ಮುಂಬೈ

ಸಾಮಾಜಿಕ ಮಾಧ್ಯಮವಿಲ್ಲದ ಕಾಲದಲ್ಲೂ ನೆಹರೂ-ಇಂದಿರಾ ಜನಪ್ರಿಯರಾಗಿದ್ದರು ಮೋದಿಗೆ ಶಿವಸೇನೆಯ ಚುಚ್ಚು ನುಡಿ

Pinterest LinkedIn Tumblr

fb_modiಮುಂಬೈ, ಸೆ.29: ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಯ ಭೇಟಿ ಸಹಿತ ತನ್ನ ಎರಡನೆಯ ಉನ್ನತ ಮಟ್ಟದ ಅಮೆರಿಕ ಪ್ರವಾಸದಿಂದ ಸ್ವದೇಶದತ್ತ ಮುಖಮಾಡಿರುವಂತೆಯೇ, ಜವಾಹರ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಸಹ ಸಾಮಾಜಿಕ ಮಾಧ್ಯಮವಿಲ್ಲದೆಯೇ ಜನಪ್ರಿಯರಾಗಿದ್ದರೆಂದು ಹೇಳುವ ಮೂಲಕ ದೀರ್ಘಕಾಲೀನ ಮಿತ್ರ ಪಕ್ಷ ಶಿವಸೇನೆ ಮೋದಿಯವರನ್ನು ಕುಟುಕಿದೆ.ಮೋದಿ ಜನಪ್ರಿಯರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಹೋದಲ್ಲೆಲ್ಲ (ಅಮೆರಿಕದಲ್ಲಿ) ಮೋದಿ ಮೋದಿ ಎಂಬ ಮಂತ್ರ ಜಪಿಸಲ್ಪಟ್ಟಿದೆ. ಆದರೆ, ಇಂದಿನಂತೆ ಸಾಮಾಜಿಕ ಮಾಧ್ಯಮವಿಲ್ಲದ ಕಾಲದಲ್ಲೂ ನೆಹರೂ ಹಾಗೂ ಇಂದಿರಾ ಅಷ್ಟೇ ಜನಪ್ರಿಯರಾಗಿದ್ದರು ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಇಂದಿನ ಸಂಪಾದಕೀಯ ಹೇಳಿದೆ.ಪಿ.ವಿ.ನರಸಿಂಹ ರಾವ್ ಹಾಗೂ ಮನಮೋಹನ ಸಿಂಗ್‌ರಂತಹ ಹಿಂದಿನ ಕಾಂಗ್ರೆಸ್ ಪ್ರಧಾನಿಗಳ ಕೊಡುಗೆಯನ್ನು ಮರೆಯುವಂತಿಲ್ಲವೆಂದೂ ಅದು ತಿಳಿಸಿದೆ.

ಪ್ರಧಾನಿ ಮೋದಿ ವಿದೇಶಗಳಲ್ಲಿ ಅಸಾಮಾನ್ಯ ಜನಪ್ರಿಯತೆ ಹೊಂದಿದ್ದಾರೆ. ಆದರೆ, ನರಸಿಂಹ ರಾವ್ ಹಾಗೂ ಮನಮೋಹನ್ ಭಾರತದ ಆರ್ಥಿಕ ಪ್ರಗತಿಗೆ ಅಡಿಗಲ್ಲು ಹಾಕಿದ್ದರೆಂಬುದನ್ನು ನಾವು ಮರೆಯಬಾರದು. ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸಿದ ಸಮಯದಲ್ಲಿ ಅವರು ಆರ್ಥಿಕ ಪ್ರಗತಿಗೆ ರೂಪ ಹಾಗೂ ದಿಕ್ಕನ್ನು ನೀಡಿದ್ದರು. ಅವರು ರಾಜಕೀಯ ವಿರೋಧಿಗಳಾಗಿದ್ದರೂ, ನಾವು ಇದಕ್ಕೆ ಕುರುಡಾಗಬಾರದು. ಅವರಿದನ್ನು ಛಿದ್ರ ಹಾಗೂ ಪೆಡಸು ಮೈತ್ರಿಕೂಟದೊಂದಿಗೆ ಹೆಣಗುತ್ತ ಸಾಧಿಸಿದ್ದಾರೆಂದು ಸಂಪಾದಕೀಯ ಹೊಗಳಿದೆ.ಪ್ರಸಾರ ಹಾಗೂ ದೂರಸಂಪರ್ಕ ಕ್ರಾಂತಿಯು ಮೊದಲು ಇಂದಿರಾಗಾಂಧಿಯವರ ಆಡಳಿತದ ವೇಳೆ ನಡೆಯಿತು. ಅದನ್ನು ಅವರ ಉತ್ತರಾಧಿಕಾರಿ ಹಾಗೂ ಪುತ್ರ ರಾಜೀವ ಗಾಂಧಿ ಮುಂದುವರಿಸಿ, ಪ್ರತಿ ಗ್ರಾಮಕ್ಕೆ ದೂರವಾಣಿ ದೊರೆಯುವಂತೆ ಮಾಡಿದರೆಂದೂ ಶಿವಸೇನೆ ಹೇಳಿದೆ.ವಿದೇಶಗಳಲ್ಲಿ ಮೋದಿ ಜನಪ್ರಿಯರಾಗಿರುವುದು ಹಾಗೂ ಭಾರತವು ಜಾಗತಿಕವಾಗಿ ಗುರುತಿಸುವಂತಾದುದು ನಮಗೆಲ್ಲ ಹೆಮ್ಮೆಯುಂಟುಮಾಡಿದೆ. ಅವರನ್ನು ಅಭಿನಂದಿಸಲೇ ಬೇಕು ಎಂದು ಪ್ರಧಾನಿಯನ್ನು ಹೊಗಳುವ ಮೂಲಕ ಅದು ಸಂಪಾದಕೀಯವನ್ನು ಕೊನೆಗೊಳಿಸಿದೆ.ಪ್ರಧಾನಿ ಮೋದಿ ಸೋಮವಾರ ತನ್ನ 5 ದಿನಗಳ ಅಮೆರಿಕ ಪ್ರವಾಸವನ್ನು ಮುಗಿಸಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಅವರು, ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದರು ಹಾಗೂ ಸಿಲಿಕಾನ್ ವ್ಯಾಲಿಯಲ್ಲಿ ತಂತ್ರಜ್ಞಾನ ದಿಗ್ಗಜರನ್ನು ಭೇಟಿಯಾಗಿದ್ದರು. ಅವರು, ಫೇಸ್‌ಬುಕ್ ಹಾಗೂ ಗೂಗಲ್ ಮುಖ್ಯಾಲಯಗಳಿಗೂ ಸಂದರ್ಶನ ನೀಡಿದ್ದರು.

ಶಿವಸೇನೆಯು ಕಳೆದೊಂದು ವರ್ಷದಿಂದ ಸಂಪಾದಕೀಯದಲ್ಲಿ ಬಿಜೆಪಿಯನ್ನು ಸತತ ಟೀಕಿಸುತ್ತಲೇ ಬಂದಿದೆ. ಎರಡೂ ಪಕ್ಷಗಳ 25ಕ್ಕೂ ಹೆಚ್ಚು ವರ್ಷಗಳ ಸಖ್ಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಮುರಿದಿತ್ತಾದರೂ, ಸರಕಾರ ರಚನೆಗಾಗಿ ಮೈತ್ರಿಗೆ ತೇಪೆ ಹಚ್ಚಲಾಗಿತ್ತು.

Write A Comment