ಕೆಂಗೇರಿ, ಅ.25-ಕಲೆ, ಸಾಹಿತ್ಯ, ಸಂಸ್ಕೃತಿಯ ವಿಚಾರಗಳು ಎಲ್ಲ ವರ್ಗದ ಜನರನ್ನ ಒಂದೆಡೆ ಸೇರಿಸಿ ಐಕ್ಯತೆಯಿಂದ ಬಾಳಲು ಸಹಕಾರ ನೀಡುತ್ತವೆ ಎಂದು ಅಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗರಾಜ್ ತಿಳಿಸಿದರು.
ಕೆಂಗೇರಿಯ ಅಗರ ಗ್ರಾಮದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಗ್ರಾಮದಲ್ಲಿ ಆಚರಿಸಿಕೊಂಡು ಬರುತ್ತಿರುವ ದಸರಾ ಮಹೋತ್ಸವ ಕ್ರೀಡಾಪಟುಗಳಿಗೆ, ಕಲಾವಿದರಿಗೆ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದರು. ಹಬ್ಬ ಹಾಗೂ ಸಾಂಸ್ಕೃತಿಕ ಉತ್ಸವಗಳು ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಕಷ್ಟಕಾರ್ಪಣ್ಯಗಳನ್ನ ಮರೆತು ಸಂತೋಷವನ್ನು ಅಭಿವ್ಯಕ್ತಗೊಳಿಸಲು ಒಳ್ಳೆಯ ಅವಕಾಶವಾಗಿದೆ ಎಂದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಟಿಎಪಿಸಿಎಂಎಸ್ ನ ನಿರ್ದೇಶಕ ಟಿ.ನಾರಾಯಣಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳ ಮೇಲೆ ನಗರೀಕರಣದ ಪ್ರಭಾವವಾಗಿದ್ದರೂ ಗ್ರಾಮೀಣ ಪ್ರದೇಶದ ನಾಗರಿಕರ ಸಕ್ತಿಯಿಂದಾಗಿ ನಮ್ಮ ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಉಳಿದಿವೆ. ಪ್ರೀತಿ ವಿಶ್ವಾಸ ಬಾಂಧವ್ಯ ವೃದ್ಧಿಸುವ ಇಂತಹ ಆಚರಣೆಗಳು ಮುಂದಿನ ಜನಾಂಗಕ್ಕೆ ಉತ್ತಮ ಸಂದೇಶ ಸಾರುವಂತಹ ಪ್ರಕ್ರಿಯೆಗಳಾಗಿವೆ ಎಂದರು. ಅಗರ ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ ದೇವರಾಜು, ಸದಸ್ಯರಾದ ಸೋಮಣ್ಣ, ಬೈರೇಶ್, ವೆಂಕಟಮ್ಮ, ಕಮಲ ಚಿಕ್ಕಣ್ಣ, ಮುನಿರಾಜು, ವಿಎಸ್‌ಎಸ್‌ನ ನಿರ್ದೇಶಕ ಆರ್.ರಾಮಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಗರ ಗ್ರಾಮದಿಂದ ಗರಡಿ ಮನೆಯ ಪೈಲ್ವಾನರು ಸಾಹಸ ಪ್ರದರ್ಶಿಸಿದರೆ,ವಿವಿಧ ಹಾಗೂ ವೈವಿಧ್ಯಮಯ ವೇಷತೊಟ್ಟು ಜಾನಪದ ಕಲಾಪ್ರಕಾರಗಳಾದ ಡೊಳ್ಳು,ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದವು. ಬೈರಸಂದ್ರ ಕೆರೆಯ ಆವರಣದ ಮೈದಾನಕ್ಕೆ ಬಂದ ಮೆರವಣಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿತು. ಗ್ರಾಮಸ್ಥರಿಗಾಗಿ ಮಲ್ಲಕಂಬ ಏರುವ ಸ್ಪರ್ಧೆ,ಕಲ್ಲುಗುಂಡು ಎತ್ತುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.