ನಟ ದರ್ಶನ್ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳದೆ ಸರಿಯಾಗಿ ಒಂದು ವರ್ಷವಾಯ್ತು. ಕಳದೆ ವರ್ಷ ನವೆಂಬರ್ನಲ್ಲಿ ‘ಅಂಬರೀಶ’ ಚಿತ್ರದ ಮೂಲಕ ಅವರು ಪ್ರೇಕ್ಷಕನಿಗೆ ‘ದರ್ಶನ’ ನೀಡಿದ್ದರಾದರೂ ಚಿತ್ರ ಸೋತಿದ್ದರಿಂದ ಅಭಿಮಾನಿಗಳಲ್ಲಿ ಬೇಸರ ಉಂಟಾಗಿತ್ತು. ಅಲ್ಲಿಂದೀಚೆಗೆ ಮತ್ತೆ ಯಾವಾಗ ನೆಚ್ಚಿನ ಹೀರೋ ತೆರೆ ಅಲಂಕರಿಸುತ್ತಾರೋ ಎಂಬ ಕಾತರದಲ್ಲಿದ್ದರು ಅಭಿಮಾನಿಗಳು. ಅಲ್ಲದೆ, ಅವರ ‘ಮಿಸ್ಟರ್ ಐರಾವತ’ ಕೂಡ ತಡವಾಗಿದ್ದರಿಂದ ಆ ಕಾಯುವಿಕೆ ಮತ್ತಷ್ಟು ಬೇಸರ ಮೂಡಿಸಿತ್ತು. ಆದರೆ ಇದೀಗ ನ. 1ರಂದು ‘ಐರಾವತ’ ಏರಿ ಬರಲು ದರ್ಶನ್ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲದೆ, ‘ಇನ್ನುಮುಂದೆ ವರ್ಷಕ್ಕೆರಡು ಸಿನಿಮಾ ಫಿಕ್ಸ್’ ಎನ್ನುತ್ತಿದ್ದಾರವರು!!
‘ಐರಾವತ’ದ ಸಲುವಾಗಿ ಕಳೆದ ಒಂದೂವರೆ ವರ್ಷದಿಂದ ನಾನು ಬೇರಾವ ಚಿತ್ರಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ನನ್ನ ಅಭಿಮಾನಿಗಳಿಗೆ ಬೇಸರವಾಗಿರುವುದು ನಿಜ. ಇನ್ನುಮುಂದೆ ಹೀಗಾಗಲು ಬಿಡುವುದಿಲ್ಲ. ವರ್ಷಕ್ಕೆರಡು ಸಿನಿಮಾ ಮಾಡುವ ಆಸೆ ನನಗಿದೆ’ ಎಂದಿದ್ದಾರೆ ದರ್ಶನ್. ಅಂದ್ಹಾಗೆ, ‘ಐರಾವತ’ದ ಆಮೆ ನಡಿಗೆಗೆ ದರ್ಶನ್ ನೀಡುವ ಕಾರಣವೇನು ಗೊತ್ತೇ? ‘ನಿರ್ದೇಶಕ ಎ.ಪಿ. ಅರ್ಜುನ್ ಕೊಂಚ ಸ್ಲೋ!’ ಆದರೆ ಆ ನಿಧಾನಗತಿಯೂ ಸಮರ್ಥನೀಯವಂತೆ. ಅಂದುಕೊಂಡಿದ್ದನ್ನು ಯಥಾಪ್ರಕಾರ ತೆರೆಮೇಲೆ ತರಬೇಕು ಎಂಬ ಛಲದಿಂದಲೇ ಇಷ್ಟು ತಡವಾಯಿತು ಎನ್ನುತ್ತಿದೆ ಚಿತ್ರತಂಡ.