ಪುತ್ತೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ನಿಲ್ಲಿಸುವಲ್ಲಿ ಜಿಲ್ಲೆಯ ನಾಲ್ವರು ಸಚಿವರೂ ವಿಫಲವಾಗಿದ್ದಾರೆ, ಎತ್ತಿನಹೊಳೆ ಯೋಜನೆ ಜಾರಿಗೊಳಿಸುವ ಮೂಲಕ ರಾಜ್ಯದ ಖಜಾನೆ ಲೂಟಿ ಮಾಡುವ ಸಂಚು ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮಂಗಳೂರಿನಿಂದ ಎತ್ತಿನಹೊಳೆವರೆಗೆ ಕೈಗೊಂಡಿರುವ ಪಾದಯಾತ್ರೆಯ ವೇಳೆ ನಡೆದ ಸಮಾರೋಪ ಸಮಾವೇಶದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಜನರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರ ಭಾವನೆಗಳನ್ನು ತುಳಿದು ಯೋಜನೆ ಅನುಷ್ಠಾನಗೊಳಿಸಲು ಬಯಸಿದೆ. ರಾಜ್ಯ ಸರ್ಕಾರಕ್ಕೆ ಎತ್ತಿನಹೊಳೆಯ ನೀರೆತ್ತಲು ಬೇಕಾದ 370 ಮೆಗಾವ್ಯಾಟ್ ವಿದ್ಯುತ್ ಎಲ್ಲಿಂದ ಪಡೆಯುತ್ತೀರಿ ಎಂದರೆ ಈವರೆಗೆ ಉತ್ತರಿಸುತ್ತಿಲ್ಲ. ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ಜಿಲ್ಲೆಯ ನಾಲ್ವರು ಸಚಿವರು ತಮ್ಮ ಕರ್ತವ್ಯವನ್ನು ನಿಭಾಯಿಸಲು ವಿಫಲರಾದರೆ ಜಿಲ್ಲೆಯ ಜನತೆ ಸಹಿಸಲಾರರು ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬಯಲು ಸೀಮೆಯ ಜನತೆಯ ದಾಹ ತೀರಿಸಲು ರಾಜ್ಯ ಸರ್ಕಾರ ಪರಿಸರ ಪ್ರೇಮಿ ಯೋಜನೆಯನ್ನು ರೂಪಿಸಲಿ. ಈಗಾಗಲೇ ಅನುಷ್ಠಾನಗೊಂಡು ಬಳಕೆಯಾಗದ ವರಾಹಿ ಯೋಜನೆಯಿಂದ ಬಯಲು ಸೀಮೆಗೆ ನೀರು ನೀಡಲಿ. ಶರಾವತಿ ನದಿಯಿಂದ ನೀರು ಒದಗಿಸಲಿ. ನೀರು ಕೊರತೆಯಾದಲ್ಲಿ ಸಮುದ್ರದ ನೀರನ್ನು ಸದ್ಬಳಕೆ ಮಾಡುವ ಯೋಜನೆ ರೂಪಿಸಲಿ ಎಂದು ಆಗ್ರಹಿಸದರು.
ಬಿಜೆಪಿ ಮುಖಂಡರಾದ ಕೃಷ್ಣ ಜೆ. ಪಾಲೇಮಾರ್, ಗಣೇಶ್ ಕಾರ್ಣಿಕ್, ರಾಜೇಶ್ ನಾಯಕ್, ಪ್ರತಾಪ ಸಿಂಹ ನಾಯಕ್, ರುಕ್ಮಯ ಪೂಜಾರಿ, ದೇವದಾಸ್ ಶೆಟ್ಟಿ, ಸಂಜೀವ ಮಠಂದೂರು, ಶೈಲಜಾ ಭಟ್, ಶಾರದಾರೈ, ಉಮಾನಾಥ ಕೋಟ್ಯಾನ್, ಅಪ್ಪಯ್ಯ ಮಣೀಯಾಣಿ, ಮೋನಪ್ಪ ಭಂಡಾರಿ, ರಾಮಚಂದ್ರ ಬೈಕಂಪಾಡಿ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.









