ಪಾಂಡವಪುರ/ಮಂಡ್ಯ: ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳು ಸೇಡು ತೀರಿಸಿಕೊಳ್ಳಲು ತನಗೆ ಶಿಕ್ಷೆ ವಿಧಿಸಿದ್ದ ನ್ಯಾಯಮೂರ್ತಿ ಮನೆಯಲ್ಲಿ ದರೋಡೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದದಲ್ಲಿ ನಡೆದಿದೆ.
ಗ್ರಾಮ ಹೊರವಲಯದಲ್ಲಿರುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ.ಶಿವಪ್ಪ ಅವರ ಮನೆಯಲ್ಲಿ ಈ ದರೋಡೆ ನಡೆದಿದ್ದು ಸುಮಾರು 1.25 ಲಕ್ಷ ರೂ. ನಗದು, ಚಿನ್ನಾಭರಣ ದೋಚಲಾಗಿದೆ.
ನ್ಯಾ.ಶಿವಪ್ಪನವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆಸಲ್ಲಿಸಿ ನಿವೃತ್ತರಾದ ನಂತರ 2003ರಿಂದ ಪಟ್ಟಸೋಮನಹಳ್ಳಿಯ ಹೊರವಲಯದಲ್ಲಿರುವ ಲೋಕಪಾವನಿ ನದಿ ದಡದಲ್ಲಿರುವ ಶ್ರೀಶಿವಶೈಲದಲ್ಲಿ ದೇವಸ್ಥಾನ ಮತ್ತು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಸೋಮವಾರ ಮುಂಜಾನೆ ಹತ್ತು ಮಂದಿ ದರೋಡೆಕೋರರ ತಂಡವೊಂದು ನ್ಯಾ.ಶಿವಪ್ಪ ಅವರ ಮನೆಗೆ ನುಗ್ಗಿ 1.25 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದೆ. ಈ ವೇಳೆ ದರೋಡೆಕೋರರು ನ್ಯಾ.ಶಿವಪ್ಪ, ಶಿವಪ್ಪ ಅವರ ಪತ್ನಿ ವಿಜಯಲಕ್ಷ್ಮೀ, ಇವರಿಬ್ಬರ ಆರೋಗ್ಯ ನೋಡಿಕೊಳ್ಳಲು ನೇಮಕ ಮಾಡಿಕೊಂಡಿರುವ ಹೌಸ್‌ನರ್ಸ್ ಮಮತಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಶಿವಪ್ಪ ಹಾಗೂ ವಿಜಯಲಕ್ಷಿ¾à ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನು ನಡೆಯಿತು:
ಸೋಮವಾರ ಮುಂಜಾನೆ 3.15ರ ವೇಳೆಗೆ ಮಂಕಿ ಕ್ಯಾಪ್, ಗ್ಲೌಸ್ ಧರಿಸಿದ್ದ ಹತ್ತು ಜನರಿದ್ದ ತಂಡ ನ್ಯಾ.ಶಿವಪ್ಪ ನಿವಾಸವಿರುವ ರೈಲ್ವೆ ಟ್ರಾÂಕ್ ಕಡೆಯಿಂದ ಮನೆ ಮೇಲೆ ಹತ್ತಿ ಧುಮುಕಿದ್ದಾರೆ. ಧುಮುಕಿದ ಶಬ್ಧದಿಂದ ಎಚ್ಚರಗೊಂಡ ನ್ಯಾ.ಶಿವಪ್ಪ ಯಾರು ಯಾರು ಎಂದು ಕೂಗಿದ್ದಾರೆ. ಆದರೆ ಯಾರೂ ಮಾತನಾಡದ್ದರಿಂದ ಅನುಮಾನಗೊಂಡು ಮ್ಯಾನೇಜರ್ ರಮೇಶ್‌ಗೆ ಫೋನ್ ಮಾಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮೊದಲ ಮಹಡಿಯಿಂದ ಒಳನುಗ್ಗಿದ ಕಳ್ಳರು ಫೋನ್ ಕಿತ್ತಸೆದು ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.
ನಂತರ ಹೌಸ್‌ನರ್ಸ್ ಮಮತಾ ಮಲಗಿದ್ದ ಮನೆಯ ಕೊನೆ ಕೊಠಡಿಗೆ ನುಗ್ಗಿದ ದರೋಡೆಕೋರರು ಆಕೆಯ ಕಾಲು ಹಿಡಿದು ಎಳೆದಿದ್ದಾರೆ. ಗಾಬರಿಯಿಂದ ಕಿರುಚಿದ ಆಕೆಯ ಬಾಯಿಯನ್ನು ಮುಚ್ಚಿ, ಹಲ್ಲೆ ನಡೆಸಿ ನ್ಯಾ.ಶಿವಪ್ಪರವರ ಕೊಠಡಿಗೆ ಎಳೆದೊಯ್ದಿದ್ದಾರೆ. ಮಮತಾರ ರಕ್ಷಣೆಗೆ ಬಂದ ಶಿವಪ್ಪರನ್ನು ದರೋಡೆಕೋರರು ಜೋರಾಗಿ ತಳ್ಳಿದಾಗ ಅವರ ತಲೆ ಮಂಚಕ್ಕೆ ಬಡಿದಿದೆ. ಶಿವಪ್ಪ ಅವರ ರಕ್ಷಣೆಗೆ ಬಂದ ವಿಜಯಲಕ್ಷ್ಮೀ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ವಿಜಯಲಕ್ಷಿ¾à ಹಾಗೂ ಮಮತಾರ ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಅಂಟಿಸಿ, ಕೈ-ಕಾಲುಗಳನ್ನು ಹಗ್ಗ ಮತ್ತು ವೈರ್‌ಗಳಿಂದ ಕಟ್ಟಿಹಾಕಿದ್ದಾರೆ.
ನಂತರ ಶಿವಪ್ಪರನ್ನು ಮನೆ ಹಿಂಭಾಗದಲ್ಲಿದ್ದ ಲಾಕರ್ ರೂಂಗೆ ಕರೆದುಕೊಂಡು ಬಂದು ಲಾಕರ್ ಕೀ ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಶಿವಪ್ಪ ಲಾಕರ್ ಕೀ ಮಂಡ್ಯದ ಎಸ್‌ಬಿಎಂನ ಲಾಕರ್‌ನಲ್ಲಿದೆ ಎಂದು ತಿಳಿಸಿದರೆನ್ನಲಾಗಿದೆ. ನಂತರ ಹೊರಗಿನಿಂದ ದಿಂಡುಗಲ್ಲು ತಂದು ಎತ್ತಿಹಾಕಿ ಲಾಕರ್ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಲಾಕರ್ ಓಪನ್ ಆಗದ್ದರಿಂದ ಬೀರುವಿನಲ್ಲಿದ್ದ 1.25 ಲಕ್ಷ ರೂ. ನಗದು, ಸ್ವಲ್ಪ ಚಿನ್ನವನ್ನು ತೆಗೆದುಕೊಂಡು ವಿಜಯಲಕ್ಷ್ಮೀ ಹಾಗೂ ಹೌಸ್ ನರ್ಸ್ ಮಮತಾ ಇದ್ದ ರೂಮಿಗೆ ಬಂದಿದ್ದಾರೆ. ಅಲ್ಲಿ, ವಿಜಯಲಕ್ಷ್ಮೀಯವರಿಂದ ಮಾಂಗಲ್ಯ ಸರ, ಚಿನ್ನದ ಚೈನು, ಉಂಗುರ, ಬಳೆ, ಕಿವಿಯೋಲೆ, ಶಿವಪ್ಪನವರಿಂದ ಚೈನು, ಡಾಲರ್, ಉಂಗುರಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಶಿವಪ್ಪ ಅವರ ಕೈ-ಕಾಲುಗಳನ್ನು ಅವರದೇ ಪಂಚೆಯಿಂದ ಕಟ್ಟಿಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಮುಂಜಾನೆ 4.30ರ ಸಮಯಕ್ಕೆ ಮನೆ ಕಡೆಗೆ ಬಂದ ವಾಚ್‌ಮನ್ ಬಹದ್ದೂರ್‌ನನ್ನು ಕರೆದ ಮಮತಾ, ಮ್ಯಾನೇಜರ್ ರಮೇಶ್ ಅವರಿಗೆ ಫೋನ್ ಮಾಡಿಸಿದ್ದಾರೆ. ಈ ವೇಳೆಗೆ ಅಲ್ಲಿಗೆ ಬಂದ ಅರ್ಚಕ ಕೃಷ್ಣಮೂರ್ತಿ ಮನೆಯ ಎಲ್ಲಾ ಬಾಗಿಲುಗಳು ತೆರೆದಿರುವುದನ್ನು ನೋಡಿ ಗಾಬರಿಗೊಳಗಾಗಿ ಶಿವಪ್ಪ ಅವರ ಕೊಠಡಿಗೆ ಹೋಗಿ ನೋಡಿದಾಗ ಮೂವರೂ ಅರೆ ಪ್ರಜಾnವಸ್ಥೆಯಲ್ಲಿದ್ದುದು ಕಂಡುಬಂದಿತು. ಅವರು ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ನಂತರ ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಂ.ಪುಟ್ಟಮಾದಯ್ಯ, ಶ್ರೀರಂಗಪಟ್ಟಣ ಡಿವೈಎಸ್ಪಿ ಸಿದ್ದೇಶ್ವರ್, ತಹಶೀಲ್ದಾರ್ ಬಿ.ಶಂಕರಯ್ಯ, ಸಬ್ ಇನ್ಸ್‌ಪೆಕ್ಟರ್‌ಗಳಾದ ಅಜರುದ್ದೀನ್, ಅಯ್ಯನಗೌಡ, ಬೆರಳಚ್ಚು ಪರೀûಾ ವಿಭಾಗದ ವೆಂಕಟೇಶ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ತಂಗಿ ಮದುವೆಗಾಗಿ ದರೋಡೆ:
ದರೋಡೆಕೋರರು ಸಿ.ಶಿವಪ್ಪ ಅವರನ್ನು ಲಾಕರ್ ರೂಂಗೆ ಕರೆದೊಯ್ದಾಗ ನೋಡಿ, ನೀವೂ ನನ್ನ ಮಕ್ಕಳಿದ್ದಂತೆ. ನಿಮಗೇನು ಬೇಕೋ ತೆಗೆದುಕೊಂಡು ಹೋಗಿ. ಯಾರಿಗೂ ಅಪಾಯ ಮಾಡಬೇಡಿ ಎಂದು ಬೇಡಿಕೊಂದ್ದಾರೆ. ಈ ವೇಳೆ ನಮಗೆ ದುಡ್ಡು ಬೇಕು. ನನ್ನ ತಂಗಿ ಮದ್ವೆ ಇದೆ. ಅದಕ್ಕೆ ಹಣ ಬೇಕು. ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ನಿನ್ನ ತಂಗಿ ನನ್ನ ಮಗಳಿದ್ದಂತೆ. ಆಕೆಯನ್ನು ಕರೆದುಕೊಂಡು ಬಾ. ಸ್ವಂತ ಮಗಳಿಗಿಂತಲೂ ಅದ್ಧೂರಿಯಾಗಿ ಮದುವೆ ಮಾಡಿಕೊಡುತ್ತೇನೆ. ಯಾರಿಗೂ ತೊಂದರೆ ಕೊಡಬೇಡಿ. ದಯವಿಟ್ಟು ಹೊರಟುಹೋಗಿ ಎಂದು ಹೇಳಿದರು.
ನೀನು ಜಡ್ಜ್, ನಿನ್ನ ಸರ್ವೀಸ್‌ನಲ್ಲಿ ಎಷ್ಟು ಮಂದಿಗೆ ಶಿಕ್ಷೆ ಕೊಟ್ಟಿದ್ದೀಯಾ, ಎಷ್ಟು ವರ್ಷ ಶಿಕ್ಷೆ ಕೊಟ್ಟಿದ್ದೀಯಾ. ನೀವು ನಮಗೆ ಶಿಕ್ಷೆ ಕೊಟ್ಟಿದ್ದೀಯಾ. ನಾವೂ ನಿಮಗೆ ಶಿಕ್ಷೆ ಕೊಡಲು ಬಂದಿದ್ದೇವೆ. ಚಿನ್ನ, ಬೆಳ್ಳಿ, ಹಣ ಎಲ್ಲಿಟ್ಟಿದ್ದೀಯಾ ಹೇಳು ಎಂದು ಗದರಿದರೆನ್ನಲಾಗಿದೆ.
ಲಾಕರ್‌ನಲ್ಲಿದ್ದ ದೇವರ ಆಭರಣ
ಪಟ್ಟಸೋಮನಹಳ್ಳಿಯ ಶ್ರೀ ಶಿವಶೈಲ ಕ್ಷೇತ್ರದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಉತ್ಸವದ ವೇಳೆ ತೊಡಿಸುವ ಆಭರಣಗಳೆಲ್ಲವೂ ಸಿ.ಶಿವಪ್ಪಅವರ ಖಾಸಗಿ ಕೊಠಡಿಯಲ್ಲಿರುವ ಲಾಕರ್‌ನಲ್ಲಿ ಭದ್ರವಾಗಿ ಇಡಲಾಗಿತ್ತು. ಆದರೆ ಲಾಕರ್ ಒಡೆಯಲಾಗದ್ದರಿಂದ ದೇವರ ಆಭರಣ ಉಳಿದುಕೊಂಡಿವೆ.
-ಉದಯವಾಣಿ