ಹೊಸದಿಲ್ಲಿ: 2000 ಇಸವಿಯ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ತೀರ ಸಾಮಾನ್ಯ ದರ್ಜೆಯ “ಡಂಬ್ ಫೋನ್’ ಎಂದೇ ಇಂದು ಕರೆಯಲ್ಪಡುತ್ತಿರುವ, ಇದೀಗ ಭಾರತೀಯ ಮಾರುಕಟ್ಟೆಗೆ ಬರಲಿರುವ ಹೊಚ್ಚ ಹೊಸ ವಿನ್ಯಾಸದ, ಆದರೆ ಹಳೇ ಬಗೆಯ “ಡಂಬ್ ಫೋನ್’ ಅನ್ನು ನೀವು 22,000 ರೂ.ಗಳ ದುಬಾರಿ ಬೆಲೆ ತೆತ್ತು ಖರೀದಿಸಲು ಬಯಸುವಿರಾ?
ಪಂಟ್ ಎಂಪಿ01 ಮೊಬೈಲ್ ಫೋನ್ ಅನ್ನು ವಿನೂತನ ಹಾಗೂ ಆಕರ್ಷಕ ರೀತಿಯಲ್ಲಿ ವಿನ್ಯಾಸಗೊಳಿಸಿ ಇದೀಗ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಪಂಟ್ ಕಂಪೆನಿಗೆ ತನ್ನ ಗ್ರಾಹಕರು ಈ “ಡಂಬ್ ಫೋನ್ ‘ ಅನ್ನು 22,000 ರೂ.ಗಳ ದುಬಾರಿ ಬೆಲೆ ತೆತ್ತು ಖಂಡಿತಾ ಖರೀದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರೆ ನೀವದನ್ನು ನಂಬಲೇಬೇಕು !
ಪಂಟ್ ಕಂಪೆನಿಯ ಈ ಅತಿಯಾದ ಆತ್ಮ ವಿಶ್ವಾಸಕ್ಕೆ ಆ ಕಂಪೆನಿಯೇ ಹೇಳಿಕೊಳ್ಳುವಂತೆ ಹಲವಾರು ಬಲವಾದ ಕಾರಣಗಳಿವೆ. ಇಂದಿನದು ಏನಿದ್ದರೂ ಸ್ಮಾರ್ಟ್ ಫೋನ್ ಗಳ ಯುಗ. ಜತೆಗೆ ತರಹೇವಾರಿ ಆಪ್ ಗಳು ಸ್ಮಾರ್ಟ್ ಫೋನ್ ಗಳನ್ನು ಆಳುತ್ತಿರುವ ಕಾಲವಿದು. ಹೀಗಾಗಿ ಸ್ಮಾರ್ಟ್ ಫೋನ್ ಬಳಸುತ್ತಿರುವ ಬಳಕೆದಾರರ ದೃಷ್ಟಿ, ಏಕಾಗ್ರತೆ, ಮನಸ್ಸು, ಹೃದಯ ಏನಿದ್ದರೂ ದಿನದ ಬಹುತೇಕ 24 ತಾಸು ಕೂಟ ಆ ಸ್ಮಾರ್ಟ್ ಫೋನ್ ಮೇಲೆಯೇ ಇರುತ್ತದೆ.
ಆದರೆ ಈ ಚಟ ಇದೀಗ ವಿಪರೀತಕ್ಕೆ ಬಂದು ನಿಂತಿದೆ. ಯಾರಿಗೂ ತಮ್ಮ ಸ್ಮಾರ್ಟ್ ಫೋನಿನ ಮೇಲಿನ ದೃಷ್ಟಿಯನ್ನು ಯಾವ ಕಡೆಗೂ ಹರಿಸಲೂ ಪುರುಸೊತ್ತಿಲ್ಲ; ಮನೆ ಮಂದಿ ಬಂದು ಎದುರು ನಿಂತರೂ ಅವರ ದೃಷ್ಟಿ ಸ್ಮಾರ್ಟ್ ಫೋನಿನಿಂದ ಕದಲುವುದಿಲ್ಲ !
ಹೀಗೆ ವಿಪರೀತಕ್ಕೆ ಇಟ್ಟುಕೊಂಡಿರುವ ಈ ಚಟ ಅಥವಾ ಗೀಳು ಹಲವರಿಗೆ ಮಾನಸಿಕ ಕಿರಿಕಿರಿ, ಖನ್ನತೆ, ಹತಾಶೆ, ಜುಗುಪ್ಸೆಗೆ ಕಾರಣವಾಗಿದೆ. ಹೇಗಾದರೂ ಈ ಸ್ಮಾರ್ಟ್ ಫೋನಿನಿಂದ ಪಾರಾಗಿ ತಾವು ಸಹಜವಾಗಿ ಬದುಕಬೇಕು ಎಂದು ಹಲುಬುತ್ತಿರುವವರ ಸಂಖ್ಯೆಯೇ ಇಂದು ಹೆಚ್ಚು !
ಈ ಬಗೆಯ ಭಾರೀ ಸಂಖ್ಯೆಯ ಗ್ರಾಹಕರನ್ನು ದೃಷ್ಟಿಯಲ್ಲಿರಿಸಿಕೊಂಡು ಪಂಟ್ ಕಂಪೆನಿ ಹೊಚ್ಚ ಹೊಸ ವಿನ್ಯಾಸದೊಂದಿಗೆ ರೂಪಿಸಿರುವ “ಡಂಬ್ ಫೋನ್’ ಹಲವು ಬಗೆಯ ಸರಳ ಆಕರ್ಷಣೆಗಳನ್ನು ಹೊಂದಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಡಂಬ್ ಫೋನ್ಗಳು ಕೇವಲ ಕರೆಗಳನ್ನು ಮಾಡುವುದಕ್ಕೆ, ಸ್ವೀಕರಿಸುವುದಕ್ಕೆ, ಸಂದೇಶ ರವಾನಿಸುವುದಕ್ಕೆ, ಅಲರ್ಟ್ಗಳನ್ನು ಸೆಟ್ ಮಾಡುವುದಕ್ಕೆ, ಸಂಪರ್ಕಗಳನ್ನು ದಾಖಲಿಸಿಡುವುದಕ್ಕೆ, ಮುಂತಾಗಿ ತೀರ ಪ್ರಾಥಮಿಕ ಬಗೆಯ ಕೆಲಸಗಳಿಗೆ ಸೀಮಿತವಾಗಿದೆ. ಇದರ ಬಟನ್ಗಳು ಕ್ಯಾಲ್ಕ್ಯುಲೇಟರ್ಗಳಲ್ಲಿರುವಂತೆ ದೊಡ್ಡ ಗಾತ್ರದಲ್ಲೇ ಇವೆ. ಫಂಕ್ಷನ್ ಬಟನ್ಗಳು ಕೂಡ ಗಾತ್ರದಲ್ಲಿ ದೊಡ್ಡವೇ ಇವೆ.
ಈ ಫೋನಿನ ಸ್ಕ್ರೀನ್ ಬಹಳ ಚಿಕ್ಕ ಗಾತ್ರದ್ದು. ಅದೂ ಕಪ್ಪು ಬಿಳುಪು ! ಹಾಗಾಗಿ ಸಹಜವಾಗಿಯೇ ಇದರೊಳಗಿನ ಬ್ಯಾಟರಿ ದೀರ್ಘಕಾಲ ಬರುತ್ತದೆ. ಒಟ್ಟಿನಲ್ಲಿ ಸ್ಮಾರ್ಟ್ ಫೋನಿನ ಗುಂಗು, ಚಟ, ಗೀಳು ಮುಂತಾದವುಗಳಿಂದ ಮುಕ್ತಿ ಪಡೆಯಬಯಸುವ ಮಂದಿಗೆ ಈ ಡಂಬ್ ಫೋನ್ “ವರದಾನ’ವಾಗಲಿದೆ ಎನ್ನುತ್ತದೆ ಕಂಪೆನಿಯ ವೆಬ್ಸೈಟ್ !
ಈ ವರ್ಷ ಕ್ರಿಸ್ಮಸ್ ಹೊತ್ತಿಗೆ ಈ ಡಂಬ್ ಫೋನ್ ಬೇಕೆಂದು ಬಯಸುವವರು 329 ಡಾಲರ್ (ಅಂದಾಜು 21,500 ರೂ.) ಕಳುಹಿಸಿ ಆರ್ಡರ್ ಬುಕ್ ಮಾಡಬೇಕಿದೆ. ಶಿಪ್ಪಿಂಗ್ ದರ ಎಕ್ಸ್ಟ್ರಾ.
ಅದೇನಿದ್ದರೂ ಈ ಡಂಬ್ ಫೋನ್ ಬೇಕೆಂದು ಬಯಸುವವರು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಸಂಗತಿ ಎಂದರೆ ಈಗಿನ ಮಾರುಕಟ್ಟೆಯಲ್ಲಿ ಇದೇ ಬಗೆಯ ಸಾಂಪ್ರದಾಯಿಕ ಫೋನ್ಗಳು 1,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ! ಫಾರ್ಮ್, ಬ್ಲೂ ಮುಂತಾದ ಬ್ರ್ಯಾಂಡೆಡ್ ಫೋನ್ಗಳಿಗಿರುವ ದರ ಅಬ್ಬಬ್ಟಾ ಎಂದರೆ 2,000 ರೂ.
ಈಗ ನೀವೇ ಆಲೊಚಿಸಿ – ಸ್ಮಾರ್ಟ್ ಫೋನ್ನಿಂದ ಮುಕ್ತಿ ಪಡೆಯಲು 22,000 ರೂ. ದುಬಾರಿಯ ಬೆಲೆಯ ಡಂಬ್ ಫೋನ್ ಬೇಕೇ – ಅಥವಾ ಸಾಂಪ್ರದಾಯಿಕ ಶೈಲಿಯ ಹಳೇ ವಿನ್ಯಾಸದ ಸಾಮಾನ್ಯ ಫೀಚರ್ ಫೋನ್ಗಳು (ಇವುಗಳಲ್ಲಿ ಹಾಡು ಕೇಳಲು, ಎಫ್ಎಂ ರೇಡಿಯೋ ಆಲಿಸಲು, ಫೋಟೋ ಕ್ಲಿಕ್ಕಿಸಲು ಕೂಡ ಸಾಧ್ಯ) ಸಾಕೇ ಎಂಬುದನ್ನು ನೀವೀಗ ತೀರ್ಮಾನಿಸಬೇಕಾಗಿದೆ !
-ಉದಯವಾಣಿ