ಇಸ್ಲಮಾಬಾದ್, ಅ.8- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಅಂದರೆ, 1999ರಲ್ಲಿ ಕಾರ್ಗಿಲ್‌ನಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತೊಡೆದು ಹಾಕುವಂತೆ ಚಿತ್ರರಂಗದ ದಂತಕಥೆ, ಮೇರು ನಟ ದಿಲೀಪ್‌ಕುಮಾರ್ ಇಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್‌ಗೆ ಸೂಚಿಸಿದ್ದರು ಎಂದು ಪಾಕ್‌ನ ಮಾಜಿ ವಿದೇಶಾಂಗ ಸಚಿವರು ಬಹಿರಂಗಪಡಿಸಿದ್ದಾರೆ. ಪ್ರಧಾನಿ ವಾಜಪೇಯಿ ಅವರ ಮೇಲಿನ ಗೌರವ-ಅಭಿಮಾನಗಳಿಂದಾಗಿ, ಅವರ ಪರವಾಗಿ ದಿಲೀಪ್‌ಕುಮಾರ್ ಷರೀಫ್ ಅವರಿಗೆ ಈ ಮನವಿ ಮಾಡಿದ್ದರು ಎಂದು ಪಾಕಿಸ್ಥಾನದ ಮಾಜಿ ವಿದೇಶಾಂಗ ಸಚಿವ ಖುರ್ಷೀದ್ ಮಹಮದ್ ಕಸೂರಿ ತಿಳಿಸಿದ್ದಾರೆ.
ಪಾಕಿಸ್ಥಾನದಲ್ಲಿ ಜನಿಸಿದ್ದ ದಿಲೀಪ್‌ಕುಮಾರ್ ಬಾಲಿವುಡ್ ನಟನಾಗಿ ಭಾರತದಲ್ಲಿ ಮನೆ ಮಾತಾಗಿದ್ದರಲ್ಲದೆ, 1998ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೂ ಪಾತ್ರರಾಗಿದ್ದರು. 1999ರ ಜುಲೈನಲ್ಲಿ ಒಂದು ದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ಸಂಘರ್ಷ ಕುರಿತಂತೆ ದೂರವಾಣಿ ಮೂಲಕ ಮಾತನಾಡಿದ್ದರು. ಅವರು ತಮ್ಮ ಮಾತು ಮುಗಿಸಿ ನಂತರ ಅದೇ ದೂರವಾಣಿಯನ್ನು ಈ ಮೇರುನಟನಿಗೆ ನೀಡಿದ್ದರು. ಆಗ ಮಾತನಾಡಿದ ದಿಲೀಪ್ ಕಾರ್ಗಿಲ್ ಸಂಘರ್ಷಕ್ಕೆ ತೆರೆ ಎಳೆಯಬೇಕು ಎಂದು ತಿಳಿಸಿದ್ದರು ಎಂದು ಕಸರಿ ಹೇಳಿರುವುದಾಗಿ ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
ಅಚ್ಚರಿ ಎಂದರೆ ದಿಲೀಪ್‌ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದ ನವಾಜ್ ಷರೀಫ್, ದಿಲೀಪ್ ದನಿ ಕೇಳಿ ಕೆಲಹೊತ್ತು ಸ್ತಂಭೀಭೂತರಾಗಿದ್ದರು. ಷರೀಫ್ ತನ್ನ ನೆಚ್ಚಿನ ನಟ ಹೀಗೆ ದೂರವಾಣಿಯಲ್ಲಿ ತನ್ನೊಂದಿಗೆ ಮಾತನಾಡುತ್ತಿದ್ದಾರೆಂಬುದನ್ನು ನಂಬಲೂ ಆಗದೆ ಒದ್ದಾಡಿದ್ದರು. ನಿಜಕ್ಕೂ ನಾನೇ ಮಾತನಾಡುತ್ತಿದ್ದೇನೆ ಎಂದು ದಿಲೀಪ್ ಖಚಿತಪಡಿಸಿದ್ದರು. ಕಾರ್ಗಿಲ್ ಸಂಘರ್ಷದಿಂದ ನನ್ನ ಮನಸ್ಸಿಗೆ ನೋವಾಗಿದೆ. ದಯಮಾಡಿ ಅದನ್ನು ನಿಲ್ಲಿಸಲು ಪ್ರಯತ್ನ ಮಾಡಿ. ಇದು ಎರಡೂ ದೇಶಗಳ ಜನಸಾಮಾನ್ಯರ ಹಿತದೃಷ್ಟಿಯಿಂದ ಅಗತ್ಯ ಎಂದು ಹೇಳಿದ್ದರು. ಈ ವಿಷಯಗಳನ್ನೊಳಗೊಂಡ ತಾವು ಬರೆದಿರುವ ಪುಸ್ತಕದ ಬಿಡುಗಡೆಗೆ ಮುನ್ನ ಕಸೂರಿ ಈ ಎಲ್ಲ ವಿಷಯಗಳನ್ನೂ ಬಹಿರಂಗ ಮಾಡಿದ್ದಾರೆ.
