ಮಂಗಳೂರು, ಅ.21: ಮಂಗಳೂರು ನಗರ ಪೊಲೀಸ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ಘಟಕದ ಆಶ್ರಯದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಬುಧವಾರ ಮಂಗಳೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ನಡೆಯಿತು.
ದೇಶದ ನಾನಾ ಭಾಗಗಳಲ್ಲಿ ಕರ್ತವ್ಯದಲ್ಲಿರುವಾಗ ಹುತಾತ್ಮರಾದ ಸುಮಾರು 434 ಪೊಲೀಸರಿಗೆ ಪೊಲೀಸ್ ಧ್ವಜದೊಂದಿಗೆ ಗೌರವ ಸಲ್ಲಿಸಿ, ಪೊಲೀಸ್ ಸ್ಮಾರಕಕ್ಕೆ ಹೂಗುಚ್ಚವನ್ನಿಟ್ಟು ಅವರ ಸೇವೆಯನ್ನು ಸ್ಮರಿಸಲಾಯಿತು. ಬಳಿಕ ಮೌನ ಪ್ರಾರ್ಥನೆ ಮೂಲಕ ಶೃದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಅವರು ಮಾತನಾಡಿ, ಈಗಾಗಲೇ ದೇಶದಲ್ಲಿ ಹುತಾತ್ಮರಾದ ಸುಮಾರು 434 ಪೊಲೀಸರ ಕುಟುಂಬಕ್ಕೆ ಸರ್ಕಾರದ ನೆರವು ಹೆಚ್ಚಿಸುವ ಅಗತ್ಯವಿದೆ. ಈ ಮೊದಲು ಕರ್ತವ್ಯದಲ್ಲಿದ್ದಾಗ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು ಈ ಮೊತ್ತವನ್ನು 20-25 ಲಕ್ಷ ರೂಪಾಯಿಗೆ ಹೆಚ್ಚಿಸಲು ಶಿಫಾರಸು ಕಳುಹಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕಳ್ಳರಿಂದ ಹತರಾದ ಎಸ್ ಐ ಜಗದೀಶ್ ಅವರ ಸೇವೆಯನ್ನು ಸ್ಮರಿಸಿದ ಅವರು, ಕೆಲವೊಂದು ಸಂದರ್ಭದಲ್ಲಿ ದುಷ್ಕರ್ಮಿಗಳ ಜೊತೆ ಹೋರಾಟ ನಡೆಸ ಬೇಕಾದ ಅನಿವಾರ್ಯತೆ ಇರುವುದರಿಂದ ಪೊಲೀಸ್ ಸಿಬ್ಬಂಧಿಗಳು ದೈಹಿಕವಾಗಿ ಮತ್ತು ಆರೋಗ್ಯದಲ್ಲಿ ಸಮರ್ಥರಿರಬೇಕು ಎಂದು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಎಸ್.ಪಿ ಡಾ. ಶರಣ್ಣಪ್ಪ, ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್. ಮುರುಗನ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಸಿಸಿಬಿ ಇನ್‌ಸ್ಪೆಕ್ಟರ್ ವೆಲೈಂಟಿನ್ ಡಿ’ಸೋಜ ಹಾಗೂ ಹುತಾತ್ಮರಾದ ಪೊಲೀಸರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




















