ಬೆಂಗಳೂರು, ಅ.25: 2015-16ನೆ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಹಿರಿಯ ರಂಗ ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೆ.ನಾಗರತ್ನಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ನಾಡೆಜ ಪೊ್ರ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಡಾ.ಸರಜೂ ಕಾಟ್ಕರ್, ಡಾ.ಎನ್.ಕೆ.ಲೋಲಾಕ್ಷಿ, ಪ್ರೊ.ಸಿ.ಕೆ.ಮಹೇಶ್ ಹಾಗೂ ಡಾ.ಪ್ರಶಾಂತ್ ನಾಯಕ್ ಅವರನ್ನು ಒಳಗೊಂಡ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿ ಕಳುಹಿಸಿದ್ದ ಶಿಫಾರಸ್ಸನ್ನು ರಾಜ್ಯ ಸರಕಾರವು ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಕೆ.ನಾಗರತ್ನಮ್ಮ ಮೂಲತಃ ದೇವದಾಸಿ ಸಾಮಾಜಿಕ ಹಿನ್ನೆಲೆಯಿಂದ ಬಂದಿದ್ದು, ತಮ್ಮ ಪರಿಸರದಲ್ಲಿ ದೇವದಾಸಿಯರಿಗೆ ಸಾಸ್ಕೃತಿಕ ಮನ್ನಣೆ ದೊರಕಿಸಲು ಸಾಕಷ್ಟು ಶ್ರಮಿಸಿದ್ದಾರೆ. ಪರಿಶಿಷ್ಟ ಪಂಗಡದ ಮಹಿಳೆಯರು ದೇವದಾಸಿ ಪದ್ಧತಿಯನ್ನು ದಾಟಿ ಕಲಾರಂಗದಲ್ಲಿ ಗೌರವಸ್ಥರಾಗಲು ಕಾರಣರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವದಾಸಿ ಸಾಮಾಜಿಕ ಹಿನ್ನೆಲೆಯುಳ್ಳ ಮಹಿಳೆಯರದೆ ರಂಗಭೂಮಿ ವೃತ್ತಿ ಕಲಾರಂಗ ಕಟ್ಟಿ ಸಾಂಸ್ಕೃತಿಕವಾಗಿ ದುಡಿದಿದ್ದಾರೆ. ಸಾಮಾಜಿಕ ನಿರ್ಲಕ್ಷಕ್ಕೆ ಒಳಗಾದ ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳನ್ನು ರಂಗ ಮಾಧ್ಯಮದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದು ಕೆ.ನಾಗರತಮ್ಮನವರ ದೊಡ್ಡ ಕೊಡುಗೆಯಾಗಿದೆ ಎಂದು ಆಂಜನೇಯ ತಿಳಿಸಿದ್ದಾರೆ.
ಕೆ.ನಾಗರತ್ನಮ್ಮನವರಿಗೆ ರಾಜ್ಯ ಸರಕಾರದ ವತಿಯಿಂದ ಅ.27ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ.ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.