ನವದೆಹಲಿ: ಬಿಜೆಪಿ ಮತ್ತು ಶಿವಸೇನೆಯ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಿದೆ ಎನ್ನುವ ವರದಿಗಳ ಮಧ್ಯೆಯೇ, ಸರಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಉದ್ಭವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಸರಕಾರಕ್ಕೆ ಯಾವುದೇ ರೀತಿ ಧಕ್ಕೆಯಿಲ್ಲ. ಮೈತ್ರಿ ಸರಕಾರದ ಜೊತೆಯಲ್ಲಿ ಸಾಗಲಿದೆ. ಅಂತ್ಯಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಶಿವಸೇನೆ ಸರಕಾರದಿಂದ ಹೊರಹೋಗುವುದಿಲ್ಲ ಎನ್ನುವ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ. ನಮ್ಮ ಸರಕಾರ ಐದು ವರ್ಷಗಳ ಅವಧಿ ಪೂರ್ತಿಗೊಳಿಸಲಿದೆ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮುಂಬೈಯಲ್ಲಿ ಗುಲಾಮ್ ಅಲಿ ಕಾರ್ಯಕ್ರಮವನ್ನು ರದ್ದುಗೊಳಿಸುವ ಕುರಿತಂತೆ ಶಿವಸೇನೆ ಒತ್ತಡ ಹೇರುತ್ತಿರುವುದರಿಂದ ಉಭಯ ಪಕ್ಷಗಳ ನಡುವೆ ಬಿಕ್ಕಟ್ಟು ಉಂಟಾಗಿದೆ ಎನ್ನುವ ವರದಿಗಳಿಗೆ ಫಡ್ನವೀಸ್ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿದ್ದ ಬಿಜೆಪಿ ಮುಖಂಡ ಸುಧೀಂದ್ರ ಕುಲ್ಕರ್ಣಿಯವರ ಮುಖಕ್ಕೆ ಕಪ್ಪು ಮಸಿ ಬಳೆದ ಶಿವಸೇನೆ, ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿತ್ತು.
ಆದರೆ, ವಿದೇಶಿ ಅತಿಥಿಗಳಿಗೆ ಭದ್ರತೆ ನೀಡುವುದು ಸರಕಾರದ ಕರ್ತವ್ಯವಾಗಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಫಡ್ನವೀಸ್ ನೀಡಿದ ಹೇಳಿಕೆ ಶಿವಸೇನೆಗೆ ಆಕ್ರೋಶ ಮೂಡಿಸಿತ್ತು.
ಉಭಯ ಪಕ್ಷಗಳ ಮೈತ್ರಿ ಅಂತ್ಯಗೊಳ್ಳುವಂತಹ ವಿಷಯ ನಮ್ಮ ಮುಂದಿಲ್ಲ. ಪ್ರಸಕ್ತ ವಾರದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಶಿವಸೇನೆ ಸಚಿವರು ಹಾಜರಾಗಿದ್ದರು. ನಂತರ ನಿರಂತರವಾಗಿ ಭೇಟಿಯಾಗುತ್ತಿದ್ದೇವೆ. ಆದ್ದರಿಂದ, ಉದ್ಭವ್ ಠಾಕ್ರೆ ಆಕ್ಟೋಬರ್ 22 ರಂದು ಬೆಂಬಲ ವಾಪಸ್ ಪಡೆಯಲಿದ್ದಾರೆ, ಸರಕಾರ ಬೀಳುತ್ತದೆ ಎನ್ನುವುದನ್ನು ಮರೆತುಬಿಡಿ. ಸರಕಾರ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.