ಮಂಗಳೂರು, ಅ.4: ಎತ್ತಿನಹೊಳೆ ಯೋಜನೆ ವಿರುದ್ಧ ದ.ಕ. ಜಿಲ್ಲೆಯಲ್ಲಿ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಸಂಸದ ನಳಿನ್ಕುಮಾರ್ ಕಟೀಲ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಬಿಜೆಪಿ ಘಟಕವು ಮಂಗಳೂರಿನಿಂದ ಎತ್ತಿನಹೊಳೆಯವರೆಗೆ ಪಾದಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ತಿಳಿಸಿದರು.
ಶನಿವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನೇತ್ರಾವರಿ ರಕ್ಷಿಸಿ ದಕ್ಷಿಣ ಕನ್ನಡ ಉಳಿಸಿ’ ಎಂಬ ಘೋಷ ವಾಕ್ಯದೊಂದಿಗೆ ಅ. 10ರಂದು ಬೆಳಗ್ಗೆ ಕಂಕನಾಡಿಯ ಬ್ರಹ್ಮ ಬೈದರ್ಕಳ ಗರಡಿಯಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಅ.13ರಂದು ಎತ್ತಿನ ಹೊಳೆ ಯೋಜನಾ ಪ್ರದೇಶದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಈ ಪಾದಯಾತ್ರೆ ಪಕ್ಷದ ಬ್ಯಾನರ್ನಡಿಯಲ್ಲೇ ನಡೆಯಲಿದೆ ಎಂದು ಹೇಳಿದರು.
ಸಂಸದ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳನ್ನು ಸರಕಾರಕ್ಕೆ ತಿಳಿಸುವ ಉದ್ದೇಶದಿಂದ ಈ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಹಸಿರುಪೀಠದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಯೋಜನಾ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ತಜ್ಞರು, ಪರಿಸರವಾದಿಗಳ ಜೊತೆಗಿನ ಸಂವಾದವನ್ನು ಮಂಗಳೂರಿನಲ್ಲಿಯೇ ನಡೆಸಬೇಕು ಎಂಬ ಬೇಡಿಕೆ ನಮ್ಮದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ಕುಮಾರ್ ಕಟೀಲ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ನಾಯಕರಾದ ರುಕ್ಮಯ ಪೂಜಾರಿ, ನಿತಿನ್ ಕುಮಾರ್, ಸುಲೋಚನಾ ಜಿ.ಕೆ. ಭಟ್, ಗಣೇಶ್ ಕಾರ್ಣಿಕ್, ಸಂಜೀವ ಮಠಂದೂರು, ವಿಕಾಸ್ ಪುತ್ತೂರು, ನಿತಿನ್ ಕುಮಾರ್, ಸತೀಶ್ ಕುಂಪಲ, ಪದ್ಮನಾಭ ಕೊಟ್ಟಾರಿ, ಜಯರಾಮ ಶೆಟ್ಟಿ, ದಿವಾಕರ್ ಸಾಮಾನಿ ಮುಂತಾದವರು ಉಪಸ್ಥಿತರಿದ್ದರು.



