ಕರ್ನಾಟಕ

ಸಿದ್ದು ಭವಿಷ್ಯ ಠುಸ್ ಆಗಿ ಖರ್ಗೆ ಮತ್ತೆ ವರ್ಚಸ್ಸಿಗೆ ಬರುವುದು ಬಹುತೇಕ ಖಚಿತ

Pinterest LinkedIn Tumblr

siಬೆಂಗಳೂರು, ಅ.25- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭವಿಷ್ಯ ಈ ಬಾರಿಯ ಸಂಪುಟ ವಿಸ್ತರಣೆ ಮೇಲೆ ನಿಂತಿದೆ. ನಿರೀಕ್ಷೆಯಂತೆ ಸಂಪುಟ ವಿಸ್ತರಣೆಗೆ ಅಸ್ತು ದೊರೆತರೆ  ಹೈಕಮಾಂಡ್ ಆದೇಶದಂತೆ ಇಡೀ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹೈಜಾಕ್ ಮಾಡಲಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ. ಸಂಪುಟ ವಿಸ್ತರಣೆ ಗೊಡವೆಯೇ ಬೇಡ ಎಂದು ಹೈಕಮಾಂಡ್ ಮೇಲೆ ಒತ್ತಡ ತರುತ್ತಿರುವ ಮೂಲ ಕಾಂಗ್ರೆಸಿಗರ ಬೇಡಿಕೆಗೆ ಮನ್ನಣೆ ದೊರೆತರೆ ಸಿದ್ದು ಭವಿಷ್ಯ ಠುಸ್ ಆಗಿ ಖರ್ಗೆ ಮತ್ತೆ ವರ್ಚಸ್ಸಿಗೆ ಬರುವುದು ಬಹುತೇಕ ಖಚಿತ ಎಂದೇ ಭಾವಿಸಲಾಗುತ್ತಿದೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೆಹಲಿ ತಲುಪಿದ್ದು, ಹಲವಾರು ಶಾಸಕರು ರಾಜಧಾನಿಯಲ್ಲಿ ಬೀಡುಬಿಟ್ಟು ತಮ್ಮ ಗಾಡ್‌ಫಾದರ್‌ಗಳ ಮೂಲಕ ಸಚಿವಗಿರಿ ಗಿಟ್ಟಿಸಲು ಲಾಬಿ ಆರಂಭಿಸಿರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಚದುರಂಗದಾಟದ ದಾಳ ಉರುಳಿಸುವ ಮೂಲಕ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.
ದೆಹಲಿ ಲಾಬಿ ಜೋರಾಗುತ್ತಿದ್ದಂತೆ ಇಂದು ಮಧ್ಯಾಹ್ನ 3 ಗಂಟೆಗೆ ದೆಹಲಿಗೆ ವಿಮಾನ ಹತ್ತಬೇಕಿದ್ದ ಸಿದ್ದರಾಮಯ್ಯ ಹಠಾತ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ತಡರಾತ್ರಿ ಇಲ್ಲವೆ ನಾಳೆ ಮುಂಜಾನೆ ದೆಹಲಿ ತಲುಪಿ ಯಾರ ಕೈಗೂ ಸಿಗದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ತಣಿಸುವ ಸಾಹಸಕ್ಕೆ ಕೈ ಹಾಕಿರುವ ಸಿಎಂ ಅವರು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಖರ್ಗೆ ಬೆಂಬಲಿಗರಿಗೆ ಮಣೆ ಹಾಕುವ ಚತುರತೆ ಮೆರೆದಿರುವುದು ಮೂಲ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೀಗಾಗಿ ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆ ಆಗಲೇಬಾರದು  ಎಂಬ ಹಠಕ್ಕೆ ಬಿದ್ದಿರುವ ವಿರೋಧಿ ಪಾಳಯದ ಮೂಲ ಕಾಂಗ್ರೆಸಿಗರು ದೆಹಲಿಯಲ್ಲಿ ಸಂಪುಟ ವಿಸ್ತರಣೆ ಮುಂದೂಡಲು ಯತ್ನಿಸುತ್ತಿದ್ದಾರೆ. ಸಂಪುಟ ವಿಸ್ತರಣೆ ವಿಚಾರ ಇದೀಗ ಸಿದ್ದು ಮತ್ತು ಮೂಲ ಕಾಂಗ್ರೆಸಿಗರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಒಳಜಗಳದಲ್ಲಿ ಪಕ್ಷದ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಸೈ ಎಂದರೆ ಸಿದ್ದು ಜಮಾನ ಇನ್ನೂ ಕೆಲವು ದಿನಗಳ ಕಾಲ ನಡೆಯಲಿದೆ. ಒಂದು ವೇಳೆ ಮೂಲ ಕಾಂಗ್ರೆಸಿಗರಿಗೆ ಮಣೆ ಹಾಕಿ ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ಮುಂದೂಡಿದರೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸಿಎಂ ಕನಸಿಗೆ ಮತ್ತೆ ರೆಕ್ಕೆಪುಕ್ಕ ಬಂದಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Write A Comment