ಮೂಡುಬಿದಿರೆ: ಮೂಡಬಿದ್ರೆಯಲ್ಲಿ ದುಷ್ಕರ್ಮಿಗಳಿಂದ ಹಾಡುಹಗಲೇ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯ ಹತ್ಯೆ ನಡೆದು ಸರಿ ಸುಮಾರು 9 ದಿನಗಳ ನಂತರ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಶಾಂತ್ ಪೂಜಾರಿಯ ಕೊಲೆಗೆ ಸಂಬಂಧ ಪಟ್ಟಂತೆ ಪ್ರಮುಖ ಆರೋಪಿ ಅದ್ಯಪಾಡಿ ನಿವಾಸಿ ಮೊಹಮ್ಮದ್ ಹನೀಫ್ (36) ಸಹಿತಾ ಮೂಡಬಿದ್ರೆ ನಿವಾಸಿ ಮಹಮ್ಮದ್ ಇಲ್ಯಾಸ್ (27), ಬಂಟ್ವಾಳ ನಿವಾಸಿ ಇಬ್ರಾಹಿಂ ಲಿಯಾಕತ್ (26) ಹಾಗೂ ಮುಲ್ಕಿ ನಿವಾಸಿ ಅಬ್ದುಲ್ ರಶೀದ್ (39) ಎಂಬವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್. ಮುರುಗನ್ ಅವರು ಪ್ರಕಟಿಸಿದ್ದಾರೆ.
ರವಿವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕೊಲೆ ಪ್ರಕರಣದಲ್ಲಿ ಒಟ್ಟು ಆರು ಜನ ನೇರವಾಗಿ ಭಾಗಿಯಾಗಿದ್ದು,ಮೂರು ಮಂದಿ ಪರೋಕ್ಷವಾಗಿ ಸಹಕರಿಸಿದ್ದಾರೆ. ಆರು ಮಂದಿ ಆರೋಪಿಗಳು ಮೂರು ಬೈಕ್ ಗಳಲ್ಲಿ ಬಂದು ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಹತ್ಯೆ ಮಾಡಿದ್ದಾರೆ.. ಮೃತ ಪ್ರಶಾಂತ್ ಪೂಜಾರಿ ಸಕ್ರೀಯವಾಗಿ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಗಂಟಲ್ಕಟ್ಟೆ ಸೇರಿದಂತೆ ಮೂಡಬಿದ್ರೆಯಲ್ಲಿ ನಡೆದ ಕೆಲವೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಶಾಂತ್ ಕೊಲೆಗೆ ಸಂಬಂಧ ಪಟ್ಟಂತೆ ಇದೀಗ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಕೂಡ ಶೀಘ್ರದಲ್ಲಿ ಬಂಧಿಸಲಾಗುವುದು. ಇತರ ಆರೋಪಿಗಳ ಬಗ್ಗೆ ಬಂಧಿತ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಿಸಲಾಗಿದ್ದು, ಇನ್ನುಳಿದ ಆರೋಪಿಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಆರೋಪಿಗಳೆಲ್ಲರೂ ಬಜ್ಪೆ, ಮುಲ್ಕಿ , ಸುರತ್ಕಲ್, ಬಂಟ್ವಾಳ, ಮಂಗಳೂರು ಪರಿಸರದವರಾಗಿ ದ್ದಾರೆ. ಆರೋಪಿಗಳು ಯಾವುದಾದರೂ ಸಂಘಟನೆಯಲ್ಲಿ ಭಾಗಿಯಾಗಿದ್ದಾರ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದರು.
ಬಂಧಿತ ಆರೋಪಿಗಳು ಪ್ರಶಾಂತ್ ಹತ್ಯೆ ಮಾತ್ರವಲ್ಲದೇ ಹಂಡೇಲು ಎಂಬಲ್ಲಿ ಅಶೋಕ್ ಹಾಗೂ ವಾಸು ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಜಯನಾಥ್ ಕೋಟ್ಯಾನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಕಮಿಷನರ್ ತಿಳಿಸಿದರು..
ವಿದೇಶದಿಂದ ಕರೆ ಬಂದ ಬಗ್ಗೆ ಮಾಹಿತಿ ಇಲ್ಲ :
ಪ್ರಕರಣದ ಪ್ರತ್ಯಕ್ಷದರ್ಶಿ ಎನ್ನಲಾಗಿದ್ದ ವಾಮನ ಪೂಜಾರಿಯವರನ್ನು ಈಗಾಗಲೇ ಈ ಕೊಲೆ ಬಗ್ಗೆ ವಿಚಾರಿಸಲಾಗಿದೆ,ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪತ್ತೆಗೆ ಸಹಕಾರಿಯಾಗುವಂತಹ ಯಾವೂದೇ ಮಾಹಿತಿ ಅವರಿಂದ ಲಭಿಸಲಿಲ್ಲ. ಹಾಗಾಗಿ ಅವರನ್ನು ಅತಿಯಾದ ತನಿಖೆಗೊಳಪಡಿಸಿಲ್ಲ. ಅನಂತರವಷ್ಟೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಮನ ಪೂಜಾರಿಯವರಿಗೆ ವಿದೇಶದಿಂದ ಯಾವುದೇ ಕರೆ ಬಂದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದರು.
ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ, ಉತ್ತಮ ಕಾರ್ಯಾಚರಣೆ ಮೂಲಕ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕಮಿಷನರ್ ಅವರು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂಧಿಸುವುದಾಗಿ ಹೇಳಿದರು.
ಪತ್ರಿಕಾಗೊಷ್ಟಿಯಲ್ಲಿ ಡಿಸಿಪಿ ಶಾಂತರಾಜ್ ( ಕಾನೂನು ಮತ್ತು ಸುವ್ಯವಸ್ಥೆ) ) ಹಾಗೂ ಡಿಸಿಪಿ ಸಂಜೀವ್ ಎಂ ಪಾಟೀಲ್ ( ಅಪರಾಧ ವಿಭಾಗ) ಉಪಸ್ಥಿತರಿದ್ದರು.



