ತುಮಕೂರು: ಕಮಲ್ ಹಾಸನ್ ಅಭಿನಯದ ಪುಪ್ಪಕ ವಿಮಾನ ಗೊತ್ತಲ್ಲ. ಅದರಲ್ಲಿ ಭಿಕ್ಷುಕ ಸತ್ತಾಗ, ಆತನ ಗೋಣಿ ಚೀಲ ಕೊಡವಿದಾಗ ನೂರಾರು ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಹೋಗುತ್ತೆ. ಆಗ ಭಿಕ್ಷುಕನ ಶವ ಅಲ್ಲೇ ಬಿಟ್ಟು ಹಣ ಹೆಕ್ಕಲು ಮುಗಿಬೀಳುವ ದೃಶ್ಯ ನೆನಪಿಸಿಕೊಳ್ಳಿ. ಈಗ ಅದನ್ನೇ ಹೋಲುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಒಂದೆಡೆ ನಿನ್ನೆಯಿಂದ ಸವಿತಾ ಎಂಬಾಕೆ ಶವ ಫ್ಯಾನ್ ನಲ್ಲೇ ನೇತಾತುತ್ತಿದ್ದರೆ, ಮತ್ತೊಂದೆಡೆ ಹಣಕ್ಕಾಗಿ ಗಂಡನ ಮತ್ತು ತವರು ಮನೆಯವರು ಜಗಳವಾಡುತ್ತಿದ್ದ ಘಟನೆ ತಮಕೂರಿನ ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ನಡೆದಿದೆ.
ಘಟನೆಯ ವಿವರ:
ಕುಣಿಗಲ್ ನ ಅಂಚೆಪಾಳ್ಯದ ಯತೀಶ್ ಎಂಬಾತನ ಜೊತೆ ಕಳೆದ ವರ್ಷ ಸವಿತಾ ವಿವಾಹ ನಡೆದಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತು, ಸವಿತಾ ಸೋಮವಾರ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಗ ಮೃತದೇಹ ಕೆಳಗಿಳಿಸುವ ಮುನ್ನ ಮಾತಿನ ಚಕಮಕಿ ಶುರುವಾಗಿತ್ತು. ಹಣಕ್ಕಾಗಿ ಗಂಡನ ಮನೆಯವರು, ತವರು ಮನೆಯವರು ಜಗಳದಲ್ಲೇ ತೊಡಗಿದ್ದರು ವಿನಃ, ಶವವನ್ನು ಕೆಳಗಿಳಿಸಲೇ ಇಲ್ಲ.
ಪೊಲೀಸರು ಮಂಗಳವಾರ ಬೆಳಗ್ಗೆ ಬಂದಾಗಲೂ ಸಂಬಂಧಿಕರ ಜಗಳ ಮುಂದುವರಿದಿದ್ದು, ಹಣಕ್ಕಾಗಿ ಶವವನ್ನು ಕೆಳಗಿಳಿಸದೆ ಅಮಾನವೀಯವಾಗಿ ವರ್ತಿಸಿದ ಸಂಬಂಧಿಕರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಪೊಲೀಸರು ಮಹಿಳೆಯ ಶವವನ್ನು ಕೆಳಗಿಳಿಸಿ, ಫೋಸ್ಟ್ ಮಾರ್ಟಮ್ ಗೆ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಜಗಳ ಯಾಕಾಗಿ?
ತಮ್ಮ ಮಗಳಿಗೆ ಮದುವೆ ಮಾಡಿಸಲು ಸುಮಾರು 8 ಲಕ್ಷ ರೂಪಾಯಿ ಖರ್ಚಾಗಿದೆ. ನಮ್ಮ ಮಗಳ ಶವದ ಅಂತ್ಯ ಸಂಸ್ಕಾರ ಮಾಡೋ ಮೊದಲು ಮದುವೆಗೆ ಖರ್ಚು ಮಾಡಿದ 8 ಲಕ್ಷ ರೂಪಾಯಿ ಹಣ ವಾಪಾಸ್ ಕೊಡಿ ಎಂದು ಸವಿತಾ ಮನೆಯವರು, ಗಂಡಿನ ಮನೆಯವರಿಗೆ ತಾಕೀತು ಮಾಡಿದ್ದರು. ಆದರೆ ಗಂಡಿನ ಮನೆಯವರು, ಅದೆಲ್ಲಾ ಈಗ ಸಾಧ್ಯವಿಲ್ಲ ಎಂದು ವಾದಿಸಿದಾಗ ಎರಡೂ ಮನೆಯವರೂ ಹಣಕ್ಕಾಗಿ ಕಿತ್ತಾಟದಲ್ಲೇ ಸಮಯ ಕಳೆದಿದ್ದರು.
-ಉದಯವಾಣಿ