ತುಮಕೂರು, ಅ.3-ಕರಡಿ ಮತ್ತು ಕೋತಿಗಳ ಹಾವಳಿಯಿಂದ ಕಳೆದ ಮೂರ್ನಾಾಲ್ಕು ವರ್ಷದಿಂದ ಬಿತ್ತಿದ ಬೆಳೆಗಳು ಸಂಪೂರ್ಣ ಹಾಳಾಗಿವೆ ಎಂದು ಕೊರಟಗೆರೆ ತಾಲೂಕಿನ ದಮಗಲಯ್ಯಪಾಳ್ಯ ರೈತರು ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಪರಿಹಾರ ಅಥವಾ ಕ್ರಮ ತೆಗೆದುಕೊಳ್ಳದಿದ್ದರೆ ರೈತರೆಲ್ಲರೂ ಸಾಮೂಹಿಕ ಆತ್ಮಹತ್ಯೆಯ ದಾರಿ ತುಳಿಯುವುದಾಗಿ ಎಚ್ಚರಿಸಿದ್ದಾರೆ. ತುಮಕೂರಿನ ಈ ಸಂಜೆ ಪತ್ರಿಕಾ ಕಚೇರಿಗೆ ದಮಗಲಯ್ಯ ಪಾಳ್ಯದ ರೈತರು ಇಂದು ಬೆಳಗ್ಗೆ ಆಗಮಿಸಿ, ತಮ್ಮ ಅಹವಾಲುಗಳನ್ನು ತೋಡಿಕೊಂಡರು. ತಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ಸಾಲ ಮಾಡಿ ಶೇಂಗಾ, ಟೊಮಟೊ, ಹಣ್ಣು ತರಕಾರಿಗಳನ್ನು ಬೆಳೆಯುತ್ತಿದ್ದೇವೆ.
ಆದರೆ ಕಳೆದ ಮೂರ್ನಾದಲ್ಕು ವರ್ಷಗಳಿಂದ ನಿರಂತರವಾಗಿ ಕರಡಿ ಕೋತಿಗಳು ದಾಳಿ ಮಾಡಿ ತಮ್ಮ ಬೆಳೆಗಳನ್ನು ಹಾಳುಮಾಡುತ್ತಿವೆ. ಜೊತೆಗೆ ರೈತರೆಲ್ಲರೂ ಇವುಗಳ ಕಾಟವನ್ನು ತಪ್ಪಿಸುವಲ್ಲಿ ವಿಫಲರಾಗಿದ್ದೇವೆ. ಈ ಕುರಿತು ಗ್ರಾಮದ ರೈತರೆಲ್ಲರೂ ಸೇರಿ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಗೆ ಹಾಗೂ ಅರಣ್ಯ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದರೂ ಸಹ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲವೆಂದು ಮನವಿಪತ್ರದ ನಕಲನ್ನು ತೋರಿಸಿದರು. ರೈತರೆಲ್ಲರೂ ಈಗಾಗಲೇ ಸಾಕಷ್ಟು ಕೈಸಾಲ, ಬ್ಯಾಂಕ್ ಸಾಲವನ್ನು ಮಾಡಿಕೊಂಡು ಕೈಸುಟ್ಟುಕೊಂಡಿದ್ದೇವೆ. ತಮಗೆ ಪ್ರತಿ ವರ್ಷವೂ ಇದೇ ಸಮಸ್ಯೆ ಎದುರಾಗುತ್ತಿದ್ದು ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಪರಿಹಾರ ನೀಡದಿದ್ದರೆ ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆ ದಾರಿ ತುಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.