ಕನ್ನಡ ವಾರ್ತೆಗಳು

ಕೊಣಾಜೆ : ಮರಳು ಮಾಫಿಯಾಕ್ಕೆ ಪೊಲೀಸರೇ ಕಾವಲು : ಡಿವೈಎಫ್‌ಐ ಆರೋಪ – ಇನ್‌ಸ್ಪೆಕ್ಟರ್ ಮತ್ತು ಎಸೈ ವರ್ಗಾವಣೆಗೆ ಆಗ್ರಹ

Pinterest LinkedIn Tumblr

ಉಳ್ಳಾಲ, ಅ.2: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹುತವಾಗಿ ನಡೆಯಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ ಎಂದು ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಝ್ ಆರೋಪಿಸಿದ್ದಾರೆ.

ಗುರುವಾರ ತೊಕ್ಕೊಟ್ಟು ಸಿಪಿಐಎಂ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ನಿಷೇಧಿತ ಅಡ್ಯಾರ್ ಕಣ್ಣೂರು, ವಳಚ್ಚಿಳ್ ಧಕ್ಕೆ ಯಲ್ಲಿ ಮರಳುಗಾರಿಕೆಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ನಿಯಂತ್ರಣಕ್ಕೆ ತಂದಿದ್ದರು. ಆದರೆ ಕೊಣಾಜೆ ಪೊಲೀಸರಿಗೆ ಇದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇವರು ಮರಳು ಮಾಫಿಯಾದವರ ಜೊತೆ ಶಾಮೀಲಾಗಿದ್ದಾರೆ ಎಂದು ದೂರಿದಾರೆ.

ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ದಂಡೆಯಿಂದ ಅವ್ಯಾಹತವಾಗಿ ಮರಳುಗಾರಿಕೆ ನಡೆಸಲು ಕೊಣಾಜೆ ಇನ್‌ಸ್ಪೆಕ್ಟರ್ ರಾಘವ ಪಡೀಲ್ ಹಾಗೂ ಎಸೈ ಸುಧಾಕರ್ ಬೆಂಬಲಿಸುತ್ತಿದ್ದು, ಈ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಿಂಗಳೊಳಗೆ ವರ್ಗಾವಣೆಗೊಳಿಸಬೇಕು. ಇಲ್ಲದಿದ್ದಲ್ಲಿ ಕೊಣಾಜೆ ಇನ್‌ಸ್ಪೆಕ್ಟರ್ ಮತ್ತು ಎಸೈ ಹಠಾವೋ ಚಳವಳಿ ಹಮ್ಮಿಕೊಳ್ಳಾಗುವುದು ಎಂದರು.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿ ಗೊಳಪಡುವ ಪ್ರದೇಶಗಳಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಾನೂನು ಮತ್ತು ನಿಯಮಬಾಹಿರವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಪೋಲಿಸರಿಗೆ ಸಾರ್ವಜನಿಕರು ದೂರು ನೀಡಿದರೆ ದಾಳಿ ಮಾಡುವ ಸಂದರ್ಭದಲ್ಲಿ ಮರಳುಗಾರಿಕೆ ನಡೆಸುವವರಿಗೆ ಮಾಹಿತಿ ನೀಡಲಾಗುತ್ತಿದೆ.

ಅಕ್ರಮ ಮರಳುಗಾರಿಕೆ ನಿಯಂತ್ರಣ ಮಾಡಲು ಜಿಲ್ಲಾ ಮತ್ತು ತಾಲೂಕುಗಳಲ್ಲಿ ವಿವಿಧ ಸಮಿತಿಗಳಿದ್ದರೂ ಅಲ್ಲಿರುವ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗಣಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಗೆ ಹೆಚ್ಚುವರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಿದಲ್ಲಿ 24 ಗಂಟೆ ಕಾರ್ಯಾಚರಣೆ ನಡೆಸಿ ಕಳ್ಳದಂಧೆಯನ್ನು ಹತ್ತಿಕ್ಕಬಹುದು ಎಂದು ಇಮ್ತಿಯಾಝ್ ಅಭಿಪ್ರಾಯಪಟ್ಟರು.

ಉಳ್ಳಾಲ ವಲಯ ಕಾರ್ಯದರ್ಶಿ ಜೀವನ ರಾಜ್ ಕುತ್ತಾರ್, ಕೋಶಾಧಿಕಾರಿ ರಫೀಕ್ ಹರೇಕಳ, ರೋಹಿದಾಸ ಅಬ್ಬಂಜರ, ಹರೀಶ್ ಕೆರೆಬೈಲು, ಸುನೀಲ್ ತೇವುಲ ಉಪಸ್ಥಿತರಿದ್ದರು.

Write A Comment