ಮಂಗಳೂರು, ಆ.1: ಪ್ರಸಕ್ತ ಸಾಲಿನ ಕರಾವಳಿ ಉತ್ಸವವನ್ನು ಕದ್ರಿ ಪಾರ್ಕ್ ಸುತ್ತಮುತ್ತಲಿನ ತೋಟ ಗಾರಿಕಾ ಇಲಾಖೆಗೆ ಸೇರಿದ ಸುಮಾರು 4 ಎಕರೆ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಬುಧವಾರ ಕರಾವಳಿ ಉತ್ಸವ ಪೂರ್ವ ಭಾವಿ ತಯಾರಿ ಕುರಿತ ಪ್ರಥಮ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳ ಸಲಹೆಯ ಮೇರೆಗೆ ಈ ನಿರ್ಣಯಕ್ಕೆ ಬರಲಾಗಿದೆ.
ಆರಂಭದಲ್ಲಿ ಕರಾವಳಿ ಉತ್ಸವವನ್ನು ಮಂಗಳಾ ಸ್ಟೇಡಿಯಂ ಸಮೀಪದ ಕರಾವಳಿ ಉತ್ಸವ ಮೈದಾನದಲ್ಲಿ ಹಾಗೂ ಕದ್ರಿ ಪಾರ್ಕ್ನಲ್ಲಿ ಜೊತೆಯಾಗಿ ನಡೆಸುವ ಸಲಹೆ ಸಭೆಯಲ್ಲಿ ವ್ಯಕ್ತವಾ ಯಿತು. ಆದರೆ ಕರಾವಳಿ ಉತ್ಸವ ಮೈದಾನದ ಸುಮಾರು ಅರ್ಧದಷ್ಟು ಭಾಗವನ್ನು ಈಗಾಗಲೇ ಕ್ರೀಡಾಪಟುಗಳಿಗೆ ವಾರ್ಮ್ಅಪ್ ಪ್ರದೇಶವಾಗಿ ಪರಿವರ್ತಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರದರ್ಶನ ಮಳಿಗೆಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೆ ಜಾಗದ ಸಮಸ್ಯೆ ತಲೆ ದೋರಬಹುದು. ಇದರಿಂದ ಸರಕಾರಿ ಇಲಾಖೆಗಳ ಪ್ರದರ್ಶನ ಮಳಿಗೆಗಳು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕದ್ರಿ ಪಾರ್ಕ್ನಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯಿತು.
ಈ ನಡುವೆ ಸಂಪೂರ್ಣ ಕರಾವಳಿ ಉತ್ಸವವನ್ನು ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಸ್ಥಳಾಂತರಿಸುವ ಸಲಹೆಯೂ ವ್ಯಕ್ತವಾಯಿತು. ಆದರೆ ಅದು ನಗರದಿಂದ ದೂರವಿರುವ ಕಾರಣ ಅಲ್ಲಿಗೆ ಜನಸಂದಣಿಯನ್ನು ನಿರೀಕ್ಷಿಸಲು ಸಾಧ್ಯವಾಗದು ಎಂಬ ನೆಲೆಯಲ್ಲಿ ಚರ್ಚೆ ಮುಂದುವರಿಯಿತು.
ಈ ಸಂದರ್ಭ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಯತೀಶ್ ಬೈಕಂಪಾಡಿ ಮಾತನಾಡಿ, ಕದ್ರಿ ಪಾರ್ಕ್ನ ಸುತ್ತಮುತ್ತಲ ಹೆದ್ದಾರಿ ಪಕ್ಕದಲ್ಲಿ ಸಾಕಷ್ಟು ಜಾಗವಿದ್ದು, ಆ ಪ್ರದೇಶವನ್ನು ಅಭಿವೃದ್ಧಿಪಡಿಸಿಕೊಂಡು ಸಂಪೂರ್ಣ ಕರಾವಳಿ ಉತ್ಸವ ನಡೆಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.
ಇದಕ್ಕೆ ಸಚಿವ ರೈ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸಭೆಯಲ್ಲಿದ್ದ ಬಹುತೇಕರಿಂದ ಸಹಮತ ವ್ಯಕ್ತವಾಯಿತು. ತೋಟಗಾರಿಕಾ ಇಲಾಖೆಯ ಅಧಿಕಾರಿ ಮಾತನಾಡಿ, ಕದ್ರಿ ಪಾರ್ಕ್ನ ಸುತ್ತಮುತ್ತ ತೋಟ ಗಾರಿಕಾ ಇಲಾಖೆಗೆ ಸೇರಿದ ಸುಮಾರು 4 ಎಕರೆ ಭೂಮಿ ಇದೆ ಎಂದರು.
ಸಚಿವ ರೈ ಪ್ರತಿಕ್ರಿಯಿ ಸುತ್ತಾ, ಕರಾವಳಿ ಉತ್ಸವವನ್ನು ಒಂದೇ ಕಡೆ ಆಕರ್ಷಣೀಯವಾಗಿ ಮಾಡುವ ಮೂಲಕ ಹೆಚ್ಚಿನ ಜನರನ್ನು ನಿರೀಕ್ಷಿಸಲು ಸಾಧ್ಯವಾಗಲಿದೆ. ಹಾಗಾಗಿ ಕದ್ರಿ ಪಾರ್ಕ್ ಸುತ್ತಮುತ್ತಲಲ್ಲೇ ನಡೆಸುವ ಬಗ್ಗೆ ತೀರ್ಮಾನಿಸುವುದು ಸೂಕ್ತ ಎಂದರು.
ಡಿಸೆಂಬರ್ 23ರಂದು ಉದ್ಘಾಟನೆಯೊಂದಿಗೆ ಆರಂಭಗೊಳ್ಳುವ ಕರಾವಳಿ ಉತ್ಸವ ಜನವರಿ 3ರಂದು ಒಂದು ದಿನದ ಬೀಚ್ ಉತ್ಸವದೊಂದಿಗೆ ಸಮಾರೋಪಗೊಳ್ಳಲಿದ್ದು, ಒಟ್ಟು 45 ದಿನಗಳ ಕಾಲ ವಸ್ತುಪ್ರದರ್ಶನ ಮುಂದುವರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕೊಂಕಣಿ ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಎಕ್ಸ್ಪರ್ಟ್ ಕಾಲೇಜಿನ ಮುಖ್ಯಸ್ಥ ನರೇಂದ್ರ ನಾಯಕ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಮೂಡಾ ಆಯುಕ್ತ ನಝೀರ್ ಹಾಗೂ ಕರಾವಳಿ ಉತ್ಸವ ಸಮಿತಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಳೆದ ವರ್ಷ 1.06 ಕೋಟಿ ರೂ. ವೆಚ್ಚ.
ಕಳೆದ ವರ್ಷ ಕರಾವಳಿ ಉತ್ಸವಕ್ಕೆ ಒಟ್ಟು 1.06 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ರಾಜ್ಯ ಸರಕಾರದ 50 ಲಕ್ಷ ರೂ.ಗಳ ಅನುದಾನ, 35 ಲಕ್ಷ ರೂ. ಟೆಂಡರ್ ಹಣ, 22.65 ಲಕ್ಷ ರೂ. ವಿವಿಧ ದೇಣಿಗೆ ಸೇರಿದಂತೆ ಒಟ್ಟು 107 ಕೋಟಿ ರೂ.ಗಳಲ್ಲಿ ಸುಮಾರು 106 ಕೋಟಿ ರೂ. ಗಳು ಖರ್ಚಾಗಿದೆ. ಕಳೆದ ವರ್ಷದ ಕರಾ ವಳಿ ಉತ್ಸವದಲ್ಲಿ ಬೀಚ್ ಉತ್ಸವಕ್ಕೆ 28 ಲಕ್ಷ ರೂ. ವೆಚ್ಚ ಮಾಡಲಾಗಿದ್ದರೆ ಕಬಡ್ಡಿ ಕ್ರೀಡೆಗೆ 17 ಲಕ್ಷ ರೂ. ವೆಚ್ಚವಾಗಿದೆ. ಎಲ್ಲಾ ವೆಚ್ಚಗಳ ಬಳಿಕ 1 ಲಕ್ಷದ 7 ಸಾವಿರ ರೂ.ಗಳಷ್ಟು ಉಳಿಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದರು.




