ಮಂಗಳೂರು, ಅ.03 : ಸಂಘ ಪರಿವಾರದ ಕಾರ್ಯಕರ್ತರು ಜಿಮ್ಗೆ ನುಗ್ಗಿ ಯುವಕನಿಗೆ ಹಲ್ಲೆ ನಡೆಸಿರುವ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಮುದೆಯಲ್ಲಿ ನಡೆದಿದೆ. ಬಜ್ಪೆ ಕಿನ್ನಿಪದವು ನಿವಾಸಿ ಮುಹಮ್ಮದ್ ಆಶಿಕ್ (21) ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ತಂಡದಲ್ಲಿ 12 ಮಂದಿ ಇದ್ದರೆಂದು ಹೇಳಲಾಗಿದೆ.
ಆರೋಪಿಗಳನ್ನು ಪೆರ್ಮುದೆ ಗ್ರಾಪಂ ಉಪಾಧ್ಯಕ್ಷ ಕಿಶೋರ್ ಕುಮಾರ್, ಪಕ್ಕು, ರೀತು, ರತ್ನೇಶ, ಕಾಂತ, ಚರಣ್ ಮತ್ತಿತರರು ಎಂದು ಗುರುತಿಸಲಾಗಿದೆ.ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿನ್ನೆಲೆ: ಮುಹಮ್ಮದ್ ಆಶಿಕ್ ಪೆರ್ಮುದೆಯಲ್ಲಿ ಮೊಬೈಲ್ ಅಂಗಡಿ ಹೊಂದಿದ್ದು, ನಿತ್ಯ ರಾತ್ರಿ 10ಗಂಟೆಗೆ ಅಂಗಡಿ ಬಂದ್ ಮಾಡಿ ಹತ್ತಿರದಲ್ಲೇ ಇರುವ ಜಿಮ್ಗೆ ತೆರಳಿ ಅಲ್ಲಿಂದ 11 ಗಂಟೆಗೆ ಮನೆಗೆ ತೆರಳುತ್ತಿದ್ದರು. ಗುರುವಾರವೂ ಎಂದಿನಂತೆ ಅಂಗಡಿ ಬಂದ್ ಮಾಡಿ ಜಿಮ್ಗೆ ತೆರಳಿದ್ದು, ಅಲ್ಲಿ ಸುಮಾರು ರಾತ್ರಿ 10:40ಕ್ಕೆ ಆಗಮಿಸಿದ 12 ಮಂದಿಯ ತಂಡ ಪ್ರತಿದಿನ ರಾತ್ರಿ 9 ಗಂಟೆಗೆ ಜಿಮ್ನ ಬಾಗಿಲು ಮುಚ್ಚುವಂತೆ ಸೂಚಿಸಿದರು. ಆದರೆ, ರಾತ್ರಿ 11 ಗಂಟೆಯವರೆಗೆ ಜಿಮ್ ನಡೆಸಲು ಅನುಮತಿ ಇದ್ದು, ಬಾಗಿಲು ಹಾಕಬೇಕಾದರೆ ನೀವು ಜಿಮ್ನ ಮಾಲಕರನ್ನು ಸಂಪರ್ಕಿಸುವಂತೆ ತಿಳಿಸಿರುವುದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಿಕ್ ತಿಳಿಸಿದ್ದಾರೆ.
ತಂಡ ‘ನೀನು ಅಧಿಕ ಪ್ರಸಂಗ ಮಾತನಾಡಬೇಡ’ ಎಂದು ಹೇಳಿ ಏಕಾಏಕಿ ಹಲ್ಲೆ ನಡೆಸಲು ಪ್ರಾರಂಭಿಸಿದೆ. ಈ ನಡುವೆ ಪೆರ್ಮುದೆ ಗ್ರಾಪಂ ಉಪಾಧ್ಯಕ್ಷ ಕಿಶೋರ್ ಕುಮಾರ್ ಹಾಗೂ ಪಕ್ಕು ಎಂಬವರು ನನ್ನನ್ನು ಬಲವಾಗಿ ಹಿಡಿದು ತಂಡದವರನ್ನು ಹೊಡೆಯುವಂತೆ ಸೂಚಿಸಿದ್ದಾರೆ. ಸಂಘಪರಿವಾರದ ಕಾರ್ಯಕರ್ತರಲ್ಲೊಬ್ಬ ಜಿಮ್ನಲ್ಲೇ ಇದ್ದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಮತ್ತೆ ಕೆಲವರು ಕೈ, ಬೆನ್ನು, ಸೊಂಟದ ಭಾಗಗಳಿಗೆ ಹಾಗೂ ಕಿಶೋರ್ ಕುಮಾರ್ ಹೊಟ್ಟೆಯ ಭಾಗಕ್ಕೆ ಹೊಡೆದಿದ್ದಾನೆ ಎಂದು ಆಶಿಕ್ ಆರೋಪ ಮಾಡಿದ್ದಾರೆ.
