ಬೆಂಗಳೂರು, ಸೆ.27: ಮುಂದಿನ ವರ್ಷದಿಂದ ರಾಜ್ಯ ಸರಕಾರದಿಂದಲೇ ವಿಶ್ವಕರ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಕಟಿಸಿದ್ದಾರೆ.
ರವಿವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಜಯಂತಿಗೆ ಸಾರ್ವತ್ರಿಕ ರಜೆ ಘೋಷಿಸಬೇಕೆಂಬ ವಿಶ್ವಕರ್ಮ ಸಮಾಜದ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.
ವಿಶ್ವಕರ್ಮ ಜಯಂತಿಗೆ ರಾಜ್ಯ ಸರಕಾರ ರಜೆ ಘೋಷಿಸಿದರೆ ಆಡಳಿತ ವ್ಯವಸ್ಥೆಯಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿರುವ ವಿಶ್ವಕರ್ಮರಿಗೆ ಏನು ಲಾಭವಾಗುತ್ತದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬದಲಾಗಿ ರಾಜ್ಯ ಸರಕಾರದ ವತಿಯಿಂದಲೇ ವಿಶ್ವಕರ್ಮ ಜಯಂತಿ ಆಚರಿಸೋಣ. ಇದರಿಂದ ಇಡೀ ಸಮುದಾಯ ಸಂಘಟಿತವಾಗಲು ಸಹಕಾರಿಯಾಗುತ್ತದೆ ಎಂದು ಪ್ರಕಟಿಸಿದಾಗ, ಹರ್ಷೋದ್ಗಾರ ಮುಗಿಲು ಮುಟ್ಟಿತು.
ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿರುವ ‘ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ’ದ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಭರವಸೆ ನೀಡಿದರು.
ಹಿಂದುಳಿದ ವಿಶ್ವಕರ್ಮ ಸಮುದಾಯಕ್ಕೆ ನಿಗಮ ಮಂಡಳಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕೆಂಬ ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ.ನಂಜುಂಡಿ ಅವರ ಬೇಡಿಕೆ ನ್ಯಾಯಯುತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ತಿಳಿಸಿದರು.
ಹಿಂ.ವರ್ಗಗಳ ಹಿತ ಚಿಂತನೆ, ಹಿತ ರಕ್ಷಣೆಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಸರಕಾರ ಸಕಾಲದಲ್ಲಿ ವಿಶ್ವಕರ್ಮ ಸಮಾಜದವರಿಗೆ ಮೇಲ್ಮನೆಯಲ್ಲೂ ಪ್ರಾತಿನಿಧ್ಯ ಕಲ್ಪಿಸಲಿದೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರವೇ ಪ್ರಬಲ ಅಸ್ತ್ರ. ಅಧಿಕಾರ-ಸಂಪತ್ತು ಹಾಗೂ ಅವಕಾಶಗಳ ಸಮಾನ ಹಂಚಿಕೆಯಾದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಮಾರಂಭದಲ್ಲಿ ಹೆಸರಾಂತ ಕ್ರಿಕೆಟ್ ಪಟು ಕಪಿಲ್ ದೇವ್ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಬೈರಪ್ಪ ಅವರಿಗೆ ವಿಶ್ವಕರ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಝಾದ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಎಂ.ವಿ.ರಾಜಶೇಖರನ್, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪತ್ರಕರ್ತ ರವಿ ಹೆಗಡೆ, ಸಮಾಜದ ಸ್ವಾಮೀಜಿಗಳು, ಸಂಘದ ಅಧ್ಯಕ್ಷ ಕೆ.ಪಿ.ನಂಜುಂಡಿ ಸೇರಿ ಇನ್ನಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ