ಕರ್ನಾಟಕ

ಒಬ್ಬ ಮಗಳು ಮನೆಗೆ, ಇನ್ನೊಬ್ಬಳು ದೇಶಕ್ಕೆ ಎನ್ನುತ್ತಿದ್ದರಂತೆ ಪಿಎಸ್ಐ ಜಗದೀಶ್

Pinterest LinkedIn Tumblr

ಪಸಿ

ರಾಮನಗರ: ಕಳೆದ ಶುಕ್ರವಾರ ದುಷ್ಕರ್ಮಿಗಳಿಂದ ಹತ್ಯೆಯಾದ ದೊಡ್ಡ ಬಳ್ಳಾಪುರದ ಪಿಎಸ್ಐ ಜಗದೀಶ್ ಅವರ ಮೂರನೆಯ ದಿನದ ವಿಧಿ ವಿಧಾನಗಳು ಇಂದು ನಡೆದಿದ್ದು ಅವರ ಸಮಾಧಿಗೆ ಕುಟುಂಬ ವರ್ಗದವರು ಹಾಲು, ತುಪ್ಪ ಅರ್ಪಿಸಿ ಪೂಜೆಗೈದರು.

ಈ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ಜಗದೀಶ್ ತಂದೆಯನ್ನು ಮಾತನಾಡಿಸಿದಾಗ, ಅವರು ಮಗನ್ನು ನೆನಪಿಸಿಕೊಂಡು ಗದ್ಗದಿತರಾದರು. ”ಸಾವು ನೋವಿನ ಮಧ್ಯೆ ಹೋರಾಡುತ್ತ ನನ್ನ ಮಗ ರಸ್ತೆಯಲ್ಲಿ ಬಿದ್ದಿದ್ದಾಗ ಸಾರ್ವಜನಿಕರು ಯಾರು ಆತನ ನೆರವಿಗೆ ಬರಲಿಲ್ಲ. ಇದು ನನಗೆ ಬಹಳ ಬೇಸರ ತಂದಿದೆ. ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸ್ ಅಪಾಯಕ್ಕೆ ಸಿಲುಕಿದಾಗ ಸಾರ್ವಜನಿಕರು ನಿರ್ಲಕ್ಷ್ಯ ಮಾಡಿದ್ದು ನನಗೆ ತುಂಬಾ ನೋವು ತಂದಿದೆ. ಸಮಯಕ್ಕೆ ಸರಿಯಾಗಿ ಯಾರಾದರೂ ಸಹಾಯ ಮಾಡಿದ್ದರೆ ನನ್ನ ಮಗ ಬದುಕುತ್ತಿದ್ದನೆನೋ”, ಎಂದು ಅವರು ನೋವನ್ನು ವ್ಯಕ್ತ ಪಡಿಸಿದರು.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜಗದೀಶ್ ಪತ್ನಿ ರಮ್ಯಾ, “ಶುಕ್ರವಾರ 2 ಗಂಟೆಗೆ ನನಗೆ ಪತಿಯ ಸಾವಿನ ಸುದ್ದಿ ತಿಳಿಯಿತು. ಎಲ್ಲಿ ಹೋಗಬೇಕಾದರೂ ನನಗೆ ಹೇಳಿಯೇ ಹೋಗುತ್ತಿದ್ದ ಅವರು ಕಳ್ಳರನ್ನು ಹಿಡಿಯಲು ಹೊರಟಿರುವುದಾಗಿ ಹೇಳಿಯೇ ಹೋಗಿದ್ದರು. ಕಳ್ಳರು ಸಿಕ್ಕಿದರೆ ಮಧ್ಯಾಹ್ನ ಅಥವಾ ರಾತ್ರಿ ಮರಳುತ್ತೇನೆ ಎಂದು ಹೊರಟಿದ್ದ ಅವರಿಗೆ ಕುಡಿಯಲು ಹಾಲು ನೀಡಿದೆ. ಆದರೆ ಯಾವತ್ತೂ ಹಾಲು ಬೇಡ ಅಂದವರು ಅಂದು ಬೇಡ ಎಂದರು. ಆದರೆ ಮಗಳ ಒತ್ತಾಯಕ್ಕೆ ಮಣಿದು ಹಾಲು ಕುಡಿದು ಹೊರಟರು”, ಎಂದು ಜಗದೀಶ್ ಅವರು ಮನೆಯಲ್ಲಿ ಕಳೆದ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡು ಗೋಳಾಡುತ್ತಾರೆ.

“ನನ್ನ ಪತಿಯನ್ನು ಎಲ್ಲರೂ ಸೂಪರ್ ಕಾಪ್, ಸಿಂಗಂ ಎಂದು ಕರೆಯುತ್ತಿದ್ದರು. ಒಂದು ದಿನ ಬದುಕಿದರೂ ಹುಲಿಯಂತೆ ಬದುಕಬೇಕು ಎನ್ನುತ್ತಿದ್ದರವರು. ಮಕ್ಕಳು ಎಂದರೆ ನನ್ನ ಪತಿಗೆ ಪ್ರಾಣ. ಗಂಡು ಮಕ್ಕಳು ಇಲ್ಲವೆಂಬ ಕೊರಗು ಅವರಿಗಿರಲಿಲ್ಲ. ಒಬ್ಬ ಮಗಳು ದೇಶಕ್ಕೆ, ಇನ್ನೊಬ್ಬಳು ಮನೆಗೆ. ಚಿಕ್ಕ ಮಗಳನ್ನು ವಿದೇಶಕ್ಕೆ ಕಳುಹಿಸುತ್ತೇನೆ. ಒಳ್ಳೆಯ ಶಿಕ್ಷಣ ಕೊಡಿಸುತ್ತೇನೆ ಎನ್ನುತ್ತಿದ್ದರು, ಮಕ್ಕಳಿಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದರು. ಮಕ್ಕಳೇ ಅವರ ಕನಸಾಗಿತ್ತು. ನಮಗಾಗಿ ಅವರು ಏನೂ ಮಾಡಿಟ್ಟಿಲ್ಲ. ಕರ್ತವ್ಯ ಅವರಿಗೆ ದೇವರಾಗಿತ್ತು. ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಸರ್ಕಾರ ನನ್ನ ಪತಿ ಕನಸನ್ನು ನನಸು ಮಾಡಬೇಕು”, ಎಂದು ರಮ್ಯಾ ಗದ್ಗದಿತರಾಗುತ್ತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮಗನನ್ನು ಸಾವಿನ ಆಘಾತವನ್ನು ತಾಳಲಾರದೇ ಅರೆಜೀವವಾಗಿರುವ ಜಗದೀಶ್ ತಾಯಿ ತನ್ನ ಸೊಸೆ ಮತ್ತು ಮೊಮ್ಮಕ್ಕಳ ಬದುಕಿಗೆ ಸರ್ಕಾರ ಸೂಕ್ತ ನೆರವು ನೀಡಲಿ ಎಂದು ಕೋರಿಕೊಂಡಿದ್ದಾರೆ.

Write A Comment