ಕನ್ನಡ ವಾರ್ತೆಗಳು

ಮಕ್ಕಳಿದರೂ ಒಂಟಿತನ ಬಿಡಲಿಲ್ಲ : ಹಿರಿಯ ಮಹಿಳೆಯೊಬ್ಬರಿಂದ ದಯಾಮರಣಕ್ಕೆ ಮನವಿ

Pinterest LinkedIn Tumblr

Zp_elders_day_1

ಮಂಗಳೂರು: ಮಕ್ಕಳಿದರೂ ತನ್ನನ್ನು ಒಂಟಿತನ ಕಾಡುತ್ತಿದೆ. ಒಂಟಿತನದಿಂದ ಹೈರಾಣಾಗಿದ್ದೇನೆ. ದಯವಿಟ್ಟು ನನಗೆ ದಯಾಮರಣ ಪಾಲಿಸಿ ಎಂದು ಹಿರಿಯ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಮುಂದೆ ತಮ್ಮ ನೋವನ್ನು ತೋಡಿಕೊಂಡ ಮನಕಲಕುವ ಘಟನೆಯೊಂದು ಹಿರಿಯ ನಾಗರಿಕರ ದಿನವಾದ ಬುಧವಾರ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದಿದ್ದು, ಈ ಸಂದರ್ಭ ಒಂದು ಕ್ಷಣ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣವೇ ಸ್ತಬ್ಧಗೊಂಡಿದೆ.

ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ಅಂಗವಾಗಿ ಬುಧವಾರ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ದಿನ ಹಿರಿಯರ ಬೇಡಿಕೆಗಳನ್ನು ಈಡೇರಿಸುವ ದಿನ. ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕೇಳಿದಾಗ, ಹಿರಿಯ ಮಹಿಳೆಯೊಬ್ಬರು ನನ್ನ ಮಕ್ಕಳು ಶಿಕ್ಷಣ, ಉದ್ಯೋಗದ ನೆಪದಲ್ಲಿ ಪರ ಊರಿನಲ್ಲಿ ನೆಲೆಸಿದ್ದಾರೆ. ನನ್ನನ್ನು ಕಾಳಜಿಯಿಂದ ನೋಡಿಕೊಳ್ಳಲು ಯಾರೂ ಇಲ್ಲ. ದಯವಿಟ್ಟು ನನಗೆ ದಯಾಮರಣ ಕರುಣಿಸಿ ಎಂದು ಕೇಳಿಕೊಂಡರು.

ಈ ಸಂದರ್ಭ ಇಡೀ ಸಭಾಂಗಣವೇ ಕೆಲವು ಕ್ಷಣಗಳ ಕಾಲ ಸ್ತಬ್ಧಗೊಂಡಿತ್ತು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ವ್ಯವಸ್ಥೆಯ ಭರವಸೆ ನೀಡಿದ ಬಳಿಕ ಎಲ್ಲರೂ ನಿರಾಳವಾದರು.

Zp_elders_day_2 Zp_elders_day_3 Zp_elders_day_4 Zp_elders_day_5 Zp_elders_day_6 Zp_elders_day_7 Zp_elders_day_8

ಕಾರ್ಯಕ್ರಮದಲ್ಲಿ ಭಾಗವಸಿದ ಇತರ ವೃದ್ಧರು ಸಿಟಿ ಬಸ್‌ಗಳಲ್ಲಿ ಮೆಟ್ಟಿಲುಗಳನ್ನು ತಗ್ಗುಗೊಳಿಸುವಂತೆ ಹಾಗೂ ಹಿರಿಯರಿಗೆ ಸ್ಲೀಪರ್ ಮತ್ತು ಓಲ್ವೊ ಬಸ್‍‍ಗಳಲ್ಲಿ ರಿಯಾಯಿತಿ ನೀಡಬೇಕು ಎಂಬ ಇತರ ಬೇಡಿಕೆಗಳನ್ನು ಮುಂದಿಟ್ಟರು. ನರ್ಮ್ ಯೋಜನೆಯಡಿಯಲ್ಲಿ 18 ಸಿಟಿ ಬಸ್‌ಗಳಿಗೆ ಅನುಮೋದನೆ ದೊರೆತಿದ್ದು, ಅವುಗಳಲ್ಲಿ ತಗ್ಗು ಮೆಟ್ಟಿಲುಗಳನ್ನು ಅಳವಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.

ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಿಧ್ಯಾ, ಜಿಲ್ಲಾ ಅಯುಷ್ ವೈಧ್ಯಾಧಿಕಾರಿ ಡಾ.ದೇವದಾಸ್ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment