ಮಂಗಳೂರು, ಅ. 13: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು. ಗಣಪತಿ ದೇವರ ಪ್ರತಿಷ್ಠಾಪನೆ ನಡೆದ ಬಳಿಕ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಸ್.ಮುರುಗನ್ ಮತ್ತು ಶುಭಾ ಮುರುಗನ್ ದಂಪತಿ ದೀಪ ಬೆಳಗಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಉತ್ಸವಗಳು ಸೌಹಾರ್ದತೆ, ಸಹಬಾಳ್ವೆಯ ಸಂಕೇತ. ಮಂಗಳೂರು ದಸರಾ ಉದ್ಘಾಟನೆ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ. ಸಮಾಜದಲ್ಲಿ ಒಳ್ಳೆಯದ್ದನ್ನು ಸ್ವಾಗತಿಸುವ ಸಂದೇಶ ಈ ಹಬ್ಬದ ಮೂಲಕ ಪಸರಿಸಲಿ ಎಂದು ಹಾರೈಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀ ಗಣಪತಿ ದೇವರು, ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಟಾಪನೆ ನೆರವೇರಿತು. ಮುಂಜಾನೆ ಭಾರೀ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿಗಳ ಬಳಿಕ ನವದುರ್ಗೆಯರು ಮತ್ತು ಶಾರದೆಯನ್ನು ಮೆರವಣಿಗೆಯಲ್ಲಿ ಗೋಕರ್ಣನಾಥ ಕಲಾಮಂಟಪಕ್ಕೆ ತರಲಾಯಿತು.
ಬೆಳಗ್ಗೆ ದೇವಳದಲ್ಲಿ ದೇವಳ ಪ್ರಧಾನ ಅರ್ಚಕ ಲಕ್ಷ್ಮಣ್ ಶಾಂತಿ ಮತ್ತು ಲೋಕೇಶ್ ಶಾಂತಿ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಶಾರದಾ ಮೂರ್ತಿಯನ್ನು ದೇವಳಕ್ಕೆ ಪ್ರದಕ್ಷಿಣೆ ಹಾಕಿಸಿ, ಉತ್ಸವದ ದರ್ಬಾರು ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ದಸರಾ ಮಹೋತ್ಸವದ ಶಾರದೆಗೆ ಪ್ರಥಮ ಪೂಜೆ ನಡೆದು, ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಶ್ರೀ ಕ್ಷೇತ್ರದ ಉಪಾಧ್ಯಕ್ಷ ರಾಘವೇಂದ್ರ ಕೂಳೂರು,ಕೋಶಾಧಿಕಾರಿ ಪದ್ಮರಾಜ್ ಆರ್, ಕ್ಷೇತ್ರ ಅಭಿವೃದ್ಧಿ ಮಂಡಳಿಯ ಸದಸ್ಯರಾದ ದೇವೇಂದ್ರ ಪೂಜಾರಿ, ಡಾ.ಬಿ.ಜಿ. ಸುವರ್ಣ, ಎಸ್. ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ಲೀಲಾಕ್ಷ ಕರ್ಕೇರಾ, ಶೇಖರ ಪೂಜಾರಿ, ಬಿ.ಕೆ.ತಾರಾನಾಥ್, ಕೆ.ಮಹೇಶ್ಚಂದ್ರ,ಡಾ. ಬಿ.ಜಿ.ಸುವರ್ಣ, ಡಿ.ಡಿ.ಕಟ್ಟೆಮಾರ್, ಕಾರ್ಪೊರೇಟರ್ ರಾಧಕೃಷ್ಣ, ಲಿಲಾಕ್ಷ ಕರ್ಕೇರ, ಹರಿಕೃಷ್ಣ ಬಂಟ್ವಾಳ್, ಎಸ್.ಜೈವಿಕ್ರಮ್, ಡಾ. ಅನುಸೂಯ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಈ ಬಾರಿ ಅಕ್ಟೋಬರ್ 13 ರಿಂದ 24ರವರೆಗೆ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ -2015ನ್ನು ಬಹಳ ವಿಜೃಭಂಣೆಯಿಂದ ನಡೆಸಲಾಗುವುದು. ಶ್ರೀ ಕ್ಷೇತ್ರದ ಜೀರ್ಣೋದ್ಧಾರವಾಗಿ ಹಾಗೂ ಮಂಗಳೂರು ದಸರಾ ಆರಂಭವಾಗಿ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾದ ರೂವಾರಿ ಬಿ.ಜನಾರ್ದನ ಪೂಜಾರಿಯವರ ನೇತ್ರತ್ವದಲ್ಲಿ ಈ ಬಾರಿ ಬ್ರಹ್ಮಕಲಶೋತ್ಸವ ನಡೆಸಲಾಗುವುದು, ಜೊತೆಗೆ ಶ್ರೀ ಕ್ಷೇತ್ರದ ರಜತಮಹೋತ್ಸವ ಅಂಗವಾಗಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಬಹಳ ಅದ್ಧೂರಿ ಮತ್ತು ವೈಭವಯುತವಾಗಿ ಆಚರಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ :
ಇಂದು ಸಂಜೆ 6:30ಕ್ಕೆ ಸಂತೋಷಿ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರ್ಣಾಟಕ ಬ್ಯಾಂಕ್ನ ಅಧ್ಯಕ್ಷ ಜಯರಾಂ ಭಟ್ ಚಾಲನೆ ನೀಡುವರು. ಪ್ರತೀ ದಿನ ಸಂಜೆ ಇಲ್ಲಿನ ಸಂತೋಷಿ ಕಲಾ ಮಂಟಪದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾರಸಿಕರಿಗೆ ರಸದೌತಣ ನೀಡಲಿದೆ.
ಅ.14ರಂದು ಸಂಜೆ ಹೊರೆಕಾಣಿಕೆ :
ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಜನರ ಸುಭಿಕ್ಷೆಗಾಗಿ ಕ್ಷೇತ್ರದಲ್ಲಿ ಅ.16ರಂದು ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಅ.14ರಂದು ಸಂಜೆ 4 ಗಂಟೆಗೆ ನೆಹರೂ ಮೈದಾನದಿಂದ ಗೋಕರ್ಣ ಕ್ಷೇತ್ರದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಹೊರೆಕಾಣಿಕೆ ತರುವ ಭಕ್ತರು ಅಂದು ಸಂಜೆ 3 ಗಂಟೆಯೊಳಗೆ ನೆಹರೂ ಮೈದಾನದಲ್ಲಿರಬೇಕು, ಭಕ್ತಾಧಿಗಳು ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

























































