ್ಲಿ ನಾಗರಿಕರೇ ಜಾಗೃತರಾಗಿ ದೂರು ನೀಡಿ ಸರಕಾರ ಹಾಗೂ ಇಂತಹ ಕಂಪೆನಿಗಳನ್ನು ಎಚ್ಚರಿಸುವ ಕೆಲಸ ಮಾಡುವುದು ಅನಿವಾರ್ಯ’’ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಿಸಿದ್ದಾರೆ.

ಆಘಾತವಾಗಿದೆ, ದೂರು ನೀಡುತ್ತೇನೆ: ಗ್ರಾಹಕ ಪ್ರಶಾಂತ್
ನಾನು ಕೆಎಫ್‌ಸಿಯ ರೆಗ್ಯುಲರ್ ಕಸ್ಟಮರ್. ಅಲ್ಲಿ ತಯಾರಾಗುವ ಖಾದ್ಯಗಳ ಸುರಕ್ಷತೆ ಬಗ್ಗೆ ನಿಜಕ್ಕೂ ನನಗೆ ಯಾವುದೇ ಐಡಿಯಾ ಇಲ್ಲ. ಆದರೆ ಕೆಎಫ್‌ಸಿ ಚಿಕನ್ ತುಂಬಾ ಇಷ್ಟಪಡುತ್ತಿದ್ದೆ. ಆದರೆ ನಿನ್ನೆ ಬರ್ಗರ್‌ನಲ್ಲಿ ಹುಳ ಕಂಡು ಭಾರೀ ಆಘಾತವಾಗಿದೆ. ನಿನ್ನೆ ಹುಳು ಸಿಕ್ಕಿದೆ. ನಾಳೆ ಬೇರೇನೋ ಸಿಗಬಹುದಲ್ಲ ಎಂಬ ಆತಂಕ ನನಗಾಗಿದೆ. ಇದು ತೀವ್ರ ನಿರ್ಲಕ್ಷದ ಪರಿಣಾಮ. ಈ ಪ್ರಕರಣದ ಬಗ್ಗೆ ನಾನು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದೇನೆ. ದೂರು ನೀಡುತ್ತೇನೆೆ ಎಂದು ಪ್ರಶಾಂತ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಕ್ರಿಯೆ ನೀಡದ ಕೆಎಫ್‌ಸಿ
ಮಂಗಳೂರಿನ ಸಿಟಿ ಸೆಂಟರ್‌ನಲ್ಲಿರುವ ಕೆಎಫ್‌ಸಿ ಮಳಿಗೆಯ ವ್ಯವಸ್ಥಾಪಕರಲ್ಲಿ ಪ್ರತಿಕ್ರಿಯೆ ಕೇಳಿದಾಗ ನಮ್ಮ ಪಿಆರ್‌ಒ ಅವರನ್ನು ಸಂಪರ್ಕಿಸಿ ಎಂದರು. ಪಿಆರ್‌ಒ ಅವರನ್ನು ಸಂಪರ್ಕಿಸಿದಾಗ ನಾವು ಲಿಖಿತ ಪ್ರತಿಕ್ರಿಯೆಯನ್ನು ಇ-ಮೇಲ್ ಮಾಡುತ್ತೇವೆ ಎಂದು ಹೇಳಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವರೆಗೂ ಕೆಎಫ್‌ಸಿಯಿಂದ ಯಾವುದೇ ಇ-ಮೇಲ್ ಬರಲಿಲ್ಲ.

Write A Comment