ಲಂಡನ್, ಅ. 11: ಮಕ್ಕಳ ವಿರುದ್ಧದ ಕ್ರೌರ್ಯಕ್ಕಾಗಿ ಬ್ರಿಟಿಶ್ ಮಹಿಳೆಯೊಬ್ಬರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ತನ್ನ ಎರಡು ವರ್ಷದ ಮಗ ನೀರಿನಲ್ಲಿ ಮುಳುಗಿದಾಗಲೂ ಈ ಮಹಿಳೆ ತನ್ನ ಪೋನ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಹಲ್ ಕ್ರೌನ್ ನ್ಯಾಯಾಲಯದಲ್ಲಿ ಶನಿವಾರ ನಡೆದ ವಿಚಾರಣೆಯ ವೇಳೆ ನ್ಯಾಯಾಧೀಶರು, ನಿಮ್ಮ ಮಕ್ಕಳ ಪಾಲನೆಯ ರೀತಿ ಕೆಟ್ಟದಾಗಿದೆ ಎಂಬುದಾಗಿ 31 ವರ್ಷದ ಕ್ಲೇರ್ ಬಾರ್ನೆಟ್‌ರನ್ನು ತರಾಟೆಗೆ ತೆಗೆದು ಕೊಂಡರು ಹಾಗೂ ನೀವು ಜವಾಬ್ದಾರಿ ಹೊತ್ತಿರುವ ಯಾವುದೇ ಮಗುವಿಗೆ ನೀವೊಂದು ಅಪಾಯವಾಗಿದ್ದೀರಿ ಎಂದು ಹೇಳಿದರು ಎಂದು ‘ದ ಗಾರ್ಡಿಯನ್’ ವರದಿ ಮಾಡಿದೆ.
2014 ಮಾರ್ಚ್ 17ರಂದು ಪೂರ್ವ ಯಾರ್ಕ್‌ಶಯರ್‌ನ ಬೆವರ್ಲಿಯ ಮನೆಯ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಮಗು ಜೋಶುವ ಬಾರ್ನೆಟ್ ಕೊಳಕ್ಕೆ ಬಿದ್ದು ಮೃತಪಟ್ಟಿತ್ತು.
ಮಗುವಿನ ಸಾವಿನ ಹೊತ್ತಿನಲ್ಲೂ ಬಾರ್ನೆಟ್ ತನ್ನ ಫೋನ್‌ನತ್ತ ನೋಡು ತ್ತಿದ್ದರು ಎನ್ನಲಾಗಿದೆ. ಆಕೆ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಬಳಿಕ ಅದೇ ದಿನ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು.
ಆಕೆ ತನ್ನ ಮಗುವನ್ನು ರಸ್ತೆಯಲ್ಲೂ ಆಡವಾಡಲು ಬಿಡುತ್ತಿದ್ದಳು ಎನ್ನಲಾಗಿದೆ. ಒಂದು ದಿನ ಕಾರಿನ ಅಡಿಗೆ ಬೀಳುವುದರಿಂದ ಮಗು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತು ಎಂಬುದಾಗಿ ನೆರೆಕರೆ ಯವರು ಸಾಮಾಜಿಕ ಸೇವಾ ಇಲಾಖೆಗೆ ದೂರು ನೀಡಿದ್ದರು.
