ಹೈದ್ರಾಬಾದ್: ತೆಲಂಗಾಣದ ಮಹ್‌ಬೂಬ್‌ನಗರ್ ಜಿಲ್ಲೆಯಲ್ಲಿ ಪೆದ್ದುಕುಂಟ ಎಂಬ ಗ್ರಾಮವಿದೆ. 35 ಕುಟುಂಬಗಳು ಮಾತ್ರ ವಾಸಿಸುವ ಈ ಗ್ರಾಮದಲ್ಲೀಗ ಇರುವುದು ಒಬ್ಬನೇ ಒಬ್ಬ ಗಂಡು. ಇನ್ನುಳಿದ ಮನೆಗಳಲ್ಲಿರುವುದು ಮಹಿಳೆಯರು ಮಾತ್ರ. ಅವರಲ್ಲಿ ಹೆಚ್ಚಿನವರು ವಿಧವೆಯರು. ಹಾಗಾದರೆ ಇಲ್ಲಿನ ಪುರುಷರು ಎಲ್ಲಿಗೆ ಹೋದರು?
ಈ ಪ್ರಶ್ನೆಯ ಉತ್ತರ ಕೇಳಿದರೆ ಹೌದಾ? ಎಂಬ ಉದ್ಗಾರ ಖಂಡಿತ ಬಂದೇ ಬರುತ್ತದೆ. ಇಲ್ಲಿನ ಪುರುಷರೆಲ್ಲರೂ ರಸ್ತೆ ಅಪಘಾತದಲ್ಲೇ ಸತ್ತಿದ್ದು. ಹಾಗಂತ ಒಂದೇ ದಿನ ಸತ್ತವರೂ ಅಲ್ಲ. ಬೇರೆ ಬೇರೆ ದಿನಗಳಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಲ್ಲಿನ ಪುರುಷರು ಸಾವಿಗೀಡಾಗಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ? ಈ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 44 (ಎನ್‌ಹೆಚ್ 44)!
ಹೀಗೆಲ್ಲಾ ಅಪಘಾತ ನಡೆಯಲು ಇಲ್ಲಿ ದೆವ್ವ, ಭೂತಗಳ ಕಾಟವೇನೂ ಇಲ್ಲ. ಇಲ್ಲಿರುವುದು ಚತುಷ್ಪಥ. ಯಾವತ್ತೂ ಹಲವಾರು ವಾಹನಗಳು ರೊಯ್ಯನೆ ಓಡಾಡುವ ರಸ್ತೆ. ಇಲ್ಲಿನ ಗ್ರಾಮಸ್ಥರಿಗೆ ಏನೇ ಕೆಲಸ ಕಾರ್ಯಗಳಿದ್ದರೂ ಆ ರಸ್ತೆಯನ್ನು ದಾಟಿಯೇ ಹೋಗಬೇಕು. ಹೀಗೆ ರಸ್ತೆ ದಾಟುವಾಗ ಅಪಘಾತಕ್ಕೆ ಈಡಾಗುವವರು ಈ ಗ್ರಾಮಸ್ಥರೇ. ಮನೆಯ ಅವಶ್ಯಕತೆಗಳಿಗಾಗಿ ಹೊರಗೆ ಹೋಗುವವರು ಪುರುಷರೇ ಆಗಿದ್ದ ಕಾರಣ, ಪುರುಷರೇ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
10 ವರುಷಗಳು ಹಿಂದೆ ಅಭಿವೃದ್ಧಿಯ ಸಂಕೇತವೆಂಬಂತೆ ಆ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡಿತ್ತು. ಈ ಗ್ರಾಮಕ್ಕೆ ಒಂದು ಸರ್ವೀಸ್ ರಸ್ತೆ ನಿರ್ಮಿಸುತ್ತೇವೆ ಎಂದು ಸರ್ಕಾರ ಭರವಸೆ ನೀಡಿದ್ದರೂ ಇಲ್ಲಿಯವರೆಗೆ ಆ ರಸ್ತೆ ನಿರ್ಮಾಣವಾಗಿಲ್ಲ. ಆದ್ದರಿಂದಲೇ ಇಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ.
ಪ್ರಸ್ತುತ ಗ್ರಾಮದಲ್ಲೀಗ ಇರುವುದು ಒಬ್ಬನೇ ಒಬ್ಬ ಗಂಡು. ಇನ್ನುಳಿದ 27 ಮಂದಿ ವಿವಿಧ ವಾಹನ ಅಪಘಾತದಲ್ಲಿ ಅಸು ನೀಗಿದರು. ಅಲ್ಲಿದ್ದ ಬೇರೆ ಮೂವರು ಗಂಡಸರು ಪ್ರಾಣ ಭಯದಿಂದ ಬೇರೊಂದು ಗ್ರಾಮಕ್ಕೆ ಪಲಾಯನ ಮಾಡಿದರು. ಇದೀಗ ಅಲ್ಲಿ ಉಳಿದಿರುವ ಏಕೈಕ ಪುರುಷನ ಹೆಸರು ಥೈಯ್ಯಾ ಕೋರ್ರ. ಈತನ ಹೆಂಡತಿ ರಸ್ತೆ ಅಪಘಾತದಲ್ಲಿ ಸತ್ತಿದ್ದಾಳೆ. ಐದು ವರ್ಷದ ಮಗನನ್ನು ಸಾಕುವುದಕ್ಕಾಗಿ ಕೋರ್ರ ಇಲ್ಲೇ ಕಷ್ಟಪಡುತ್ತಿದ್ದಾರೆ. ತಿಂಗಳುಗಳ ಹಿಂದೆಯಷ್ಟೇ ಇಲ್ಲಿ ನಡೆಸ ರಸ್ತೆ ಅಪಘಾತವೊಂದರಲ್ಲಿ ಗ್ರಾಮಸ್ಥನೊಬ್ಬ ಸಾವಿಗೀಡಾಗಿದ್ದ. ರಾಷ್ಟ್ರೀಯ ಹೆದ್ದಾರಿಯಿಂದಾಗಿ ಇಲ್ಲಿ ಸಾವು ಸಂಭವಿಸುತ್ತದೆ ಎಂದು ದೂರು ನೀಡುವುದಕ್ಕಾಗಿ ಈತ ಸರ್ಕಾರಿ ಕಚೇರಿಗೆ ತೆರಳಿದ್ದನು. ಹೋಗುವ ವೇಳೆ ವಾಹನ ಗುದ್ದಿ ಆತನೂ ಮರಣವನ್ನಪ್ಪಿದ್ದನು.
ಈ ಗ್ರಾಮದಲ್ಲಿರುವ ಐದು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದಾರೆ. ಅವರು ಮರಳಿ ಬರುವುದಕ್ಕೆ ವಿಳಂಬವಾದರೆ, ಮನಸ್ಸು ಚಡಪಡಿಸುತ್ತದೆ ಅಂತಾರೆ ಅಲ್ಲಿನ ವಿದ್ಯಾರ್ಥಿಯೊಬ್ಬನ ಅಮ್ಮ. ಇಷ್ಟೆಲ್ಲಾ ಆದರೂ ಸರ್ಕಾರ ಸರ್ವೀಸ್ ರಸ್ತೆ ನಿರ್ಮಿಸುತ್ತದೆ ಎಂಬ ನಿರೀಕ್ಷೆ ಈ ಗ್ರಾಮಸ್ಥರಲ್ಲಿದೆ. ಆದರೂ ಅದು ಅಷ್ಟು ಬೇಗ ಆಗುವ ಕೆಲಸವೂ ಅಲ್ಲ ಎಂಬುದೂ ಅವರಿಗೆ ಗೊತ್ತಿದೆ.
ಮಹಿಳೆಯರು ಮಾತ್ರ ಇರುವ ಈ ಗ್ರಾಮವೀಗ ‘ಹೈವೇಯಲ್ಲಿನ ವಿಧವೆಯರ ಗ್ರಾಮ’ ಎಂದೇ ಕರೆಯಲ್ಪಡುತ್ತಿದೆ. ಈ ಕಾರಣದಿಂದಾಗಿಯೇ ಹತ್ತಿರದ ಗ್ರಾಮದವರಿಗೂ, ದೀರ್ಘ ದೂರ ವಾಹನ ಚಾಲಕರಿಗೂ ಈ ವಿಧವೆಯರೇ ಆಕರ್ಷಣಾ ಬಿಂದುವಾಗಿದ್ದಾರೆ. ಗಂಡಸರೇ ಇಲ್ಲದ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಎರಗಲು ಕಾಯುವವರೇ ಇಲ್ಲಿದ್ದಾರೆ. ಹೊಟ್ಟೆ ಪಾಡಿಗಾಗಿ ಇಲ್ಲಿನ ಮಹಿಳೆಯರೂ ವೇಶ್ಯಾವಾಟಿಕೆಗೆ ಇಳಿದಿದ್ದಾರೆ ಎಂದು ಬಿಬಿಸಿ ಗಾಗಿ ವರದಿ ಮಾಡಿದ ಶ್ರೀರಾಂ ಕಾರಿ ಹೇಳುತ್ತಿದ್ದಾರೆ.
ಕಾರಿ ಅವರ ವರದಿ ಪ್ರಕಟವಾದೊಡನೆ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಆದರೆ ಏನೂ ಬದಲಾವಣೆಯಾಗಿಲ್ಲ. ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಯಾರೂ ಮುತುವರ್ಜಿ ವಹಿಸಿಲ್ಲ.
ಇನ್ನೆಷ್ಟು ಸಾವುಗಳಿಗೆ ಈ ಗ್ರಾಮ ಸಾಕ್ಷಿಯಾಗಬೇಕಿದೆ? ಇನ್ನೆಷ್ಟು ಜನರು ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಳ್ಳಬೇಕಿದೆ? ಅಲ್ಲಿನ ಮಹಿಳೆಯರ ಬವಣೆಗಳನ್ನು ಕೇಳುವವರಾರು? ಈ ಎಲ್ಲ ಪ್ರಶ್ನೆಗಳನ್ನು ಒಡಲಲ್ಲಿ ಬಚ್ಚಿಟ್ಟು ನಿರೀಕ್ಷೆಯ ಕಿರಣಕ್ಕಾಗಿ ಪೆದ್ದುಕುಂಟ ಗ್ರಾಮ ಕಾಯುತ್ತಿದೆ…
ವರದಿ ಕೃಪೆ: ಬಿಬಿಸಿ