ಕರ್ನಾಟಕ

ಸೈಟ್​ ಹೋರಾಟ ! ರಾಜ್ಯದಲ್ಲಿ ಭಾರೀ ನೋವನ್ನನುಭವಿಸುತ್ತಿದ್ದಾರೆ ಸ್ವಾತಂತ್ರ್ಯ ಸೇನಾನಿಗಳು !

Pinterest LinkedIn Tumblr

bda

ವರದಿ: ವಿಜಯಲಕ್ಷ್ಮಿ ಶಿಬರೂರು(ಸುವರ್ಣ ನ್ಯೂಸ್​ನ ಕವರ್​ಸ್ಟೋರಿ)

ನಾನಿವತ್ತಿನ ಕವರ್​ಸ್ಟೋರಿಯನ್ನ ಅತ್ಯಂತ ನೋವಿನಿಂದಲೇ ಪ್ರಸ್ತುತ ಪಡಿಸುತ್ತಿದ್ದಾನೆ. ಯಾಕಂದ್ರೆ ನಮಗೆ ಅಮೂಲ್ಯವಾದ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಸೇನಾನಿಗಳು ನಮ್ಮ ರಾಜ್ಯದಲ್ಲಿ ಭಾರೀ ನೋವನ್ನನುಭವಿಸುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ರೋಚಕ ಕತೆಗಳನ್ನ ಮೆಲುಕು ಹಾಕುತ್ತಾ ಸಾಹಸಗಾಥೆಗಳನ್ನ ಹೇಳುತ್ತಾ, ನವ ಪೀಳಿಗೆಯಲ್ಲಿ ರೋಮಾಂಚನವುಂಟು ಮಾಡಬೇಕಿದ್ದ ಹಿರಿಯರು ಅವಮಾನಕ್ಕೊಳಗಾಗುತ್ತಿದ್ದಾರೆ. ಕಿರಿಯರಿಗೆ ಜೀವನ ಸತ್ಯ, ತತ್ವಾದರ್ಶಗಳನ್ನ ಬೋಧಿಸುತ್ತಾ ತಮ್ಮ ಜೀವನದ ಕೊನೆ ದಿನಗಳನ್ನ ಆನಂದವಾಗಿ ಕಳೀಬೇಕಿದ್ದ ಹಿರಿಯ ಚೇತನಗಳು ಇವತ್ತು ಕಣ್ಣೀರಲ್ಲಿ ಕೈತೊಳೀತ್ತಿದ್ದಾರೆ.

ಇವರ ಕಣ್ಣೀರಿಗೆ ಕಾರಣವಾದ್ರೂ ಏನು? ಈ ಇಳಿ ವಯಸ್ಸಲ್ಲೂ ಇವರ್ಯಾಕೆ ಈ ರೀತಿ ನಿತ್ಯ ಸರ್ಕಾರ ಕಚೇರಿಗಳಿಗೆ ಸುತ್ತಾಡುತ್ತಿದ್ದಾರೆ? ಇದನ್ನೆಲ್ಲಾ ತಿಳಿಯಲು ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ನೊಂದ ನೈಜ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬದವರನ್ನ ಭೇಟಿ ಮಾಡ್ತು. ಸ್ವಾತಂತ್ರ್ಯ ಹೋರಾಟಗಾರರ ಸಮಸ್ಯೆಗಳನ್ನ ಆಲಿಸಿ ಅವರ ಸ್ಥಿತಿಗತಿಗಳನ್ನ ಅಧ್ಯಯನ ಮಾಡಿದ ನಮ್ಮ ತಂಡಕ್ಕೆ ಈ ಭ್ರಷ್ಟ ವ್ಯವಸ್ಥೆಯ ಕರಾಳಮುಖಗಳ ಪರಿಚಯ ಆಯ್ತು.

freedom fighter

ಸರ್ಕಾರಿ ಸಂಸ್ಥೆಗಳಿಂದಲೇ ವಂಚನೆ !: ಯಸ್……..ದೇಶಕ್ಕಾಗಿ ತಮ್ಮದೆಲ್ಲವನ್ನ ತ್ಯಾಗ ಮಾಡಿದ್ದ ಸ್ವತಂತ್ರ ಸೇನಾನಿಗಳಿಗೆ ಸರ್ಕಾರಿ ಸಂಸ್ಥೆಗಳೇ ವಂಚಿಸುತ್ತಿವೆ. ಈ ಪೈಕಿ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ ಮುಂಚೂಣಿಯಲ್ಲಿ ನಿಲ್ಲುತ್ತೆ. ಸ್ವತಂತ್ರ ಸೇನಾನಿಗಳ ಬಲಿದಾನವನ್ನ ಸ್ಮರಿಸಿ, 2007ರಲ್ಲಿ ಅಂದಿನ ರಾಜ್ಯಪಾಲರಾದ ರಾಮೇಶ್ವರ ಠಾಕೂರ್​ ನೈಜ ಹೋರಾಟಗಾರರಿಗೆ ಬಿಡಿಎ ನಿವೇಶನ ಹಂಚಿದ್ರು. ಆದ್ರೆ ಆ ಹಂಚಿಕೆ ಬರೀ ಕಾಗದದಲ್ಲಿ ಮಾತ್ರ ಉಳಿದಿದೆ. ಇದಕ್ಕೆ ಒಂದೊಂದೇ ಸಾಕ್ಷಿಗಳನ್ನ ನಾನು ನಿಮ್ಮ ಮುಂದೆ ಇಡ್ತೀನಿ. ಅವರ ಕರುಣಾಜನಕ ಕತೆಗಳು, ಹಾಗೂ ಅವರಿಗೆ ಬಿಡಿಎ ಅಧಿಕಾರಿಗಳು ನೀಡುತ್ತಿರೋ ಚಿತ್ರ ಹಿಂಸೆಯನ್ನ ನೀವೇ ನೋಡಿ.

ಕೆ.ರಾಮಚಂದ್ರ, ನಕಪುರದವರು. ಅವರ ವಯಸ್ಸು 87. ಇವರು ಅಂದು ಕ್ವಿಟ್​ ಇಂಡಿಯಾ,ಮೈಸೂರು ಚಳುವಳಿಯಂಥಾ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಜೈಲು ಸೇರಿದ್ರು. ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಕಣ್ಣನ್ನೂ ಕಳೆದುಕೊಂಡಿದ್ದಾರೆ. ದೇಶಕ್ಕಾಗಿ ಎಲ್ಲವನ್ನ ತ್ಯಾಗ ಮಾಡಿದ್ದ ಇವರು ಈಗ ಪುಟ್ಟ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ಇವರ ಬಲಿದಾನ ಸ್ಮರಿಸಿ ಸರ್ಕಾರ 2007ರಲ್ಲಿ ಬಿಡಿಎ ಸೈಟೊಂದನ್ನ ಬಿಟಿಎಂ ಆರನೇ ಹಂತ 1ನೇ ಫೇಸ್​ನಲ್ಲಿ 202ನೇ ಸಂಖ್ಯೆಯ ನಿವೇಶ ಹಂಚಿಕೆ ಮಾಡಿತ್ತು. ರಾಮಚಂದ್ರ ಅವರು ಸಾಲಸೋಲ ಮಾಡಿ 2,34,665 ರೂಪಾಯಿ ಹಣ ಪಾವತಿಸಿ ನಿವೇಶನವನ್ನ ರಿಜಿಸ್ಟರ್​ ಮಾಡಿಕೊಳ್ಳುತ್ತಾರೆ. ಆದ್ರೆ ಬಿಡಿಎ ಮಂಜೂರು ಮಾಡಿದ ನಿವೇಶನ ಎಲ್ಲಿದೆ ಅಂತ ಗುರುತಿಸಲು ಸಾಧ್ಯವಾಗದ ಕಾರಣ ರಾಮಚಂದ್ರ ಅವರಿಗೆ ಬಿಡಿಎ 2011ರಲ್ಲಿ ಬಿಟಿಎಂ ಆರನೇ ಹಂತ 2ನೇ ಫೇಸ್​ನಲ್ಲಿ ಬದಲಿ ನಿವೇಶನ ನೀಡಿತು. ಅದನ್ನ ಆದ್ರೆ ಅಲ್ಲೂ ನಿವೇಶನವೇ ರಚನೆಯಾಗದ ಕಾರಣ ಬಿಡಿಎ ನಡೆಯಿಂದ ಬೇಸತ್ತ ರಾಮಚಂದ್ರ ನ್ಯಾಯಾಲಯದ ಮೊರೆ ಹೊದ್ರು. ಈ ಸಂದರ್ಭದಲ್ಲಿ ಬಿಡಿಎ ಆಯುಕ್ತರಾದ ಭರತ್​ಲಾಲ ಮೀನ ರಾಮಚಂದ್ರ ಅವರ ಮನವೊಲಿಸಿ ಕೇಸ್​ ವಾಪಾಸ್​ ತೆಗೆದುಕೊಳ್ಳುವಂತೆ ಹೇಳಿ, 2012ರಲ್ಲಿ ಬಿಟಿಎಂ 4ನೇ ಹಂತ 2ನೇ ಬ್ಲಾಕ್​ನಲ್ಲಿ 39ನೇ ನಿವೇಶನ ಹಂಚಿಕೆ ಮಾಡಿದ್ರು.ಆದ್ರೆ ಬಿಡಿಎ ಕಚೇರಿಯೊಳಗಿನ ಕೆಲ ಅಧಿಕಾರಿಗಳ ಕುಮ್ಮಕ್ಕಿನಿಂದ ಬಿಡಿಎ ಸುತ್ತಮುತ್ತ ಇದ್ದ ರಿಯಲ್​ ಎಸ್ಟೇಟ್​ ಏಜೆಂಟ್​ಗಳು ರಾಮಚಂದ್ರ ಹಾಗೂ ಅವರ ಮಗನ ಸಹಿ ನಕಲು ಮಾಡಿ ಮಾರಾಟ ಮಾಡ್ತಾರೆ.

ಕೆಲ ದಿನಗಳ ಬಳಿಕ ರಾಮಚಂದ್ರ ಅವರಿಗೆ ತಮಗಾದ ಮೋಸದ ಅರಿವಾಗುತ್ತೆ. ಅವರು ತಕ್ಷಣ ಬಿಡಿಎ ಕಮಿಷನರ್​ ಅವರಿಗೆ ದೂರು ಕೊಟ್ತಾರೆ. ದೂರಿನ ಮೇರೆಗೆ ತನಿಖೆ ಕೈಗೊಳ್ಳಲಾಗುತ್ತೆ. ರಾಮಚಂದ್ರ ಅವರಿಗೆ ಮೋಸ ಆಗಿರೋದು ಸಾಬೀತಾಗುತ್ತೆ. ಆದ್ರೆ ಇವತ್ತಿನ ವರೆಗೂ ಬಿಡಿಎ ಅಧಿಕಾರಿಗಳು ರಾಮಚಂದ್ರ ಅವರಿಗೆ ಅವರ ಸೈಟನ್ನ ವಾಪಾಸು ಕೊಡುವಲ್ಲಿ ವಿಫಲಾಗಿದ್ದಾರೆ. ಇವರನ್ನ ಪ್ರತಿನಿತ್ಯ ಅಲೆದಾಡಿಸುತ್ತಲೇ ಇದ್ದಾರೆ. ಅಲ್ಲದೆ ರಾಮಚಂದ್ರ ಅವರಿಗೆ ಮೋಸ ಮಾಡಿರೋ ಅಧಿಕಾರಿಗಳಿಂದ ಅವರಿಗೆ ಜೀವ ಬೆದರಿಕೆಗಳೂ ಬಂದಿವೆ. ಅಧಿಕಾರಿಗಳೋ ಸುಳ್ಳು ಭರವಸೆ ಕೊಡ್ತಾ ಈ ಹಿರಿ ಜೀವವನ್ನ ಅವಮಾನಿಸುತ್ತಿದ್ದಾರೆ. ಕೆ.ರಾಮಚಂದ್ರ ಅವರು ಒಂದು ಸಣ್ಣ ಆಸೆ ಇಟ್ಟು ಪ್ರತಿನಿತ್ಯ ಕನಕಪುರದಿಂದ ಬಿಡಿಎ ಕಚೇರಿ, ಬಿಡಿಎ ಕಚೇರಿಯಿಂದ ಮನೆಗೆ ಸುತ್ತಾಡುತ್ತಿದ್ದಾರೆ. ಸಾಲದ ಭಾರ ಹೊತ್ತು ಸುಸ್ತಾಗಿದ್ದಾರೆ. ಆದ್ರೂ ಅಧಿಕಾರಿಗಳ ಮನಕರಗಲಿಲ್ಲ. ಸರ್ಕಾರ ಕಣ್ತೆರೆಯುತ್ತಿಲ್ಲ.

ನಮ್ಮ ಸರ್ಕಾರ ಸಂವೇದನಾ ಹೀನವಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಮೌಲ್ಯವೇ ಅರ್ಥವಾಗುತ್ತಿಲ್ಲ. ಹಾಗಾಗಿಯೇ ಬಿಡಿಎ ಅಧಿಕಾರಿಗಳು ಒಂದು 30×40 ಸೈಟ್​ಗಾಗಿ ಸ್ವಾತಂತ್ರ್ಯ ಹೋರಾಟಗಾರರನ್ನ ಹತ್ತಾರು ವರ್ಷಗಳಿಂದ ಓಡಾಡಿಸುತ್ತಲೇ ಇದ್ದಾರೆ. ತಮಗೆ ದಕ್ಕಿರೋ ಸೈಟ್​ ಪಡೆಯೋ ಸಲುವಾಗಿ ಅನೇಕ ಹಿರಿಯ ಹೋರಾಟಗಾರರು ಬಿಡಿಎಗೆ ಸುತ್ತಾಡಿ ಸುತ್ತಾಡಿ…. ಕೊನೆಗೆ ನಿರಾಶರಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಒಂದು ಸಣ್ಣ ಆಶಾಕಿರಣದಿಂದ ಈಗಲೂ ಪ್ರತಿನಿತ್ಯ ಬಿಡಿಎ ಕಚೇರಿ ಸುತ್ತಾಡುತ್ತಲೇ ಇದ್ದಾರೆ. ಅವಮಾನ ಸಹಿಸುತ್ತಲೇ ಇದ್ದಾರೆ. ಇಂಥಾ ಇನ್ನಷ್ಟು ಹಿರಿಯ ಚೇತನಗಳನ್ನ ಕವರ್​ಸ್ಟೋರಿ ತಂಡ ಮಾತನಾಡಿಸಿತು.

ಭದ್ರಾವತಿಯ ಯತಿರಾಜು ನಾಯ್ಡು ಅವರಿಗೆ ವಯಸ್ಸು 86 ವರ್ಷ. ಇವರು ಭಾರತ ಬಿಟ್ಟು ತೊಲಗಿ ಚಳುವಳಿ ಸೇರಿದಂತೆ ಅನೇಕ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ್ರು. ತಮ್ಮ ಇಡೀ ಜೀವನವನ್ನ ದೇಶಕ್ಕಾಗಿ ಮುಡಿಪಾಗಿಟ್ಟಿದ್ರು. ಆದ್ರೆ ಇಂದು ತಲೆ ಮೇಲೊಂದು ಸೂರಿಲ್ಲದೆ ಅತಂತ್ರರಾಗಿದ್ದಾರೆ. ಇವರಿಗೆ ಸರ್ಕಾರ ಕೊಟ್ಟ ಬಿಡಿಎ ಸೈಟ್​ ಭರವಸೆಯೂ ಹುಸಿಯಾಗಿದೆ. ಇವರೂ ಅಷ್ಟೇ ಎರಡು ದಿನಕ್ಕೊಮ್ಮೆ ಬಿಡಿಎ ಕಚೇರಿಗೆ ಭೇಟಿ ಕೊಡುತ್ತಲೇ ಇದ್ದಾರೆ. ಆದ್ರೆ ಇವರ ಚಪ್ಪಲಿ ಮಾತ್ರ ಸವೆಯುತ್ತಿದೆ, ಏನೂ ಪ್ರತಿಫಲ ಸಿಗುತ್ತಿಲ್ಲ. ಬಿಡಿಎ ಅಧಿಕಾರಿಗಳು ಬೇಕೂಂತಕಲೇ ನಮ್ಮನ್ನ ಈ ರೀತಿ ಸತಾಯಿಸುತ್ತಿದ್ದಾರೆ. ಯಾಕಂದ್ರೆ ಇನ್ನು ಐದಾರು ವರ್ಷಗಳು ಕಳೆದ್ರೆ ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರೇ ಇರಲ್ಲ. ಆಗ ಬಿಡಿಎಗೆ ಸೈಟ್​ ಮಂಜೂರು ಮಾಡೋ ಪ್ರಮೇಯವೇ ಬರಲ್ಲ. ಅಲ್ಲದೆ ತಮ್ಮ ಹೆಸರಿನ ಸೈಟನ್ನ ಅಕ್ರಮವಾಗಿ ಬೇರೆಯವರಿಗೆ ಮಾರಿ ಹಣ ಲೂಟಿ ಹೊಡೆಯಬಹುದಲ್ಲಾ ಅಂತ ನೋವಿನಿಂದ ನುಡೀತಾರೆ.

ಇವರ ಕತೆಯಾದ್ರೆ ಇನ್ನು 90 ಗಡಿ ದಾಟಿರೋ ಹಿರಿಯ ಹೋರಾಟಗಾರರಾದ ವಿ.ಎನ್​ ಹಳ್ಳಿಕೇರಿ ಹಾಗೂ ಸಿ.ಎಸ್​ ರಾಮ ಸಂಜೀವ ಅವರಂತು ಬಿಡಿಎ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಯ, ನೀತಿ, ಸತ್ಯ ಅಹಿಂಸೆಯಲ್ಲಿ ನಂಬಿಕೆ ಇಟ್ಟ ಇವರು ಬಿಡಿಎ ಅಧಿಕಾರಿಗಳು ಸೈಟ್​ ಕೊಟ್ಟೇ ಕೊಡ್ತಾರೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಆದ್ರೆ ಸಾಯೋ ಮುನ್ನ ಸೈಟ್​ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಅಂತ ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಸೇನಾನಿಗಳು ಬಿಡಿಎ ಮುಂದೆ ಭಿಕ್ಷೆ ಬೇಡ್ತಿದ್ದಾರೆ. ಆದ್ರೂ ಯಾವ ಪ್ರಯೋಜನವೂ ಆಗ್ತಿಲ್ಲ.

ಡಿನ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನು ಬಲಿಕೊಟ್ಟ ಹಿರಿಯ ಸ್ವತಂತ್ರ ಸೇನಾನಿಗಳ ನೋವಿಗೆ ದನಿಯಾಗಲು ನಾವು ನಿರ್ಧರಿಸಿದೆವು. ಅವರ ಜೊತೆ ಅವರಿಗೆ ಅಲಾಟ್​ ಮಾಡಿದ್ದ ಸೈಟ್​ಗಳ ಹುಡುಕಾಟ ನಡೆಸಿದೆವು. ತಮಾಷೆ ಅಂದ್ರೆ ಹೆಚ್ಚಿನ ಹಿರಿಯರಿಗೆ ಬಿಡಿಎ ಅಧಿಕಾರಿಗಳು ಇನ್ನೂ ಸೈಟ್​ ನಂಬರೇ ಹೇಳಲಿಲ್ಲ. ಕೆಲವರಿಗೆ ಲೇಔಟೇ ತೋರಿಸಿಲ್ಲ. ಇವರ ಮನವಿಗೆ ಬಿಡಿಎ ಅಧಿಕಾರಿಗಳು ಯಾವ ರೀತಿ ವರ್ತಿಸ್ತಾರೆ ಅನ್ನೋದನ್ನ ತಿಳಿಯಲು ನಾವು ರಹಸ್ಯ ಕಾರ್ಯಾಚರಣೆಗೆ ಮುಂದಾದ್ವಿ. ಮೊದಲು ಕೆ.ರಾಮಚಂದ್ರ ಅವರ ಜೊತೆ ಬಿಡಿಎ ಅಧಿಕಾರಿ ದಯಾನಂದ ಭಂಡಾರಿಯವರನ್ನ ಭೇಟಿಯಾದ್ವಿ. ಆಗ ಅವರು ಇನ್ನೆರೆಡು ದಿನಗಳಲ್ಲಿ ರಾಮಚಂದ್ರ ಅವರ ಕೆಲಸ ಮುಗಿಸಿ ಕೊಡೋ ಭರವಸೆ ಕೊಟ್ಟಿದ್ದಾರೆ. ಲ್ಲಿಂದ ನಾವು ಯತಿರಾಜು ನಾಯ್ಡು ಅವರ ಜೊತೆ ಬಿಡಿಎ ಹಿರಿಯ ಅಧಿಕಾರಿ ಕಾಂತರಾಜು ಅವರ ಬಳಿ ತೆರಳಿದ್ವಿ. ಅವರೂ ಸಹ ಅದೇ ಹಳೆ ಭರವಸೆ ಕೊಟ್ಟು ಕಳುಹಿಸಿದ್ರು. ಈ ರೀತಿ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣ ಹೇಳಿ ಈ ಹಿರಿ ಜೀವಗಳನ್ನ ಸಾಗ ಹಾಕುತ್ತಲೇ ಇದ್ದಾರೆ. ಆ ಮೂಲಕ ಅವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಕಾಣಿಕೆಯನ್ನ ಅವಮಾನಿಸುತ್ತಲೇ ಇದ್ದಾರೆ. ಇದು ಬರೀ ಬಿಡಿಎಗೆ ಮಾತ್ರವಲ್ಲ ಸರ್ಕಾರದ ಬೇರೆ ಇಲಾಖೆಗಳೂ ಕೂಡ ಇವರಿಗೆ ಇದೇ ರೀತಿ ಹಿಂಸೆ ಕೊಡುತ್ತಿವೆ. ಅಷ್ಟೇ ಅಲ್ಲ ಅನೇಕ ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಕೊಡಲೂ ಅಧಿಕಾರಿಗಳು ಸತಾಯಿಸಿದ್ದಿದೆಯಂತೆ. ಎಂಥಾ ದುಸ್ಥಿತಿ. ಇದು ಬ್ರಿಟೀಷ್​ ಆಳ್ವಿಕೆಗಿಂತ ಕ್ರೂರವಾಗಿದೆಯಲ್ಲಾ? ನಮ್ಮ ಮಧ್ಯೆ ಇರೋ ಕೆಲವೇ ಕೆಲವು ಹಿರಿಯ ಸ್ವತಂತ್ರ ಸೇನಾನಿಗಳಿಗೆ ಸೂಕ್ತ ಗೌರವ ನೀಡಲಾಗದಷ್ಟು ಬಡವಾಗಿದೆಯಾ ನಮ್ಮ ನಾಡು.

Write A Comment