ಬೆಂಗಳೂರು, ಅ.17: ಈಶ್ವರಪ್ಪನವರ ಬಾಯಿಗೆ ನಿಯಂತ್ರಣವೇ ಇರುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದೇ ಅವರ ಸ್ವಭಾವ. ಇಂದೂ ಕೂಡ ಮಾಗಡಿ ತಾಲೂಕಿನ ಮಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಎಂದಿನಂತೆ ತಮ್ಮ ಬಾಯಿಯನ್ನು ಹರಿಬಿಟ್ಟರು. ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ವಿಪಕ್ಷದವರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದೀರಾ ಎಂದು ಖಾಸಗಿ ಸುದ್ದಿ ವಾಹಿನಿಯ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆ ಈಶ್ವರಪ್ಪನವರನ್ನು ಕೆಂಡಾಮಂಡಲವಾಗಿಸಿತು.
ಕೂಡಲೇ ಸಿಟ್ಟಿಗೆದ್ದ ಅವರು ‘ಯಾವನೋ ಎಳ್ಕೊಂಡು ಹೋಗಿ ನಿನ್ನನ್ನ ರೇಪ್ ಮಾಡಿದ್ರೆ ವಿಪಕ್ಷದವರು ಏನ್ ಮಾಡೋಕ್ಕಾಗುತ್ತೆ….’ ಎಂದು ಉದ್ಧಟತನದ ಮಾತುಗಳನ್ನಾಡಿದರು. ನಿನ್ ಮೇಲೆ ರೇಪ್ ಆದ್ರೆ ವಿಪಕ್ಷದವರು ಏನ್ ಮಾಡೋಕ್ಕಾಗುತ್ತೆ. ನಾವೆಲ್ಲೋ ಇರ್ತಿವಿ …ಕಾಯ್ಕೊಂಡು ಕೂರಕ್ಕಾಗುತ್ತಾ? ಎಂದು ಪ್ರಶ್ನೆ ಕೇಳಿದವರಿಗೆ ಮರು ಪ್ರಶ್ನೆ ಹಾಕಿ ಕಕ್ಕಾಬಿಕ್ಕಿಯಾಗುವಂತೆ ಮಾಡಿದರು.
ಪಾಪ, ಪ್ರಶ್ನೆ ಕೇಳಿದ ಆ ವರದಿಗಾರ್ತಿಯ ಪರಿಸ್ಥಿತಿ ಹೇಗಾಗಿರಬೇಡ ನೀವೇ ಊಹಿಸಿ. ಈಶ್ವರಪ್ಪನವರ ಹೇಳಿಕೆಗಳು ಇದೇನು ಹೊಸದಲ್ಲ. ಪಾಕ್ ಗಡಿಯಲ್ಲಿ ಸೈನಿಕರು ಹತ್ಯೆಯಾದ ಸಂದರ್ಭದಲ್ಲಿ ಸೋನಿಯಾ ಅವರ ವಿರುದ್ಧವೂ ಇದೇ ರೀತಿ ಹರಿಹಾಯ್ದಿದ್ದರು. ಸೋನಿಯಾಗಾಂಧಿ ಮಗನ ತಲೆ ಕಡಿದುಕೊಂಡು ಹೋದಾಗ ಅವರಿಗೆ ಗೊತ್ತಾಗುತ್ತೆ ಎಂದು ಹೇಳಿದ್ದರು.
ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡುವಾಗ, ಸಚಿವರು ಮಕ್ಕಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅವರಿಗೆ ಲಕ್ವಾ ಹೊಡೆಯಲಿ ಎಂದು ಹೇಳಿದ್ದರು. ಇದಲ್ಲದೆ, ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪನವರ ಮಕ್ಕಳು ಮರಳು ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದರು. ಇದೇ ರೀತಿ ರಾಜ್ಯದಲ್ಲಿ ಅತ್ಯಾಚಾರ ಘಟನೆ ಖಂಡಿಸುವ ಅಬ್ಬರದಲ್ಲಿ ಗೃಹ ಸಚಿವರ ಮಕ್ಕಳ, ಮೊಮ್ಮಕ್ಕಳ ಮೇಲೆ ಅತ್ಯಾಚಾರವಾದರೆ ಗೊತ್ತಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಹಲವು ಹೇಳಿಕೆಗಳಿಗೆ ಈಶ್ವರಪ್ಪ ಕ್ಷಮೆಯನ್ನೂ ಕೂಡ ಯಾಚಿಸಿದ್ದರು. ಈಗ ವರದಿಗಾರ್ತಿ ವಿರುದ್ಧ ಹೇಳಿಕೆ ನೀಡಿ ನಿನ್ನನ್ನ ಯಾರೋ ಎಳ್ಕೊಂಡು ಹೋಗಿ ರೇಪ್ ಮಾಡಿದರೆ ವಿಪಕ್ಷದವರು ಏನ್ ಮಾಡೋಕ್ಕಾಗುತ್ತೆ ಅಂತ ಬೇಜವಾಬ್ದಾರಿ ಹೇಳಿ ನೀಡಿದ್ದಾರೆ. ಸರ್ಕಾರದ ವಿರುದ್ಧ ಸದಾ ಹರಿಹಾಯುವ ಈಶ್ವರಪ್ಪನವರು ಈ ರೀತಿ ಹೇಳಿದರೆ, ಜನ ಯಾರ ಬಳಿ ಹೋಗಬೇಕು.
