ಇತ್ತೀಚಿನ ದಿನಗಳಲ್ಲಿ ಪ್ರೀತಿಯೆಂಬುದು ಫ್ಯಾಷನ್ ಆಗಿ ಪರಿವರ್ತನೆಯಾಗಿ, ಬರಿ ದೇಹಾಕರ್ಷಣೆಗೆ ಸೀಮಿತಗೊಂಡಿದೆ. ಇಂದಿನ ಯುವ ಜನತೆಯ ಈ ಮೋಹದಿಂದ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದಿನ ಯುವಕ-ಯುವತಿಯರು ತಮ್ಮ ಜೀವನವನ್ನು ಸುಲಭವಾಗಿ ಸ್ವೀಕರಿಸುತ್ತಿದ್ದು ಇದರಲ್ಲಿ ಜೀವನದ ಒಂದು ಭಾಗವಾದ ಪ್ರೀತಿಯನ್ನು ಕೇವಲ ಮೋಜು-ಮಸ್ತಿಗಾಗಿ, ಟೈಮ್ಪಾಸ್ಗಾಗಿ ಅಷ್ಟೆ ಬಳಸಿಕೊಂಡು ಪ್ರೀತಿಸಿದ ಯುವಕ ಹಾಗೂ ಯುವತಿಯರಿಗೆ ಕೈಕೊಡುವುದು ಅಥವಾ ದುರುಪಯೋಗ ಪಡಿಸಿಕೊಂಡು ಮೋಸ ಮಾಡುವುದು ಇಂದಿನ ಯುವಕರ ಮನಸ್ಥಿತಿ.
ಇದರಲ್ಲಿ ಪ್ರೀತಿಸಿ ಪ್ರಾಮಾಣಿಕತೆಯಿಂದ ಮದುವೆಯಾಗುವುದು ನೂರಕ್ಕೆ ಕೇವಲ ಎರಡು ಮೂರು ಪ್ರಕರಣಗಳಷ್ಟೆ. ಯಾವುದೋ ಸಿನಿಮಾವನ್ನು ನೋಡಿ ಅದರ ನಟ-ನಟಿಯರ ವರ್ತನೆಗೆ ಮಾರುಹೋಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಂಬಿ ಪ್ರೀತಿಸಿದ ಯುವತಿಗೆ ಅಥವಾ ಯುವಕನಿಗೆ ಕೈ ಕೊಡುವುದು ಇಂದಿನ ಯುವಕ-ಯುವತಿಯರ ಹುಚ್ಚು ಮನಸ್ಥಿತಿಯಾಗಿದೆ.
ಪ್ರೀತಿ ಎಂಬುದು ಕೇವಲ ಪ್ರೀತಿಸುವುದಷ್ಟಕ್ಕೆ ಮಾತ್ರ ಸೀಮಿತವಲ್ಲ. ನಂಬಿಕೆ, ಸ್ನೇಹ, ಸುಮಧುರ ಭಾವನೆಗಳನ್ನು ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಂಡು ಬಾಳ ಬಂಡಿ ಸವೆಸಲು ಇರುವ ಒಂದು ದಾರಿಯಷ್ಟೆ.
ಇಂದಿನ ದಿನಗಳಲ್ಲಿ ಯುವಕ-ಯುವತಿಯರು ಬರಿ ದೇಹ ಆಕರ್ಷಣೆಯಿಂದ ಮೋಹಿತರಾಗಿ ಹಿಂದೆ ಮುಂದೆ ನೋಡದೆ ಒಬ್ಬರನ್ನೊಬ್ಬರು ನೋಡದೆ ಪ್ರೀತಿಗೆ ದಿಢೀರ್ ಎಂದು ಬೀಳುವ ಛಾಳಿ ಹೆಚ್ಚಾಗಿ ಬೆಳೆಯುತ್ತಿದೆ. ಈ ಪರಿಣಾಮವಾಗಿ ಪ್ರೀತಿ ಪರಿಶುದ್ಧತೆಯನ್ನು ಕಾಯ್ದುಕೊಳ್ಳದೆ ತ್ಯಾಗ, ವಿವಾಹ ವಿಚ್ಛೇದನ, ಪೆÇೀಷಕರ ವಿರೋಧ ಮಾಡಿಕೊಳ್ಳುವುದು, ಪ್ರೀತಿಯನ್ನು ಗೆಲ್ಲಲಾಗದೆ ಆತ್ಮಹತ್ಯೆ, ಮೋಸ ಹೋಗುವುದು ಇಂತಹ ಭೀಕರ ಕ್ರೈಂಗಳಿಗೆ ಯುವಕರ ಹುಚ್ಚು ಮನಸ್ಸಿನ ಪ್ರೀತಿ ಕಾರಣವಾಗುತ್ತಿದೆ.
ಹದಿಹರೆಯದ ವಯಸ್ಸಿನಲ್ಲೇ ಪ್ರೀತಿಯ ಮೋಡಿಗೆ ಬಿದ್ದು ಯುವ ಜನತೆ ತಮ್ಮ ಭವ್ಯ ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಇದರ ಪರಿಣಾಮ ದುರ್ಬಲ ಸಮಾಜದ ಜೊತೆಗೆ ಸಾಮಾಜಿಕ ಸ್ವಾಸ್ತ್ಯ ಹಾಳಾಗುವಂತಹ ಚಟುವಟಿಕೆಗಳು ಎಲ್ಲೆಡೆ ಕಾಣುತ್ತಿದ್ದೇವೆ. ಆದ್ದರಿಂದ ಯುವಕರು ದುಡುಕದೆ ಕೊಂಚ ಯೋಚಿಸಿ ಬಾಹ್ಯಸೌಂದರ್ಯಕ್ಕೆ ಮರುಳಾಗಿ ಪ್ರೀತಿಯೆಂಬ ಹುಚ್ಚು ಕುದುರೆ ಹತ್ತಿ ಹೋಗುವ ಬದಲು ಆಂತರಿಕ ಸೌಂದರ್ಯಕ್ಕೆ ಮರುಳಾಗಿ ತಮ್ಮ ಜೀವನವನ್ನು ಸುಮಧುರಗೊಳಿಸಿಕೊಂಡರೆ ತಮ್ಮ ಜೀವನದ ಜೊತೆಗೆ ಸಮಾಜವೂ ಕೂಡ ಸುಭೀಕ್ಷವಾಗಿರುತ್ತದೆ.
ತಮ್ಮ ಓದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದನ್ನು ಬಿಟ್ಟು ಯಾವುದೋ ಬಾಹ್ಯ ಸೌಂದರ್ಯದ ಆಕರ್ಷಣೆಗೆ ಮರುಳಾಗಿ ಓದಿಗೆ ತಿಲಾಂಜಲಿ ಇಟ್ಟು ಹುಚ್ಚು ಪ್ರೀತಿಯ ಹಿಂದೆ ಬಿದ್ದು, ಅವಳೇ- ಅವನೇ ತಮ್ಮ ಜೀವನ ಎಂದಷ್ಟೇ ಚಿಂತಿಸಿ ಚಿಕ್ಕಂದಿನಿಂದಲೂ ಸಾಕಿ ಸಲುಹಿದ ಪೆÇೀಷಕರನ್ನು ಮೂಲೆಗುಂಪು ಮಾಡಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ದಿನನಿತ್ಯ ನೋಡುತ್ತಲೇ ಇದ್ದೇವೆ.
– ದಯಾನಂದ್.ಎ.ಸಿ (ಪ್ಯಾರಿಸ್)