ರಾಷ್ಟ್ರೀಯ

ಜಾತ್ಯತೀತವಾದಿಗಳು ಹಿಂದೂ ವಿರೋಧಿಗಳು, ಮುಸ್ಲಿಂ ಪರರು: ತಸ್ಲಿಮಾ ನಸ್ರೀನ್

Pinterest LinkedIn Tumblr

taslimaನವದೆಹಲಿ: ಭಾರತದಲ್ಲಿ ಬೆಳೆದಿರುವ ಹುಸಿ ಜಾತ್ಯತೀತತೆಯನ್ನು ಅಂತ್ಯಗೊಳಿಸಬೇಕಾದ ಅಗತ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತನಾಡಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್, ಭಾರತದಲ್ಲಿ ‘ಬೆಳೆಯುತ್ತಿರುವ ಅಸಹಿಷ್ಣುತೆ’ ವಿರುದ್ಧ ಬರಹಗಾರರ ದ್ವಿಮುಖತೆಯನ್ನು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಅವರು, ‘ತಮ್ಮ ಪುಸ್ತಕದ ಮೇಲೆ ಪಶ್ಚಿಮ ಬಂಗಾಳದಲ್ಲಿ ನಿಷೇಧ ಹೇರಲ್ಪಟ್ಟಾಗ ಮತ್ತು ಅದರ ವಿರುದ್ಧ 5 ಫತ್ವಾಗಳು ಜಾರಿಯಾದಾಗ ಹೆಚ್ಚಿನ ಬರಹಗಾರರು ಮೌನವನ್ನು ಕಾಯ್ದುಕೊಂಡಿದ್ದರು. ಕೆಲವರಂತೂ ಪುಸ್ತಕದ ಮೇಲೆ ನಿಷೇಧ ಹೇರುವಂತೆ ಸ್ವತಃ ತಾವೇ ಆಗಿನ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದರು’, ಎಂದು ಲೇಖಕಿ ಹಳೆಯ ದಿನಗಳನ್ನು ನೆನಪಿಸಿಕೊಂಡರು.

“ಈಗ ತಮಗೆ ನೀಡಿರುವ ಪ್ರಶಸ್ತಿಗಳನ್ನು ಹಿಂತಿರುಗಿಸುವ ಮೂಲಕ ಹಲವು ಸಾಹಿತಿಗಳು ಅನ್ಯಾಯವನ್ನು ವಿರೋಧಿಸಿ ಧ್ವನಿ ಎತ್ತಲು ನಿರ್ಧರಿಸಿದ್ದಾರೆ. ಇದರಲ್ಲೇನು ತಪ್ಪಿಲ್ಲ. ಕೆಲವೊಮ್ಮೆ ಕೆಲವರಿಗೆ ಹೊಸ ಹೊಸ ಐಡಿಯಾಗಳು ಹೊಳೆಯುತ್ತವೆ ಮತ್ತೆ ಉಳಿದವರು ಅದನ್ನು ಇಷ್ಟ ಪಡುತ್ತಾರೆ. ಆದರೆ ಹಲವು ಬರಹಗಾರರು ತಮಗೆ ಸಮ್ಮತವೆನಿಸದ ವಿಷಯಗಳಲ್ಲಿ  ದ್ವಿಮುಖತೆಯನ್ನು ಪ್ರದರ್ಶಿಸುತ್ತಾರೆ”, ಎಂದು ತಸ್ಲಿಮಾ ಅಭಿಪ್ರಾಯ ಪಟ್ಟಿದ್ದಾರೆ

ಭಾರತದಲ್ಲಿ ಜಾತ್ಯಾತೀಯವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಗಿ ಅವರು ‘ಹೆಚ್ಚಿನ ಜಾತ್ಯಾತೀತವಾದಿಗಳು, ಪ್ರಗತಿಪರರೆನಸಿಕೊಂಡವರು’,  ಹಿಂದೂ ವಿರೋಧಿಗಳು ಎಂದು ಹೇಳಿದ್ದಾರೆ.

‘ಹೆಚ್ಚಿನ ಜಾತ್ಯಾತೀತವಾದಿಗಳು ಮುಸ್ಲಿಂ ಪರರು ಮತ್ತು ಹಿಂದೂ ವಿರೋಧಿಗಳು. ಅವರು ಹಿಂದೂ ಮೂಲಭೂತವಾದಿಗಳ ಕೃತ್ಯಗಳನ್ನು ವಿರೋಧಿಸುತ್ತಾರೆ ಮತ್ತು ಮುಸ್ಲಿಂ ಮೂಲಭೂತವಾದಿಗಳು ಎಸಗುವ ಘೋರ ಕೃತ್ಯಗಳನ್ನು ಸಹ ಸಮರ್ಥಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಾರೆ ಮತ್ತು ಹಿಂದೂಗಳನ್ನು ಕೆರಳಿಸುತ್ತಾರೆ. ಪಶ್ಚಿಮ ಬಂಗಾಳದ ಕ್ಯಾನಿಂಗ್ ಎಂಬ ಹಳ್ಳಿ 2013ರಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ದಹಿಸಲ್ಪಟ್ಟಿತು. ಆಗ ಯಾರು ಧ್ವನಿ ಎತ್ತಿದ್ದರು? ಒಂದು ವೇಳೆ ಮುಸ್ಲಿಮರು ಭಾರತದಲ್ಲಿ ಅತೀ ಕ್ರೂರವಾಗಿ ಶೋಷಣೆಗೊಳಪಡುತ್ತಿದ್ದರೆ ಅವರು ನೆರೆಯ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ ಅಥವಾ ಬಾಂಗ್ಲಾಕ್ಕೆ ಪಲಾಯನ ಮಾಡುತ್ತಿದ್ದರು. ಆದರೆ ಅವರು ಹಾಗೆ ಮಾಡುತ್ತಿಲ್ಲ. ಬದಲಾಗಿ ಭಾರತ ವಿಭಜನೆಯಾಗಿದ್ದಾಗಿನಿಂದ ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಹಿಂದೂ ಅಲ್ಪಸಂಖ್ಯಾತರು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ’, ಎನ್ನುವುದರ ಮೂಲಕ ತಸ್ಲಿಮಾ ಭಾರತದಲ್ಲಿನ ಮುಸ್ಲಿಮರ ಪರಿಸ್ಥಿತಿಗಿಂತ ಪಾಕ್ ಮತ್ತು ಬಾಂಗ್ಲಾದಲ್ಲಿನ ಹಿಂದೂಗಳ ಪರಿಸ್ಥಿತಿ ವಿಷಮವಾಗಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Write A Comment