ಕನ್ನಡ ವಾರ್ತೆಗಳು

ಹಜ್ಜಾಜ್‌ಗಳ ಪ್ರಥಮ ತಂಡ ಮಂಗಳೂರಿಗೆ ಆಗಮನ : ಹಜ್ ಯಾತ್ರೆಯ ಅನುಭವಗಳನ್ನು ಹಂಚಿಕೊಂಡ ಯಾತ್ರಿಗಳು

Pinterest LinkedIn Tumblr

Hajj_Teem_Return_1

ಮಂಗಳೂರು, ಸೆ.29: ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಪವಿತ್ರ ಹಜ್ ಯಾತ್ರೆಗೆ ತೆರಳಿದ್ದ ಹಜ್ಜಾಜ್‌ಗಳ ಪ್ರಥಮ ತಂಡ ಸೋಮವಾರ ಮುಸ್ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

134 ಹಾಜಿಗಳನ್ನು ಹೊತ್ತ ಏರ್‌ನಾಝ್ ವಿಮಾನವು ಸಂಜೆ 6:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಪರಾಹ್ನ 2:30ಕ್ಕೆ ಆಗಮಿಸಬೇಕಾಗಿದ್ದ ವಿಮಾನವು 4 ಗಂಟೆ ವಿಳಂಬವಾಗಿ ಆಗಮಿಸಿದ್ದರಿಂದ ಹಜ್ಜಾ ಜ್‌ಗಳನ್ನು ಬರಮಾಡಿಕೊಳ್ಳಲು ಆಗಮಿಸಿದ ಕುಟುಂಬಸ್ಥರು ಕಾದು ಸುಸ್ತಾದರು. ಈ ಬಾರಿ ಮಂಗಳೂರಿನಿಂದ 670 ಯಾತ್ರಿಗಳು ಹಜ್ ಯಾತ್ರೆ ಕೈಗೊಂಡಿದ್ದರು.

ಪತ್ರಕರ್ತರೊಂದಿಗೆ ಮಾತನಾಡಿದ ಹಜ್ಜಾಜ್‌ಗಳಲ್ಲಿ ಹೆಚ್ಚಿನವರು ಹಜ್ ಸಮಿತಿಯವರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಊಟೋಪಚಾರ, ವಸತಿ, ಸೇವೆ ಸಹಿತ ವಿವಿಧ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Hajj_Teem_Return_2 Hajj_Teem_Return_3 Hajj_Teem_Return_4 Hajj_Teem_Return_5 Hajj_Teem_Return_6 Hajj_Teem_Return_7 Hajj_Teem_Return_8 Hajj_Teem_Return_9 Hajj_Teem_Return_10 Hajj_Teem_Return_11 Hajj_Teem_Return_12 Hajj_Teem_Return_13 Hajj_Teem_Return_14

ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ, ಬೆಂಗಳೂರು ಹಜ್ ಕಮಿಟಿಯ ಸಹಾಯಕ ಅಧಿಕಾರಿ ಫೈರೋಝ್ ಬಾಷ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ, ಎಸ್.ಎಂ.ರಶೀದ್ ಹಾಜಿ, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಉಡುಪಿ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಹಜ್ ನಿರ್ವಹಣಾ ಸಮಿತಿಯ ಸದಸ್ಯ ಯಹ್ಯಾ ನಕ್ವ ಮಲ್ಪೆ, ಸಿ.ಮುಹಮ್ಮದ್ ಹಾಜಿ, ಬಿ.ಎಸ್.ಬಶೀರ್ ಹಾಜಿ, ಐ.ಮೊಯ್ದಿನಬ್ಬ ಹಾಜಿ, ಬಜ್ಪೆ ಹನೀಫ್, ಫಝಲ್ ಮುಹಮ್ಮದ್ ಪುತ್ತೂರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅನುಭವಗಳನ್ನು ಹಂಚಿಕೊಂಡ ಯಾತ್ರಿಗಳು :

ಮಿನಾ ಹಾಗೂ ಮಕ್ಕಾ ದುರಂತದ ಸಂದರ್ಭ ಸೌದಿ ಸರಕಾರ ಉತ್ತಮ ವಾಗಿ ಸ್ಪಂದಿಸಿದೆ. ಮಿನಾ ಕಾಲ್ತುಳಿತ ವಿಪರೀತ ಜನ ಸಂದಣಿಯಿಂದ ಆಗಿವೆ. ಕೆಲವರು ಅಲ್ಲಿನ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ನೂಕುನುಗ್ಗಲು ಉಂಟಾಗಲು ಕಾರಣವಾಯಿತು -ಡಾ.ಬೀರಾನ್ ಮೊಯ್ದಿನ್, ಪಿ.ಎ.ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ.

ನಾವು ತವಾಫ್ ಮಾಡಲು ಸಿದ್ಧತೆಯಲ್ಲಿರುವಾಗಲೇ ಪ್ರಖರವಾದ ಮಿಂಚಿನ ಬೆಳಕು ಕಾಣಿಸಿಕೊಂಡಿತು. ಅದರ ಬೆನ್ನಲ್ಲೇ ಗುಡುಗಿನ ಸದ್ದು ಕೇಳಿಸಿತು. ಆ ಸದ್ದಿನ ಜೊತೆಯಲ್ಲೇ ಬೃಹತ್ ಗಾತ್ರದ ಕ್ರೇನ್‌ವೊಂದು ನಮ್ಮ ಹಿಂದುಗಡೆ ಉರುಳಿಬಿತ್ತು. ನಮಗೆ ಮತ್ತು ಆ ಘಟನಾ ಸ್ಥಳಕ್ಕೆ 40 ಅಡಿಗಳ ಅಂತರ ಮಾತ್ರವಿತ್ತು. ಕ್ಷಣಾರ್ಧದಲ್ಲಿ ಕೆಲವರು ಸ್ಥಳದಲ್ಲೇ ಅಸುನೀಗಿದರೆ, ಮತ್ತೆ ಕೆಲವರು ಗಾಯಗೊಂಡು ಬಿದ್ದಿದ್ದರು. ಆ ಕ್ಷಣ ಎಂದೂ ಮರೆಯಲು ಸಾಧ್ಯವಿಲ್ಲ -ಮುಹಮ್ಮದ್ ಬಶೀರುದ್ದೀನ್, ನಿವೃತ್ತ ಸಹಾಯ ಕೃಷಿ ನಿರ್ದೇಶಕ.

ಮಿನಾ ದುರಂತದಲ್ಲಿ ನನ್ನ ಹತ್ತಿರದ ವಸತಿಯಲ್ಲಿದ್ದ ಮೂವರ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದರು. ಮತ್ತೋರ್ವ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೂರನೆ ವ್ಯಕ್ತಿ ಎಲ್ಲಿದ್ದಾರೆ, ಏನಾಗಿದ್ದಾರೆ ಎಂದು ನನಗೆ ತಿಳಿಯಲು ಅಲ್ಲಿಂದ ಹಿಂದಿರುಗುವವರೆಗೂ ಸಾಧ್ಯವಾಗಿಲ್ಲ -ಅಬ್ದುರ್ರಝಾಕ್, ಗಂಜಿಮಠ ನಿವಾಸಿ.

ಈ ಬಾರಿಯ ಯಾತ್ರೆ ನನ್ನ ಜೀವನದಲ್ಲೇ ಮರೆಯಲಾಗದಂತಹ {ಅಲ್ಲಿ ನಡೆದ ಘಟನೆಗಳಿಂದ (ನೋವಿನ) } ಅನುಭವವನ್ನು ನೀಡಿತ್ತು. ಆದರೂ ನಾನು ನನ್ನ ಜೀವಿತ ಕಾಲದವರೆಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಿಸಿಕೊಂಡು ಹಜ್ಜ್ ಭೇಟಿಯನ್ನು ನಿರಂತರವಾಗಿ ಮಾಡುತ್ತೇನೆ. ಇದು ನನ್ನ ಜೀವನದ ಸಂಕಲ್ಪ. – ಪಿ.ಪಿ.ಮಜೀದ್ – ಉದ್ಯಮಿ ಮಂಗಳೂರು ದಕ್ಕೆ.

Write A Comment