ಬೆಂಗಳೂರು, ಅ.11- ಕೂಡ್ಲು ಸಮೀಪದ ಕೆಸಿಡಿಸಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಿಸಿ ಕ್ಯಾಮೆರಾ ಅಳವಡಿಸದ ಬಿಬಿಎಂಪಿ ಆರೋಗ್ಯ ವಿಭಾಗದ ಜಂಟಿ ಆಯುಕ್ತ ಯತೀಶ್‌ಕುಮಾರ್ ಅವರನ್ನು ಮೇಯರ್ ಮಂಜುನಾಥರೆಡ್ಡಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ಮೇಯರ್ ಮಂಜುನಾಥರೆಡ್ಡಿ ಇಂದು ಕೆಸಿಡಿಸಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಘಟಕದ ಹೆಬ್ಬಾಗಿಲಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರಲಿಲ್ಲ. ಕೂಡಲೇ ಜಂಟಿ ಆಯುಕ್ತ ಯತೀಶ್‌ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಅವರು ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಘಟಕದಲ್ಲಿ ಯಾವೊಂದು ಯೋಜನೆಗಳೂ ಸಮರ್ಪಕವಾಗಿ ಜಾರಿಯಾಗದಿರುವುದು ಮೇಯರ್ ಅವರನ್ನು ಕೆರಳಿಸಿತು. ಪ್ರತಿನಿತ್ಯ ಎಷ್ಟು ಲಾರಿಗಳಲ್ಲಿ ಕಸ ಬರುತ್ತದೆ ಎಂಬ ಬಗ್ಗೆಯೇ ಅಧಿಕಾರಿಗಳಲ್ಲಿ ಮಾಹಿತಿ ಇರಲಿಲ್ಲ.
ಯಾವ ರೀತಿ ಕಸ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಯೋಜನೆಗಳು ಇರಲಿಲ್ಲ. ಕಸ ತುಂಬಿಕೊಂಡು ಬರುವ ಲಾರಿಗಳಿಗೆ ಕಸ ವಿಲೇವಾರಿಗೂ ಮುನ್ನ ಸ್ಥಳೀಯರಿಗೆ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಲಾರಿಗಳಿಗೆ ಔಷಧಿ ಸಿಂಪಡಿಸಬೇಕು. ಆದರೆ, ಈ ಘಟಕಕ್ಕೆ ಬರುವ ಯಾವುದೇ ಲಾರಿಗಳಿಗೂ ಔಷಧಿ ಸಿಂಪಡಿಸದಿರುವುದು ಪತ್ತೆಯಾಯಿತು. ಕೂಡಲೇ ಅಧಿಕಾರಿಗಳ ಚಳಿ ಬಿಡಿಸಿದ ಮೇಯರ್ ಅವರು ನಿಮಗೆ ಎಷ್ಟು ಹೇಳಿದರೂ ಬುದ್ಧಿ ಬರುವುದಿಲ್ಲ. ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ಲಾರಿಗಳಿಗೆ ಔಷಧಿ ಸಿಂಪಡಿಸಿ ಎಂದರೆ ಮಾತೇ ಕೇಳಲ್ಲ. ನಾವು ಪರಿಶೀಲನೆಗೆ ಬರುವ ವೇಳೆ ದಿಢೀರನೆ ಎಚ್ಚೆತ್ತುಕೊಳ್ಳುತ್ತೀರ.
ಇಂತಹ ವರ್ತನೆಗಳನ್ನು ಭವಿಷ್ಯದಲ್ಲಿ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು. ಘಟಕದಲ್ಲೇ ನಿರ್ಮಿಸಲಾಗುತ್ತಿದ್ದ ಕಾಮಗಾರಿಗೆ ಫಿಲ್ಟರ್ ಮರಳು ಬಳಸುತ್ತಿರುವುದನ್ನು ಪತ್ತೆ ಹಚ್ಚಿದ ಮೇಯರ್ ಅವರು ಈ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಉತ್ತಮ ಮರಳು ಬಳಸಿ ಪುನರ್ ಕಾಮಗಾರಿ ಆರಂಭಿಸುವಂತೆ ಆದೇಶಿಸಿದರು. ಸ್ಥಳದಲ್ಲೇ ತುಕ್ಕು ಹಿಡಿದಿದ್ದ ಕಾಂಪ್ಯಾಕ್ಟರ್‌ಅನ್ನು ದುರಸ್ತಿಗೊಳಿಸುವಂತೆ ಸೂಚನೆ ನೀಡಿದ ಮಂಜುನಾಥರೆಡ್ಡಿಯವರು ಕಸ ವಿಲೇವಾರಿ ಘಟಕದಲ್ಲಿ ಯಾವ ಯಾವ ಯೋಜನೆ ಕೈಗೆತ್ತಿಕೊಂಡಿದ್ದೀರ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು. ಬಿಬಿಎಂಪಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.