ಕರ್ನಾಟಕ

ಅರಶಿನ ಎಲೆಯ ಪತ್ತೋಳಿ

Pinterest LinkedIn Tumblr

patholiನಾಗರ ಪಂಚಮಿ ಹಬ್ಬಕ್ಕೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾಡುವ ವಿಶೇಷ ತಿಂಡಿಯಾಗಿದೆ ಇದು. ಈ ತಿಂಡಿಯನ್ನು ಅರಶಿನ ಎಲೆಯ ಕಡುಬು/ ಅರಶಿನ ಎಲೆಯ ಗೆಣಸಲೆ/ ಪಾನ್ ಪತ್ತೋಳಿ ಎಂದೂ ಹೇಳುತ್ತಾರೆ.

ಬೇಕಾಗುವ ಸಾಮಾಗ್ರಿಗಳು

ಬೆಳ್ತಿಗೆ ಅಕ್ಕಿ -2 ಕಪ್

ತೆಂಗಿನ ಕಾಯಿ (ತುರಿದದ್ದು)- ಒಂದೂವರೆ ಕಪ್

ಬೆಲ್ಲ -ಮುಕ್ಕಾಲು ಕಪ್

ಅರಶಿನ ಎಲೆ (ಎಂಟು)

ಏಲಕ್ಕಿ ಪುಡಿ

ಉಪ್ಪು (ರುಚಿಗೆ ತಕ್ಕಷ್ಟು)

ಮಾಡುವ ವಿಧಾನ

2 ಕಪ್ ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆಗಳ ಕಾಲ ನೆನೆ ಹಾಕಿ. ನೆನೆ ಹಾಕಿದ ಅಕ್ಕಿಯನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಬೇಕು. ನಯವಾಗಿ ರುಬ್ಬಿದ ಹಿಟ್ಟು ಜಾಸ್ತಿ ಗಟ್ಟಿಯೂ ಅಲ್ಲದೆ ನೀರು ನೀರಾಗಿಯೂ ಇರದೆ ಹದವಾಗಿರಬೇಕು.

ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ತುರಿದ ತೆಂಗಿನ ಕಾಯಿಗೆ ಮುಕ್ಕಾಲು ಕಪ್ ಬೆಲ್ಲ (ಪುಡಿ ಮಾಡಿದ್ದು) ಹಾಕಿ ಬೆರೆಸಿ. ಬೆಲ್ಲ ಮತ್ತು ತೆಂಗಿನ ತುರಿ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ.

ಆಮೇಲೆ ತೊಳೆದು ಒರೆಸಿಟ್ಟಿರುವ ಅರಶಿನ ಎಲೆಯಲ್ಲಿ ಅಕ್ಕಿ ಹಿಟ್ಟನ್ನು ಸವರಿ. ಅದರ ಮಧ್ಯೆ ಬೆಲ್ಲ ಹಾಗು ಕಾಯಿತುರಿ ಮಿಶ್ರಣವನ್ನು ಹರಡಿ ಎಲೆಯನ್ನು ಲಂಬವಾಗಿ ಮಡಚಬೇಕು.

ಹೀಗೆ ಮಡಚಿದ ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ ತಣ್ಣಗಾದ ಮೇಲೆ (ತುಪ್ಪ ಸೇರಿಸಿ) ಸವಿಯಬಹುದು.

Write A Comment