ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಸಂಘಟಿತ ಹೋರಾಟ ಮಾಡಲು ವಿಭಿನ್ನ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಅಸ್ತಿತ್ವಕ್ಕೆ ತರಲಾಗಿದೆ. ಎತ್ತಿನ ಹೊಳೆ ಯೋಜನೆಯ ವಿರುದ್ಧದ ಹೋರಾಟಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಸುಗೊಂಡಿವೆ. ಅಲ್ಲಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ದೊಡ್ಡ ವೇದಿಕೆಯನ್ನೇ ಸೃಷ್ಟಿಮಾಡಲಾಗಿದೆ ಎಂದು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಸಂಚಾಲಕ ಡಾ. ನಿರಂಜನ್ ರೈ ತಿಳಿಸಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದಡಿಯಲ್ಲಿ ಸೇರುತ್ತಿರುವ ಸಂಘಟನೆಗಳು ಅ. 15ರಂದು ನಗರದ ಪಂಪ್ವೆಲ್ ವೃತ್ತದ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ಜೈಲ್ ಭರೋ, ರಸ್ತೆ ತಡೆ ಕೂಡಾ ನಡೆಸಲಿದ್ದಾರೆ ಎಂದು ತಿಳಿಸಿದರು.
ನೇತ್ರಾವತಿ ತಿರುವು ಯೋಜನೆ ಅವೈಜ್ಞಾನಿಕವೆಂದು ಸಾಬೀತಾಗಿದ್ದರೂ, ಸರಕಾರವು ಯೋಜನೆಯನ್ನು ಕೈಬಿಡದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮಾಡುತ್ತಿರುವ ದೌರ್ಜನ್ಯ. ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತ್ಗಳು ನೇತ್ರಾವತಿ ನದಿ ತಿರುವು ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯನ್ನು ಅನುಮೋದಿಸಿ ನಿರ್ಣಯ ಕೈಗೊಂಡರೆ ಪಂಚಾಯತ್ ಮುಂದೆ ಪ್ರತಿಭಟನೆ, ಬಹಿಷ್ಕಾರ ಮಾಡಲಾಗುವುದು ಎಂದು ಅವರು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತೀರ್ಪು ಬರುವವರೆಗೆ ಸರ್ಕಾರ ಯಾವುದೇ ಯೋಜನೆ ಕೈಗೆತ್ತಿಕೊಳ್ಳಬಾರದೆಂಬ ರಾಷ್ಟ್ರೀಯ ಹಸಿರು ನ್ಯಾಯಾಲಯದ ತಡೆಯನ್ನೇ ಉಲ್ಲಂಘಿಸಿರುವ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸ ಎಂದರು.
ಯೋಜನೆಯ ವಿರುದ್ಧ ಪ್ರತಿಭಟನೆಗಳು ನಡೆದರೂ ಸರಕಾರ ಜನರ ಭಾವನೆಗೆ ಬೆಲೆ ನೀಡುತ್ತಿಲ್ಲ. ಹಾಗಾಗಿ ದ.ಕ., ಸಕಲೇಶಪುರ ಹಾಗೂ ಉಡುಪಿ ಜಿಲ್ಲೆಯ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಜೊತೆ ಸೇರಿ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಹೆಸರಿನಲ್ಲಿ ಬೃಹತ್ ಹೋರಾಟಕ್ಕೆ ಸಿದ್ಧತೆ ಮಾಡುವುದಾಗಿ ನುಡಿದರು.ಎತ್ತಿನಹೊಳೆ ಯೋಜನೆಯ ಸಾಧಕ-ಬಾಧಕಗಳ ಕುರಿತ ಸರ್ಕಾರದ ಚರ್ಚೆ, ಸಭೆಗಳನ್ನು ಬೆಂಗಳೂರಿನಲ್ಲಿ ಕರೆಯುವುದು ಬಿಟ್ಟು ಮಂಗಳೂರಿನಲ್ಲಿ ಕರೆಯಲಿ ಎಂದು ಅವರು ಆಗ್ರಹಿಸಿದರು.
ಈ ಒಕ್ಕೂಟದಲ್ಲಿ ಸಕಲೇಶಪುರ ಮಲೆನಾಡು ಜನಪರ ಹೋರಾಟ ಸಮಿತಿ, ಉಪ್ಪಿನಂಗಡಿಯ ನೇತ್ರಾವತಿ ಉಳಿಸಿ ಹೋರಾಟ ಸಮಿತಿ, ಮಂಗಳೂರಿನ ಜೀವನದಿ ನೇತ್ರಾವತಿ ಉಳಿಸಿ ಹೋರಾಟ ಸಮಿತಿ, ಮಂಗಳೂರಿನ ಸಹ್ಯಾದ್ರಿ ಸಂಚಯ, ತುಳು ರಕ್ಷಣಾವೇದಿಕೆ, ಮಂಗಳೂರಿನ ಕನ್ನಡ ಕಟ್ಟೆ, ಬೆಳ್ತಂಗಡಿಯ ನೇತ್ರಾವತಿ ಉಳಿಸಿ ಹೋರಾಟ ಸಮಿತಿ, ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಮಲೆನಾಡು ಯೂತ್ ಅಸೋಸಿಯೇಶನ್, ಮಂಗಳೂರಿನ ಸರ್ವಕಾಲೇಜು ವಿದ್ಯಾರ್ಥಿ ಸಂಘ, ಬಂಟ್ವಾಳದ ಅರಿವು ಸಂವಾದ ಕೇಂದ್ರ, ಬಂಟ್ವಾಳದ ನೇತ್ರಾವತಿ ಸಂರಕ್ಷಣಾ ವೇದಿಕೆ, ಬಂಟ್ವಾಳ ತಾಲೂಕು ನ್ಯಾಯಪರ ಸಮಿತಿ, ಮಂಗಳೂರಿನ ಸ್ವರೂಪ್ ಅಧ್ಯಯನ ಕೇಂದ್ರ, ಶಿರಾಡಿಯ ಮಲೆನಾಡು ಹಿತರಕ್ಷಣಾ ವೇದಿಕೆ, ಮಂಗಳೂರಿನ ಕನ್ನಡ ರಕ್ಷಣಾ ವೇದಿಕೆ, ಮಂಗಳೂರಿನ ರೈತ ಸಂಘ ಈ ಒಕ್ಕೂಟದಲ್ಲಿದ್ದು ಈ ಸಂಘಟನೆಗಳ ವತಿಯಿಂದ ಒಬ್ಬೊಬ್ಬರನ್ನು ಸಹಸಂಚಾಲಕರನಾಗಿ ನಿಯೋಜಿಸಲಾಗಿದೆ.
ಸಹ್ಯಾದ್ರಿ ಸಂಚಯ ಸಮಿತಿಯ ದಿನೇಶ್ ಹೊಳ್ಳ ಅವರು ಒಕ್ಕೂಟದ ಮಾಧ್ಯಮ ವಕ್ತಾರರಾಗಿರುತ್ತಾರೆ ಎಂದು ಡಾ. ನಿರಂಜನ್ ರೈ ತಿಳಿಸಿದರು.




