ಮಂಗಳೂರು ಅ.02 : ಜಿಲ್ಲೆಯಲ್ಲಿ ಮಕ್ಕಳಿಗೆ ಇಂಧ್ರಧನುಷ್ ಲಸಿಕಾ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅವರು ಗುರುವಾರ ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದ್ರಧನುಷ್ ಅಭಿಯಾನವು ಜಿಲ್ಲೆಯಲ್ಲಿ ಅಕ್ಟೋಬರ್ 7ರಿಂದ ಚಾಲನೆಗೊಳ್ಳಲಿದ್ದು, ಏಳು ದಿನಗಳ ಕಾಲ ನಡೆಯಲಿದೆ. ಎರಡು ವರ್ಷದವರೆಗಿನ ಮಕ್ಕಳಿಗೆ 7 ಮಾರಕ ರೋಗಗಳಾದ ಬಾಲಕ್ಷಯ, ಡಿಪ್ತೀರಿಯಾ, ನಾಯಿಕೆಮ್ಮು, ಧನುರ್ವಾಯು, ಪೋಲಿಯೋ, ದಢಾರ ಮತ್ತು ಹೆಪಟೈಟಿಸ್ ಬಿ ರೋಗಗಳ ವಿರುದ್ಧ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಕ್ಕಳ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ. ಲಸಿಕೆ ವಂಚಿತರಾದ ಮಕ್ಕಳು ಹಾಗೂ ಗರ್ಭಿಣಿಯರಿಗೆ (ಧನುರ್ವಾಯು ಲಸಿಕೆ) ಗುರಿಯಾಗಿರಿಸಿ ಭಾರತ ಸರಕಾರವು ಈ ಕಾರ್ಯಕ್ರಮ ಏರ್ಪಡಿಸಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ನುಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ಕರ್ನಾಟಕದಲ್ಲಿ ಕಳೆದ ಏಪ್ರಿಲ್ನಿಂದ ಜುಲೈವರೆಗೆ ಈಗಾಗಲೇ ಆಯ್ದ ಜಿಲ್ಲೆಗಳಲ್ಲಿ ಇಂದ್ರಧನುಷ್ ಅಭಿಯಾನ ನಡೆದಿರುತ್ತದೆ. ಎರಡನೇ ಹಂತದಲ್ಲಿ ೧೭ ಜಿಲ್ಲೆಗಳಲ್ಲಿ ಅಭಿಯಾನ ನಡೆಯುತ್ತಿದೆ. ದ.ಕ ಜಿಲ್ಲೆಯಲ್ಲಿ ಪ್ರಮುಖವಾಗಿ ವಲಸೆ ಜನರು, ನಿರ್ಮಾಣ ಸ್ಥಳ, ಗುಡ್ಡಗಾಡು ಪ್ರದೇಶ, ಕೊಳಚೆ ಪ್ರದೇಶ ಹಾಗೂ ಕಾರ್ಮಿಕರು ಇರುವ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂಧ್ರಧನುಷ್ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರಪಾಲಿಕೆ, ಗ್ರಾಮ ಪಂಚಾಯತ್, ಮೆಸ್ಕಾಂ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆಗಳು, ಐ.ಎಂ.ಎ, ವೈದ್ಯಕೀಯ, ನರ್ಸಿಂಗ್ ಕಾಲೇಜುಗಳು ಸಹಕರಿಸಲಿವೆ ಎಂದು ಹೇಳಿದರು.
ಸಭೆಯಲ್ಲಿ ಐ.ಎಂ.ಎ. ಅಧ್ಯಕ್ಷ ಡಾ.ಜಿ.ಕೆ ಭಟ್, ಡಾ. ಶಾಂತರಾಮ ಬಾಳಿಗಾ ಮತ್ತಿತರರು ಇದ್ದರು.
