ಹುಬ್ಬಳ್ಳಿ, ಅ.3-ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ 61 ನೇ ದಿನಕ್ಕೆ ಕಾಲಿಟ್ಟಿದ್ದು, ಸರಕಾರದ ಮೇಲೆ ಒತ್ತಡ ಹೇರಲು ಇಂದು ನವಲಗುಂದ ಬಂದ್ಗೆ ನೀಡಲಾಗಿತ್ತು. ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಕೂಡ ಯಾವ ಪಕ್ಷದವರು ರೈತರಿಗೆ ನಿರ್ದಿಷ್ಟವಾದ ಭರವಸೆ ತೆಗೆದುಕೊಳ್ಳುವಲ್ಲಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಸ್ಥಿಕೆ ವಹಿಸಿ ಯೋಜನೆ ಅನುಷ್ಠಾನ ಮಾಡಿಸುವಲ್ಲಿ ಮೀನ ಮೇಷ ಮಾಡುತ್ತಿರುವುದರಿಂದ ರೈತರಿಗೆ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಸಂಶಯ ಉಂಟಾಗಿದೆ. ಕಳೆದ ಎರಡು ತಿಂಗಳಿಂದ ನಿರಂತರ ಧರಣಿ ಸತ್ಯಾಗ್ರಹ ಮಾಡಿದರೂ ಕೇಂದ್ರ ಸರಕಾರದಿಂದ ಸಾಂತ್ವನಕ್ಕಾದರೂ ಒಂದು ಸಂದೇಶ ಬಂದಿಲ್ಲವೆಂದರೆ ಏನು ತಿಳಿದುಕೊಳ್ಳಬೇಕು. ರಾಜ್ಯ ಹಾಗು ಕೇಂದ್ರ ಸರಕಾರವನ್ನು ಎಚ್ಚರಿಸಲು ಅ.10 ರಂದು ಕಳಸಾ ನಾಲೆಗೆ ಅಡ್ಡವಾಗಿ ನಿರ್ಮಿಸಿರುವ ತಡೆಗೋಡೆ ಒಡೆಯಲು ನಿರ್ಧರಿಸಲಾಗಿದ್ದು, ಅಂದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ನಾಲ್ಕು ಜಿಲ್ಲೆ ಹಾಗೂ ಒಂಬತ್ತು ತಾಲ್ಲೂಕಿನ ರೈತರು ಹಾಗೂ ರಾಜ್ಯಾಧ್ಯಂತ ಎಲ್ಲ ಕನ್ನಡಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಿಗೆ ತಡೆಗೋಡೆ ಒಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಂದು ಎಲ್ಲ ರೈತರು ಗುದ್ದಲಿ ಸಲಕೆಗಳನ್ನು ತೆಗೆದುಕೊಂಡು ಚಳುವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೋರಾಟ ಸಮಿತಿಯ ಸದಸ್ಯರು ತಿಳಿಸಿದರು.ಹೋರಾಟ ಸಮಿತಿಯ ಮುಖಂಡರಾದ ಸುಭಾಸಚಂದ್ರಗೌಡ ಪಾಟೀಲ ಸಭೈಯ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನಗೌಡ ಪಾಟೀಲ ಕುಲಕರ್ಣಿ, ಫಕ್ಕೀರಗೌಡ ವೆಂಕನಗೌಡ್ರ, ಎಂ.ಡಿ.ಕುಲಕರ್ಣಿ, ರಮೇಶ ನವಲಗುಂದ, ಶಿವಾನಂದಸ್ವಾಮಿ ಮಠಪತಿ, ಕಲ್ಲಪ್ಪ ಹುಬ್ಬಳ್ಳಿ, ವಿ.ಸಿ. ಕಳ್ಳಿಮನಿ, ಶಿವು ಕಂಬಾರ, ಗೌಡಪ್ಪಗೌಡ ದೊಡ್ಡಮನಿ, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.