ಕನ್ನಡ ವಾರ್ತೆಗಳು

ಕೊಲ್ಲೂರು ಸಮೀಪದ ಎಲ್ಲೂರಿನಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

Pinterest LinkedIn Tumblr

ಉಡುಪಿ: ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಸಮೀಪದ ಎಲ್ಲೂರಿನ ಸಂತೆಗದ್ದೆಯಲ್ಲಿ ವಿಜಯನಗರ ಕಾಲದ ಹೊಸ ಶಾಸನವೊಂದು ಪತ್ತೆಯಾಗಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪಕರಲ್ಲಿ ಒಬ್ಬನಾದ ಮೊದಲನೇ ಬುಕ್ಕನ ಶಾಸನವಿದು ಎಂದು ತಿಳಿದು ಬಂದಿದೆ.

ಶಕವರ್ಷ 1275 ನೆ ಶುಕ್ಲ ಸಂವತ್ಸರದಲ್ಲಿ ಶಾಸನವನ್ನು ಬರೆಸಲಾಗಿದ್ದು, ಅದು ಕ್ರಿ.ಶ. 1353 ರ ಕಾಲಮಾನಕ್ಕೆ ಸರಿಹೊಂದುತ್ತದೆ. ಶಾಸನವನ್ನು ಒಟ್ಟು 24 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ. ಶಾಸನ ಬುಕ್ಕರಾಯನನ್ನು ಮಹಾ ಮಂಡಳೇಶ್ವರ ಅರಿರಾಯ ವಿಭಾಡ ಭಾಷೆಗೆ ತಪ್ಪದ ರಾಯರ ಗಂಡ ಎಂಬ ವಿಶೇಷಣಗಳೊಂದಿಗೆ, ಶ್ರೀ ವೀರ ಬುಕ್ಕಂಣ ಒಡೆಯನೆಂದು ಸಂಭೋಧಿಸಿದೆ. ಬುಕ್ಕರಾಯನ ಆಳ್ವಿಕೆಯ ಕಾಲದಲ್ಲಿ ಮಲೆಯ ದಂಣಾಯಕ ಆತನ ಪ್ರಧಾನಿಯಾಗಿದ್ದನೆಂದು ಶಾಸನದಲ್ಲಿ ತಿಳಿಸಲಾಗಿದೆ.

Udp_koluru Elluru Inscription-1 (1) Udp_koluru Elluru Inscription-1 (2)

ಶಾಸನದಲ್ಲಿ ಮಾರಮುಂಡಿನ ತಂಮ ಹೆಗಡೆ ಮತ್ತು ಎಡವ ಕೊಲ್ಲಿಯ ತಂಮ ಹೆಗಡೆ ಎಂಬ ಇಬ್ಬರು ಮಾಂಡಲೀಕರನ್ನು ಹೆಸರಿಸಲಾಗಿದೆ. ಇದೊಂದು ದಾನ ಶಾಸನವಾಗಿದ್ದು, ಕೋಟಿಸ್ವರ ದೇವರ ಬದ್ದುರ ರುದ್ರ ಪೂಜೆಗಾಗಿ ನೀಡಿದ ದಾನವನ್ನು ದಾಖಲಿಸಲಾಗಿದೆ. ಶಾಸನೋಕ್ತ `ಬದ್ದುರ’ ಈಗಿನ ಬೈಂದೂರಿನ ಪ್ರಾಚೀನ ಹೆಸರಾಗಿರಬಹುದು. ಶಾಸನದಲ್ಲಿ ರದ್ದನಾಡು ಮತ್ತು ಕಂದಿಕನಾಡು ಎಂಬ ಎರಡು ನಾಡುಗಳನ್ನು ಉಲ್ಲೇಖಿಸಲಾಗಿದೆ. ಈಗಿನ ಕೊಲ್ಲೂರನ್ನು ಎಡವ ಕೊಲ್ಲಿ ಎಂದು ಶಾಸನದಲ್ಲಿ ಹೇಳಲಾಗಿದ್ದು, ಇದು ಇದುವರೆಗೆ ದೊರೆತ ಕೊಲ್ಲೂರಿನ ಪ್ರಾಚೀನ ಉಲ್ಲೇಖವಾಗಿದೆ.

ಶಾಸನದ ಕೊನೆಯಲ್ಲಿ, `ಈ ಧರ್ಮವನ್ನು ಪಾಲಿಸಿದವರಿಗೆ ವಾರಣಾಸಿ ಕ್ಷೇತ್ರದಲ್ಲಿ ಸಹಸ್ರ ಕನ್ಯಾದಾನ ಮತ್ತು ಗೋದಾನವನ್ನು ನೀಡಿದ ಫಲ, ಅಳಿದವಗೆ, ಗಂಗೆಯ ತಡಿಯಲ್ಲಿ ನೂರ ಒಂದು ಕಪಿಲೆಯ ಕೊಂದ ಪಾಪ’ ಎಂದು ಹೇಳಲಾಗಿದೆ. ನಂತರ ಸಂಸ್ಕೃತದಲ್ಲಿ ಅರುವತ್ತು ಸಹಸ್ರ ವರ್ಷ ಕ್ರಿಮಿಯಾಗಿ ಹುಟ್ಟುತ್ತಾರೆ’ ಎಂಬ ಶಾಪಾಶಯವಿದೆ.

 

Write A Comment