ಹುಣಸೂರು.ಅ.25-ಕುಡಿತದ ಅಮಲಿನಲ್ಲಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ಹುಣಸೂರು ಗ್ರಾಮಾಂತರ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಬಿಲ್ಲೇನಹೊಸಹಳ್ಳಿ ಕರಿಯ(35) ತನ್ನ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈತ 2014 ಡಿ.10ರಂದು ಸಮೀಪದ ಬಿಲ್ಲೇನಹೊಸಹಳ್ಳಿ ಹಾಡಿಯ ಪತ್ನಿ ಗೌರಿಯ ಕತ್ತು ಹಿಸುಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ, ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುವುದು ಮಾಮೂಲಾಗಿದ್ದರಿಂದ ಅಕ್ಕ-ಪಕ್ಕದವರು ತಲೆ ಕೆಡಿಸಿಕೊಂಡಿರಲಿಲ್ಲ, ಬೆಳಗಾದ ನಂತರ ಗೌರಿ ಹೊರಬಾರದ್ದನ್ನು ಕಂಡ ಅಕ್ಕ-ಪಕ್ಕದವರು ಮನೆಯೊಳಗೆ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಅಂದಿನಿಂದಲೂ ತಲೆ ಮರೆಸಿಕೊಂಡಿದ್ದ ಈತ ಗೋಣಿಕೊಪ್ಪದಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಪಿ.ಅಭಿನವ್ ಅಶೋಕ್ ಖರೆ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಜಯರಾಂ, ವೃತ್ತ ನಿರೀಕ್ಷಕ ಧರ್ಮೇಂದ್ರ, ಎಸ್‌ಐ ಲೋಕೇಶ್ ನೇತೃತ್ವದಲ್ಲಿ ಬಂಧಿಸಲಾಯಿತು.